ತಂದೆಗೆ ಮಗನೇ ಸರ್ವಸ್ವ, ಮಗನಿಗೆ ಅಪ್ಪನೇ ಪ್ರಪಂಚ. ತಾಯಿ ಇಲ್ಲದಿದ್ದರೂ, ಆ ಕೊರಗು ಬಾರದಂತೆ, ಚಿಕ್ಕಂದಿನಿಂದಲೇ ಮಗನ ಬೇಕು-ಬೇಡಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ, ಅದಕ್ಕೆ ತಕ್ಕಂತೆ ಮಗನನ್ನು ತಯಾರಿ ಮಾಡಿರುವ ತಂದೆ, ಮಗನಿಗಾಗಿ ಎಲ್ಲವನ್ನೂ ತ್ಯಾಗ ಮಾಡಿರುತ್ತಾನೆ. ಇನ್ನು ಮಗನೂ ಕೂಡ ತಂದೆ ಹಾಕಿದ ಗೆರೆಯನ್ನು ದಾಟದ, ತಂದೆ ಹೇಳಿದಂತೆ ನಡೆಯುವ ಪಿತೃವಾಕ್ಯ ಪರಿಪಾಲಕ!
ತಂದೆ-ಮಗನ ಬಾಂಧವ್ಯದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿ ರುವಾಗ, ಇವರಿಬ್ಬರ ಮಧ್ಯೆ ಹುಡುಗಿಯೊಬ್ಬಳ ಪ್ರವೇಶ ವಾಗುತ್ತದೆ. ಅಚ್ಚರಿಯ ತಿರುವೊಂದ ರಲ್ಲಿ ಅಪ್ಪ-ಮಗ ಇಬ್ಬರೂ ಒಂದೇ ಹುಡುಗಿಯನ್ನು ಪ್ರೀತಿಸುತ್ತಿರುತ್ತಾರೆ ಅನ್ನೋ ವಿಷಯ ನೋಡುಗರ ಮುಂದೆ ತೆರೆದುಕೊಳ್ಳುತ್ತದೆ. ಹಾಗಾದ್ರೆ ಮುಂದೇನಾಗುತ್ತೆ ಈ ತ್ರಿಕೋನ ಪ್ರೇಮ ಕಥೆಯಲ್ಲಿ ಹುಡುಗಿ ಯಾರ ಪಾಲಾಗುತ್ತಾಳೆ ಅನ್ನೋದು ಕ್ಲೈಮ್ಯಾಕ್ಸ್.
ಇದು ಈ ವಾರ ತೆರೆಗೆ ಬಂದಿರುವ “ಮೌನಂ’ ಚಿತ್ರದ ಕಥಾಹಂದರ. ಫ್ಲ್ಯಾಶ್ ಬ್ಯಾಕ್‌ನಿಂದ ಶುರುವಾಗುವ “ಮೌನಂ’ ಕಥೆ ಮೊದಲರ್ಧ ಕೊಂಚ ನಿಧಾನವಾಗಿ ಸಾಗುತ್ತ, ದ್ವಿತಿಯಾರ್ಧದಲ್ಲಿ ಒಂದಷ್ಟು ಟರ್ನ್-ಟ್ವಿಸ್ಟ್‌ಗಳನ್ನು ನೀಡುತ್ತ ಒಂದು ಹಂತಕ್ಕೆ ಬಂದು ನಿಲ್ಲುತ್ತದೆ. ಅದು ಹೇಗೆ ಅನ್ನೋದನ್ನ ಚಿತ್ರದಲ್ಲಿಯೇ ನೋಡಿ ತಿಳಿದುಕೊಳ್ಳುವುದು ಒಳಿತು. ಚಿತ್ರದ ಕಥಾಹಂದರ ಚೆನ್ನಾಗಿದ್ದರೂ, ನಿರ್ದೇಶಕರು ಚಿತ್ರಕಥೆ ಮತ್ತು ನಿರೂಪಣೆಯ ಕಡೆಗೆ ಇನ್ನಷ್ಟು ಗಮನ ಹರಿಸಿದ್ದರೆ, ಚಿತ್ರವನ್ನು ಇನ್ನೂ ಪರಿಣಾಮಕಾರಿಯಾಗಿ ತೆರೆಮೇಲೆ ತರುವ ಸಾಧ್ಯತೆಗಳಿದ್ದವು.
ಅಪ್ಪ-ಮಗನ ಬಾಂಧವ್ಯಕ್ಕೆ ಪ್ರೀತಿಯ ಲೇಪನ ಹಚ್ಚಿರುವ ನಿರ್ದೇಶಕರು ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಇನ್ನು ಇಡೀ ಚಿತ್ರದಲ್ಲಿ ನಟಿ ಮಯೂರಿ ಮತ್ತು ಅವಿನಾಶ್ ತಮ್ಮ ಅಭಿನಯದಲ್ಲಿ ಗಮನ ಸೆಳೆಯುತ್ತಾರೆ. ಕಥೆಯ ಪಾತ್ರಕ್ಕೆ ತಕ್ಕಂತೆ ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ಅವಿನಾಶ್, ಬೋಲ್ಡ… ಆ್ಯಂಡ್ ಬ್ಯೂಟಿಫುಲ್ ಆಗಿ ಕಾಣುವ ಮಯೂರಿ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಬಾಲಾಜಿ, ಕೆಂಪೇಗೌಡ ಮತ್ತಿತರ ಕಲಾವಿದರು ನಿರ್ದೇಶಕರ ಆಶಯಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ.
ಚಿತ್ರದ ಹಾಡುಗಳು, ಹಿನ್ನೆಲೆ ಸಂಗೀತ ಚೆನ್ನಾಗಿದೆ. ಛಾಯಾಗ್ರಹಣ, ಸಂಕಲನ ಮತ್ತಿತರ ತಾಂತ್ರಿಕ ಕಾರ್ಯಗಳ ಕಡೆಗೆ ಇನ್ನಷ್ಟು ಗಮನ ನೀಡಬಹುದಿತ್ತು. ಕೆಲವೊಂದು ಸಣ್ಣ-ಪುಟ್ಟ ಸಂಗತಿಗಳನ್ನು ಬದಿಗಿಟ್ಟು ನೋಡಿದರೆ, “ಮೌನಂ’ ಒಂದೊಳ್ಳೆ ಪ್ರಯತ್ನ ಎನ್ನಲು ಅಡ್ಡಿಯಿಲ್ಲ. ತಂದೆ-ಮಗನ ಬಾಂಧವ್ಯದ ನಡುವೆ ಹುಡುಗಿಯೊಬ್ಬಳು ಬಂದಾಗ ಏನೆಲ್ಲ ಆಗುತ್ತೆ ಅನ್ನೋದನ್ನ ನೋಡಿ ತಿಳಿಯುವ ಕುತೂಹಲವಿದ್ದರೆ, “ಮೌನಂ’ ಚಿತ್ರವನ್ನು ಒಮ್ಮೆ ನೋಡಿ ಬರಬಹುದು.
ಚಿತ್ರ: ಮೌನಂ
ನಿರ್ದೇಶನ: ರಾಜ್ ಪಂಡಿತ್
ನಿರ್ಮಾಣ: ಶ್ರೀಹರಿ
ತಾರಾಬಳಗ: ಮಯೂರಿ, ಬಾಲಾಜಿ ಶರ್ಮಾ, ಅವಿನಾಶ್, ರಿತೇಶ್, ನಯನಾ, ಕೆಂಪೇಗೌಡ, ಹನುಮಂತೇಗೌಡ ಮತ್ತಿತರರು.
* ಜಿ.ಎಸ್.ಕೆ ಸುಧನ್