Advertisement

ಮೌನಕ್ರಾಂತಿ ಹರಿಕಾರನಿಗೆ ಎಲ್ಲೆಡೆ ನಮನ

12:21 PM Apr 15, 2017 | Team Udayavani |

ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 126ನೇ ಜನ್ಮದಿನಾಚರಣೆಯನ್ನು ರಾಜಧಾನಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ರಾಜ್ಯ, ಕೇಂದ್ರ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಿದರು. ಅಂಬೇಡ್ಕರ್‌ ಅವರ ತತ್ವಾದರ್ಶಗಳನ್ನು ಪಾಲಿಸಲು ದೇಶದ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

Advertisement

ಯಶವಂತಪುರ ವೃತ್ತವಿನ್ನು “ಸಂವಿಧಾನ ವೃತ್ತ’
ಬೆಂಗಳೂರು:
ದೇಶದಲ್ಲಿ ಅಸಮಾನತೆ ಹಾಗೂ ಅಸ್ಪ್ರಶ್ಯತೆಯಂತಹ ಜ್ವಲಂತ ಸಮಸ್ಯೆಗಳು ಇನ್ನೂ ಜೀವಂತವಾಗಿರುವುದು ಬೇಸರದ  ಸಂಗತಿಯೆಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಭಿಪ್ರಾಯಪಟ್ಟಿದ್ದಾರೆ. 

ಶುಕ್ರವಾರ ಯಶವಂತಪುರ ವೃತ್ತಕ್ಕೆ “ಸಂವಿಧಾನ ವೃತ್ತ’ ಎಂದು ನಾಮಕರಣ ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸಮಾನತೆ, ಅಸ್ಪೃಶ್ಯತೆಯಂತಹ ಪದ್ಧತಿಗಳು ನಿರ್ಮೂಲನೆಯಾದಾಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದರು 

ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್‌ ಹೆಸರನ್ನು ದುರುಪಯೋಗ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಜಯಂತಿಯನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ. ಅಂಬೇಡ್ಕರ್‌ ಅವರ ತತ್ವಾದರ್ಶಗಳನ್ನು ಪಾಲಿಸಲು ದೇಶದ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. -ಯಡಿಯೂರಪ್ಪ ಮಾತನಾಡಿ, ಅಂಬೇಡ್ಕರ್‌ ವಿರುದ್ಧ ಕಾಂಗ್ರೆಸ್‌ ಅಂದು ಸೇಡಿನ ರಾಜಕಾರಣ ಮಾಡಿತ್ತು. ದೇಶಕ್ಕೆ ಸಂವಿಧಾನ ನೀಡಿದಂತಹ ಮಹಾನ್‌ ವ್ಯಕ್ತಿ ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡಿದ ಕಾಂಗ್ರೆಸ್‌ಗೆ ಅವರ ಅನುಯಾಯಿಗಳು ಮತ್ತು ಹಿಂದುಳಿದವರು ತಕ್ಕ ಪಾಠ ಕಲಿಸಬೇಕಿದೆ ಎಂದರು.  ಮಾಜಿ ಸಚಿವ ಗೋವಿಂದ ಕಾರಜೋಳ, ಶಾಸಕ ಅಶ್ವತ್ಥನಾರಾಯಣ ಉಪಸ್ಥಿತರಿದ್ದರು. 

Advertisement

ನಂಜನಗೂಡು ಹಾಗೂ ಗುಂಡ್ಲು ಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಒಳಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಆದರೆ, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿದ್ದು, ಮೈತ್ರಿ ಮಾಡಿಕೊಳ್ಳದಿದ್ದರೆ ಬಿಜೆಪಿ ಗೆಲುವು ಸಾಧಿಸುತ್ತಿತ್ತು. 
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ದಲಿತರ ಸ್ವಾಭಿಮಾನಿ ನಡಿಗೆ, ಬೈಕ್‌ ರ್ಯಾಲಿ ಗಮನ ಸೆಳೆದ ಭೀಮರಥ ಯಾತ್ರೆ ….
ಬೆಂಗಳೂರು:
ಮೊಳಗಿದ ಕ್ರಾಂತಿಗೀತೆ ಮತ್ತು ಸಾಮಾಜಿಕನ್ಯಾಯದ ಘೋಷಣೆಗಳು, ದಲಿತರ ಸ್ವಾಭಿಮಾನಿ ನಡಿಗೆ, ಗಮನಸೆಳೆದ ಭೀಮರಥ ಯಾತ್ರೆ, ಬೈಕ್‌ ರ್ಯಾಲಿ, ಅರಿವಿನ ದೀವಿಗೆ ಹಚ್ಚುವ ವಿಶ್ವಜ್ಞಾನ ದರ್ಶನ ಜಾಥಾ, ನಾಟಕ ಪ್ರದರ್ಶನಗಳು… ನಗರದಲ್ಲಿ ಶುಕ್ರವಾರ ವಿವಿಧ ಸಂಘ-ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 126ನೇ ಜನ್ಮದಿನಾಚರಣೆಯಲ್ಲಿ ಕಂಡುಬಂದ ದೃಶ್ಯಗಳಿವು.

ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮದಿನಾಚರಣೆ ಅಂಗವಾಗಿ ಯಶವಂತಪುರದ ಸರ್ಕಲ್‌ಗೆ “ಸಂಧಾನ ವೃತ್ತ’ ಎಂದು ನಾಮಕರಣ ಹಾಗೂ ಅಂಬೇಡ್ಕರ್‌ ಪ್ರತಿಮೆ ಅನಾವರಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಂಬೇಡ್ಕರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಅಸಮಾನತೆ, ಅಸ್ಪೃಶ್ಯತೆಯಂತಹ ಪದ್ಧತಿಗಳು ಸಮಾಜದಿಂದ ನಿರ್ಮೂಲನೆಯಾದಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು. 

ಕರ್ನಾಟಕ ದಲಿತ ಸಂಘರ್ಷ ಸಮಿತಿ: ಕರ್ನಾಟಕ ದಲಿತ ರಕ್ಷಣಾ ವೇದಿಕೆಗಳು ಪುರಭವನದ ಮುಂಭಾಗದಿಂದ ಕಲಾತಂಡಗಳೊಂದಿಗೆ ಡಾ.ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿಟ್ಟು ಬೃಹತ್‌ ಮೆರವಣಿಗೆ ನಡೆಸಿದರು. ದಲಿತ ಸಂಘರ್ಷ ಸಮಿತಿ (ಸಮತಾವಾದ) ಅಧ್ಯಕ್ಷ ಮಾರಪ್ಪ ನೇತೃತ್ವದಲ್ಲಿ ಬನಪ್ಪ ಪಾರ್ಕ್‌, ಹಡ್ಸನ್‌ ವೃತ್ತದಿಂದ ವಿಧಾನಸೌಧದ ಅಂಬೇಡ್ಕರ್‌ ಪ್ರತಿಮೆ ಮುಂಭಾಗದವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಜಾಥಾದಲ್ಲಿ ಮಾತನಾಡಿದ ಮಾರಪ್ಪ, ಅಂಬೇಡ್ಕರ್‌ ಅವರ ತತ್ವ-ಸಿದ್ಧಾಂತಗಳನ್ನು ಪಾಲಿಸುವುದರ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. 

ಬಿಬಿಎಂಪಿ: ಪಾಲಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೈಸೂರು ಬ್ಯಾಂಕ್‌ ವೃತ್ತದಿಂದ ಬಿಬಿಎಂಪಿ ಕೇಂದ್ರ ಕಚೇರಿವರೆಗೆ ಮೆರವಣಿಗೆ ನಡೆಯಿತು. ಬೊಂಬೆಗಳು, ಪುರಾಣ ಪುರುಷರ ಕಲಾಕೃತಿಗಳು, ಹುಲಿವೇಷ, ಡೊಳ್ಳು ಕುಣಿತ ಪ್ರಮುಖ ಆಕರ್ಷಣೆಯಾಗಿದ್ದವು. ಮೇಯರ್‌ ಜಿ.ಪದ್ಮಾವತಿ, ಆಯುಕ್ತ ಮಂಜುನಾಥ ಪ್ರಸಾದ್‌ ಸೇರಿ ಗಣ್ಯರು ಮೆರವಣಿಗೆಗೆ ಮೆರಗು ತುಂಬಿದರು. 

ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾ ಸಾಂಸ್ಕೃತಿಕ ಅಕಾಡೆಮಿ: ಜಯನಗರ 4ನೆ ಬ್ಲಾಕ್‌ನ ಕಾಂಪ್ಲೆಕ್ಸ್‌ನಿಂದ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನದವರೆಗೆ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಅಂಬೇಡ್ಕರ್‌ ವೇಷ ಧರಿಸಿದ ಮಕ್ಕಳು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ವಿವಿಧ ಶಾಲೆಗಳ ನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ನಡೆದ ಅಂಬೇಡ್ಕರ್‌ ಅವರ ಸ್ತಬ್ಧ ಚಿತ್ರಗಳ ಪ್ರದರ್ಶನ ಆಕರ್ಷಣೀಯವಾಗಿತ್ತು. ಜಾಥಾದಲ್ಲಿ ಚಿತ್ರನಟಿ ರೂಪಿಕಾ, ಪಾಲಿಕೆ ಸದಸ್ಯ ಎನ್‌. ನಾಗರಾಜ್‌, ಪ್ರತಿಷ್ಠಾನದ ಪದಾಧಿಕಾರಿಗಳು ಇದ್ದರು. 

ದಲಿತ ಸಂಘರ್ಷ ಸಮಿತಿ: ಅಧ್ಯಕ್ಷ ಡಾ. ಎನ್‌. ಮೂರ್ತಿ ನೇತೃತ್ವದಲ್ಲಿ ವಿಶ್ವ ಜ್ಞಾನಜ್ಯೋತಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಪುರಭವನದಿಂದ ವಿಧಾನಸೌಧದವರೆಗೆ ಜ್ಞಾನಜ್ಯೋತಿ ಮೆರವಣಿಗೆ ನಡೆಸಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಸಿಹಿ ಹಂಚಿ ಸಂಭ್ರಮಿಸಿದರು. ಮೆರವಣಿಗೆಗೂ ಮುನ್ನ ನಡೆದ ಸಮಾರಂಭದಲ್ಲಿ ಮಾತನಾಡಿದ ಮೂರ್ತಿ, ಜಗತ್ತಿಗೆ ಮಾದರಿಯಾದ ಅಂಬೇಡ್ಕರ್‌ ಅವರ ತತ್ವ-ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದರು.

ರಾಷ್ಟ್ರೋತ್ಥಾನ ಪರಿಷತ್‌: ಕೆಂಪೇಗೌಡ ನಗರ, ಜಗಜೀವನರಾಮ್‌ ನಗರ, ಪಂತರಪಾಳ್ಯ, ಬನಶಂಕರಿ, ಗೋಪಾಲಪುರದ ಕೊಳಗೇರಿ ಪ್ರದೇಶಗಳಲ್ಲಿ ಸ್ವತ್ಛ ಭಾರತ ಅಭಿಯಾನ ನಡೆಯಿತು. ಜಯ ಕರ್ನಾಟಕ ಸಂಘಟನೆಯ ಮುನಿಯಪ್ಪ, ರಾಷ್ಟ್ರೋತ್ಥಾನದ ಜಾಗರಣ ಪ್ರಕಲ್ಪದ ಪ್ರಮುಖ್‌ ವೀರೇಶ್‌ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಕೊಳೆಗೇರಿಗಳಲ್ಲಿ ಸ್ವತ್ಛತಾ ಕಾರ್ಯ ಮಾಡುವುದರೊಂದಿಗೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ: ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಮತ್ತು ಜನಾಂದೋಲನಗಳ ಮಹಾಮೈತ್ರಿ ಸಹಯೋಗದಲ್ಲಿ “ಜನತೆಯ ಹಕ್ಕುಗಳ ದಿನ’ದ ಪ್ರಯುಕ್ತ ಬೃಹತ್‌ ಮೆರವಣಿಗೆ ನಡೆಸಲಾಯಿತು. ಸಾಮಾಜಿಕ ಹೋರಾಟಗಾರ ಎಸ್‌.ಆರ್‌. ಹಿರೇಮಠ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌. ದ್ವಾರಕನಾಥ್‌, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ, ನೂರ್‌ಶಿಧರ್‌ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಎಚ್‌.ಎಸ್‌. ದೊರೆಸ್ವಾಮಿ, ಇಂದಿಗೂ ಸಾಮಾಜಿಕನ್ಯಾಯ ಸಿಕ್ಕಿಲ್ಲ. ಇಂದಿನ ಸರ್ಕಾರಗಳು ಕೇವಲ ದಬ್ಟಾಳಿಕೆ ಮಾಡುತ್ತವೆಯೇ ಹೊರತು ಮತ್ತೇನೂ ಮಾಡುತ್ತಿಲ್ಲ. ನಾವು ಅಂಬೇಡ್ಕರ್‌ರವರ ಆಶಯಗಳನ್ನು ಈಡೇರಿಸುವ ವಾರಸುದಾರರು. ಹಾಗಾಗಿ ನಮ್ಮ ಮುಂದಿನ ಗುರಿ ಸಾಮಾಜಿಕನ್ಯಾಯ ಪ್ರತಿಪಾದಿಸುವುದಾಗಿದೆ ಎಂದು ಹೇಳಿದರು. 

ಸಮತಾ ಸೈನಿಕ ದಳ: ಗುಬ್ಬಿವೀರಣ್ಣ ರಂಗಮಂದಿರ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕಿ ಕಾವಲಮ್ಮ, ಸಾಮಾಜಿಕ ಕಾರ್ಯಕರ್ತರಾದ ನಂಜುಂಡಸ್ವಾಮಿ, ಎಚ್‌. ಚಂದ್ರಪ್ಪ, ಲಘುಮಯ್ಯ, ಮುನಿರಾಜಪ್ಪ, ಡಾ. ವಿಜಿಕುಮಾರ್‌ ಮತ್ತು ಮುರಳಿ ಬಾಲಕೃಷ್ಣನ್‌ ಅವರಿಗೆ “ಭೀಮರತ್ನ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಸಮತಾ ಸೈನಿಕ ದಳದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿದರು. 

ಜಾತಿ ವಿನಾಶ ವೇದಿಕೆ: ದಲಿತರ ಸ್ವಾಭಿಮಾನಿ ದಿನವನ್ನಾಗಿ ಆಚರಿಸಿತು. ದಿನಾಚರಣೆ ಅಂಗವಾಗಿ ಎಸ್‌ಸಿಎಂ ಹೌಸ್‌ನಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣವನ್ನು ಚಾಮರಾಜನಗರದ ಸಂತೆ ಮಾರಳ್ಳಿಯಲ್ಲಿ ನಡೆದ ನರಬಲಿಯಲ್ಲಿ ಮೃತರಾದ ದಲಿತ ಕೃಷ್ಣಯ್ಯ ಮತ್ತು ನಂಜಯ್ಯ ಎಂಬುವವರ ಪತ್ನಿಯರಿಂದ ಉದ್ಘಾಟಿಸಿದ್ದು ವಿಶೇಷವಾಗಿತ್ತು. 

ರಸ್ತೆ ಸಾರಿಗೆ ನಿಗಮ: ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಕೇಂದ್ರ ಕಚೇರಿಗಳು, ಜೆಡಿಯು ಕೇಂದ್ರ ಕಚೇರಿಯಲ್ಲಿ ಅಂಬೇಡ್ಕರ್‌ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬಿಬಿಎಂಪಿಯ ರಾಯಪುರಂ ವಾರ್ಡ್‌ನಲ್ಲಿ ನಡೆದ ಜಾನಪದ ಕಲಾ ಮೇಳ ಗಮನಸೆಳೆಯಿತು. ಡಾ.ಅಂಬೇಡ್ಕರ್‌ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ರವರ 126ನೇ ಜ್ಮದಿನದ ಪ್ರಯುಕ್ತ ರಾಷ್ಟ್ರೀಯಮಟ್ಟದ ಟೆಕ್ನೋ ಪ್ರದರ್ಶನ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next