ಹುಬ್ಬಳ್ಳಿ: 15ನೇ ಹಣಕಾಸಿನಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ಕುರಿತು 16 ನೇ ಹಣಕಾಸು ಆಯೋಗ ಬೆಂಗಳೂರಿಗೆ ಬಂದು ಪರಿಶೀಲಿಸಿ ಆಗಿರುವ ಅನ್ಯಾಯದ ಬಗ್ಗೆ ಶಿಫಾರಸ್ಸು ಮಾಡಿದೆ. ಇದನ್ನು ಕೇಳುವುದು ತಪ್ಪಾ. ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಯಾರಾದರೂ ಒಬ್ಬ ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಿಜೆಪಿ ನಾಯಕರನ್ನು ಕುಟುಕಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸೋಮವಾರ (ನ.04) ಮಾತನಾಡಿದ ಅವರು, 15 ನೇ ಹಣಕಾಸಿನಿಂದ ಏನೆಲ್ಲಾ ಅನ್ಯಾಯ ಆಗಿದೆ ಎಂಬುವುದು ಸ್ಪಷ್ಟವಾಗಿದೆ. ರಾಜ್ಯದಿಂದ ಕೇಂದ್ರಕ್ಕೆ ಪ್ರತಿ ವರ್ಷ ಸುಮಾರು ನಾಲ್ಕುವರೇ ಲಕ್ಷಕ್ಕೂ ಹೆಚ್ಚು ಕೋಟಿ ರೂಪಾಯಿ ತೆರಿಗೆ ಹೋಗುತ್ತದೆ. ಇದಲ್ಲಿ ವಾಪಸ್ಸು ಬರೋದು 55 ರಿಂದ 60 ಸಾವಿರ ಕೋಟಿ ಅಷ್ಟೇ. ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ ಎಂದಾದರೂ ಮಾತನಾಡಿದ್ದಾರೆಯೇ? ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರೆ ಇವರಿಗೆ ರಾಜಕಾರಣ ಅನ್ನಿಸುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.
5,495 ಕೋಟಿ ರೂಪಾಯಿ ವಿಶೇಷ ಅನುದಾನ, ರಿಂಗ್ ರೋಡ್ ಗೆ 3 ಸಾವಿರ ಕೋಟಿ, ಕೆರೆ ಅಭಿವೃದ್ಧಿಗೆ 3 ಸಾವಿರ ಕೋಟಿ ಕೊಡಬೇಕು ಅಂತ ಕೇಳಿದ್ದೆವು. ಒಟ್ಟು 11,495 ಕೋಟಿ ರೂಪಾಯಿ ಕೊಡಬೇಕಿತ್ತು. ಇದರ ಬಗ್ಗೆ ಸಚಿವ ಜೋಶಿ ಮಾತನಾಡಿದ್ದಾರೆಯೇ. ಇದನ್ನು ಕೊಟ್ಟಿದ್ದಾರೆ ಎಂದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಕೊಡದಿದ್ದರೆ ಇವರು ನಿವೃತ್ತಿ ತೆಗೆದುಕೊಳ್ಳುತ್ತಾರೆಯೇ? ಎಂದು ಸವಾಲು ಹಾಕಿದರು.
ಕೋಮುವಾದವೇ ಕಸುಬು
ತಮ್ಮ ಬಗ್ಗೆ ಮಾಜಿ ಸಂಸದ ಪ್ರತಾಪ ಸಿಂಹ ನೀಡಿರುವ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ರೋಷ ವ್ಯಕ್ತಪಡಿಸಿ, ಅವರೊಬ್ಬ ಮಹಾನ್ ಕೋಮುವಾದಿ ಅವರಿಂದ ಮತ್ತೇನು ನಿರೀಕ್ಷೆ ಮಾಡಲು ಸಾಧ್ಯ. ಅವರಿಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲೆ ಗೌರವವಿಲ್ಲ ಎಂದು ಕಿಡಿಕಾರಿದರು.
ಕೋಮುವಾದ ಮಾಡುವುದೇ ಅವರ ಕಸಬು. ಜಾತಿ, ಕೋಮುವಾದ ಮಾಡಿ ರಾಜಕೀಯದಲ್ಲಿ ಬದುಕಲು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ವಿಚಾರ, ವಿಷಯಗಳು ಬೇಕಾಗಿಲ್ಲ. ಕೋಮು ಭಾವನೆ ಕೆರಳಿಸುವುದೇ ಇವರ ಕೆಲಸ ಎಂದು ವಾಗ್ದಾಳಿ ನಡೆಸಿದರು.