Advertisement

ಪಡೀಲ್‌ ಆಸ್ಪತ್ರೆ ಸಂಪರ್ಕದಿಂದ ಹೊರ ಜಿಲ್ಲೆಗೂ ವ್ಯಾಪಿಸಿದ ಸೋಂಕು!

01:34 AM May 09, 2020 | Sriram |

ಮಂಗಳೂರು: ಪಡೀಲ್‌ನ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಕಳೆದ ತಿಂಗಳು ಚಿಕಿತ್ಸೆ ಪಡೆದು ತೆರಳಿದ್ದ ಭಟ್ಕಳದ ಕುಟುಂಬವೊಂ ದನ್ನು ಅಲ್ಲಿ ಕ್ವಾರಂಟೈನ್‌ನಲ್ಲಿ ಇರುವಂತೆ ಆಸ್ಪತ್ರೆ ಹಾಗೂ ಜಿಲ್ಲಾಡಳಿತದ ಕಡೆಯಿಂದ ಮಾಹಿತಿ ನೀಡದಿದ್ದ ಪರಿಣಾಮ, ಇದೀಗ ಭಟ್ಕಳದಲ್ಲಿ ಒಂದೇ ದಿನ 12 ಮಂದಿ ಸಹಿತ ಒಟ್ಟು 13 ಮಂದಿಗೆ ಕೋವಿಡ್-19 ಸೋಂಕು ತಗುಲಿದೆ.

Advertisement

ಫಸ್ಟ್‌ ನ್ಯೂರೋದಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆಯಾಗಿದ್ದಾಗ ಅದರ ಮೂಲ ವನ್ನು ತತ್‌ಕ್ಷಣಕ್ಕೆ ಪತ್ತೆ ಮಾಡುವುದಕ್ಕೆ ಸಂಬಂಧ ಪಟ್ಟವರು ಮುಂದಾಗದಿದ್ದ ಪರಿಣಾಮ, ಅನಂತರದಲ್ಲಿ ದ.ಕ.ದಲ್ಲಿ 14 ಮಂದಿಗೆ ಸೋಂಕು ಪತ್ತೆಯಾಗಿ ಮೂವರ ಸಾವಿಗೂ ಕಾರಣವಾಗಿದೆ. ಅಲ್ಲದೆ ಈ ಆಸ್ಪತ್ರೆಯ ಸಂಪರ್ಕದಿಂದ ಮಂಗಳೂರು ನಗರದಲ್ಲಿ ಸೋಂಕು ಮತ್ತಷ್ಟು ವ್ಯಾಪಿಸುವ ಆತಂಕ ಎದುರಾಗಿದೆ.

ಇದೀಗ ದೂರದ ಉತ್ತರ ಕನ್ನಡದ ಭಟ್ಕಳದಲ್ಲಿಯೂ 13 ಮಂದಿಗೆ ಸೋಂಕು ದೃಢಪಟ್ಟು ಅಲ್ಲಿನ ಜನರ ನಿದ್ದೆಗೆಡಿಸುವುದಕ್ಕೂ ಇದೇ ಆಸ್ಪತ್ರೆಯ ಸಂಪರ್ಕವೇ ಕಾರಣವಾಗಿ ರುವುದು ಗಂಭೀರ ವಿಚಾರ.

ಈ ಪ್ರಕರಣದಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಮೌನದವನ್ನು ಪ್ರಶ್ನಿಸಿ ಸಾರ್ವ ಜನಿಕ ವಲಯ, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿವೆ.

ಮಾಹಿತಿ ನೀಡದೆ ಎಡವಟ್ಟು
ಅಪಸ್ಮಾರದಿಂದ ಬಳಲುತ್ತಿದ್ದ ಭಟ್ಕಳದ ಐದು ತಿಂಗಳ ಮಗುವನ್ನು ಹೆತ್ತವರು ಎ. 20ರಂದು ಫಸ್ಟ್‌ ನ್ಯೂರೋಕ್ಕೆ ಕರೆ ತಂದಿದ್ದರು. ಲಾಕ್‌ಡೌನ್‌ ಜಾರಿಯಲ್ಲಿದ್ದ ಕಾರಣ ಪಾಸ್‌ ಪಡೆದು ಎ. 19ಕ್ಕೆ ಮಂಗಳೂರಿಗೆ ಆಗಮಿಸಿ,ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿ ದ್ದರು. ಮಗುವನ್ನು ಚಿಕಿತ್ಸೆಗೆ ಕರೆ ತಂದ ಒಂದು ದಿನಕ್ಕೂ ಮುನ್ನ ಆ ಆಸ್ಪತ್ರೆ ಸಂಪರ್ಕದಲ್ಲಿದ್ದ ಬಂಟ್ವಾಳದ ಮಹಿಳೆ ಕೋವಿಡ್-19ದಿಂದ ಮೃತ ಪಟ್ಟಿದ್ದಾರೆ.

Advertisement

ಆಗ ಮೃತ ಮಹಿಳೆಯ ಅತ್ತೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸಾ ನಿರತರಾಗಿದ್ದು, ಅವರು ಕೂಡ ಕೊರೊನಾದಿಂದ ಮೃತಪಟ್ಟ ಕೂಡಲೇ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಲಾಗಿತ್ತು.ಎ. 1ರಿಂದ ಎ. 20ರ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಕೇರಳ ರಾಜ್ಯದ ಒಟ್ಟು 79 ಮಂದಿಯ ಬಗ್ಗೆ ನಿಗಾ ವಹಿಸುವಂತೆ ಆಯಾ ಜಿಲ್ಲಾ ಆರೋಗ್ಯ ಇಲಾಖೆಗಳಿಗೆ ತಿಳಿಸಿರುವುದಾಗಿ ಇಲ್ಲಿನ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದರು. ಆದರೆ ಭಟ್ಕಳದ ಮಗು ಕೂಡ ಎ. 20ರಂದು ಚಿಕಿತ್ಸೆ ಪಡೆದಿದ್ದರೂ ಅಲ್ಲಿನ ಜಿಲ್ಲಾಡಳಿತ ಅಥವಾ ಆರೋಗ್ಯ ಇಲಾಖೆಗೆ, ದ.ಕ. ಜಿಲ್ಲಾಡಳಿ ತದಿಂದ ಯಾವುದೇ ಮಾಹಿತಿ ಹೋಗಿರಲಿಲ್ಲ. ಆರೋಗ್ಯ ಇಲಾಖೆ ನೀಡಿದ್ದ ಪಟ್ಟಿಯಲ್ಲಿಯೂ ಭಟ್ಕಳದ ಮಗುವಿನ ಮಾಹಿತಿ ಇರಲಿಲ್ಲ. ಮಗು ಚಿಕಿತ್ಸೆಗೆ ಬಂದಿದ್ದ ವಿಚಾರವನ್ನು ಫಸ್ಟ್‌ ನ್ಯೂರೊ ಆಸ್ಪತ್ರೆಯವರೇ ಜಿಲ್ಲಾಡಳಿತಕ್ಕೆ ಆಗ ನೀಡಿರಲಿಲ್ಲೇ ಎನ್ನುವುದು ಕೂಡ
ಬೆಳಕಿಗೆ ಬರಬೇಕಿದೆ.

ದ.ಕ. ಜಿಲ್ಲಾಡಳಿತದಿಂದ ಉ.ಕ. ಜಿಲ್ಲಾಡಳಿತಕ್ಕೆ ಮಾಹಿತಿ ನೀಡದಿದ್ದ ಕಾರಣಕ್ಕೆ ಭಟ್ಕಳದ ಆರೋಗ್ಯ ಇಲಾಖೆಗೂ ಆ ಕುಟುಂಬವನ್ನು ಕ್ವಾರಂಟೈನ್‌ನಲ್ಲಿ ಇಡಲು ಸಾಧ್ಯ ವಾಗಿರಲಿಲ್ಲ. ಇದರ ಪರಿಣಾಮ ಈಗ ಕಾಣಿಸಿದೆ.

ಆಸ್ಪತ್ರೆಯಲ್ಲಿದ್ದವರ ಬಗ್ಗೆ ಮಾಹಿತಿಯಿಲ್ಲ
ಫಸ್ಟ್‌ ನ್ಯೂರೊ ಸಂಪರ್ಕದಿಂದ 27 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ ಆ ಆಸ್ಪತ್ರೆ ಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರಿಗೆ ಮಾತ್ರ ಇಲ್ಲಿವರೆಗೆ ಕೋವಿಡ್-19 ದೃಢಪಟ್ಟಿರುವುದನ್ನು ಬಹಿರಂಗಪಡಿಸಲಾಗಿದೆ. ಆಶ್ಚರ್ಯವೆಂದರೆ ಮೊದಲ ಪ್ರಕರಣ ವರದಿಯಾದ ಬಳಿಕ ಸೀಲ್‌ಡೌನ್‌ ಮಾಡಲಾಗಿರುವ ಆ ಆಸ್ಪತ್ರೆಯೊಳಗೆ, ಅಲ್ಲಿನ ಸಿಬಂದಿ, ವೈದ್ಯರು, ರೋಗಿ ಗಳು ಸಹಿತ ಸುಮಾರು 200 ಮಂದಿ ಇದ್ದಾರೆ ಎನ್ನಲಾಗಿದೆ. ಆದರೆ ಇಷ್ಟು ಮಂದಿಯ ಕೋವಿಡ್-19 ತಪಾಸಣೆ ವರದಿ ಏನಾಗಿದೆ ಎಂಬುದು ಬಹಿರಂಗವಾಗಿಲ್ಲ. ಏಕೆಂದರೆ, ವಾಸ್ತವದಲ್ಲಿ ಆ ಆಸ್ಪತ್ರೆಯಲ್ಲಿ ಸದ್ಯ ಎಷ್ಟು ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ; ಆ ಪೈಕಿ ವೈದ್ಯರು, ರೋಗಿಗಳು, ಸಿಬಂದಿ ಎಷ್ಟು ಮಂದಿ ಇದ್ದಾರೆ; ಅವರೆಲ್ಲರ ಆರೋಗ್ಯ ಸ್ಥಿತಿ ಹೇಗಿದೆಎನ್ನುವುದು ಇನ್ನೂ ನಿಗೂಢ.

ಭಟ್ಕಳದ ಮಗು, ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಬಗ್ಗೆ ದ.ಕ. ಜಿಲ್ಲಾಡಳಿತದಿಂದ ಮಾಹಿತಿ ಬಂದಿರಲಿಲ್ಲ. ಈ ಕಾರಣಕ್ಕೆ, ಮಗು ಮತ್ತು ಅಲ್ಲಿಗೆ ಭೇಟಿ ನೀಡಿದ್ದ ಹೆತ್ತವರಿಗೆ ತಪಾಸಣೆ ಅಥವಾ ಕ್ವಾರಂಟೈನ್‌ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಫಸ್ಟ್‌ ನ್ಯೂರೊಗೆ ಹೋಗಿದ್ದ ಆ ಕುಟುಂಬದವರು ಸೇರಿದಂತೆ ಭಟ್ಕಳದಲ್ಲಿ ಒಟ್ಟು 13 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
– ಡಾ| ಅಶೋಕ್‌ ಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ, ಉ.ಕ. ಜಿಲ್ಲೆ

ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಎ. 1ರಿಂದ 20ರ ನಡುವೆ ಚಿಕಿತ್ಸೆ ಪಡೆದು ಬಿಡುಗಡೆಯಾದವರ ಮಾಹಿತಿಯನ್ನಷ್ಟೇ ಕಲೆ ಹಾಕಿ ಆಯಾ ಜಿಲ್ಲಾಡಳಿತಗಳಿಗೆ ನೀಡಲಾಗಿದೆ. ಭಟ್ಕಳದ ಮಗು ಚಿಕಿತ್ಸೆ ಪಡೆದ ಬಗ್ಗೆ ಉ. ಕನ್ನಡ ಜಿಲ್ಲಾಡಳಿತಕ್ಕೆ ತಿಳಿಸಿಲ್ಲ. ಆಸ್ಪತ್ರೆಯವರು ಈ ಬಗ್ಗೆ ಮಾಹಿತಿ ನೀಡಿದ್ದಾರೆಯೇ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ.
– ಡಾ| ರಾಮಚಂದ್ರ ಬಾಯರಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿದ್ದವರ, ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದವರೆಲ್ಲರ ಮಾಹಿತಿ ಕಲೆ ಹಾಕಿ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಿಗೆ ಹೇಗೆ ಸೋಂಕು ತಗುಲಿತು ಎಂಬಿತ್ಯಾದಿ ವಿಚಾರಗಳ ಬಗ್ಗೆ ತಿಳಿಯಲು ಈಗಾಗಲೇ ವೈದ್ಯರ ಸಮಿತಿಯೊಂದನ್ನು ಮಾಡಲಾಗಿದೆ. ಅವರು ವರದಿ ನೀಡಿದ ಬಳಿಕವಷ್ಟೇ ಮೂಲ ಏನೆಂದು ತಿಳಿಯಲಿದೆ.
-ಸಿಂಧೂ ಬಿ. ರೂಪೇಶ್‌, ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next