Advertisement

ಬಾಳ ಹಾದಿಯ ಆಕಸ್ಮಿಕ ತಿರುವಿನಲ್ಲಿ ನೀನು ಸಿಕ್ಕೇ ಸಿಕ್ತೀಯ!

03:50 AM Mar 14, 2017 | |

ಹಾಯ್‌ ..
ಗೆಲುವು ಸಿಗುವ ಮುಂಚೆಯೇ ಆ ಗೆಲುವು ನನದಲ್ಲವೇನೋ ಎಂದು ಹಿಂಜರಿಯುತ್ತಿದ್ದೆ. ಅದೇ ಕಾರಣಕ್ಕೆ ಆಟವಾಡದೇ ಸೋಲೊಪ್ಪಿಕೊಳ್ಳುತ್ತಿದ್ದೆ.

Advertisement

ಕೈಗೆ ಸಿಕ್ಕ ವಜ್ರವನ್ನು ನನ್ನ ಕೈಗೆ ಹಾಕಿಕೊಳ್ಳುವ ಯೋಗ್ಯತೆ ನನಗಿಲ್ಲವೇನೋ ಎಂದು ಅನುಮಾನಿಸಿ ಸಿಕ್ಕಲ್ಲಿಯೇ ಉಳಿಸಿ ಬಂದೆ. ದಾರಿಯಲಿ ನಡೆವಾಗ ಕಾಲ್ಗೆ ತೊಡಕಿದ ರತ್ನಗಂಬಳಿಯ ಮೇಲೆ ಕಾಲಿರಿಸಲು ಸಂಕೋಚಪಟ್ಟು ರಾಜಮಾರ್ಗವನ್ನೇ ಬಿಟ್ಟುಬಂದೆ. ಮಾಡಿಕೊಂಡ ಎಡವಟ್ಟುಗಳನ್ನೇ ಕತೆಯೆಂದು ಹೇಳಿ ಎಲ್ಲರನ್ನೂ ನಗಿಸುತ್ತಿದ್ದೆ. ಮನಸಾರೆ ನಗುತ್ತಿದ್ದೆ. ಒಳಗೊಳಗೇ ನಗೆಪಾಟಲಾಗುತ್ತಿದ್ದೆ. ನನ್ನ ಹುಂಬತನವನ್ನೇ ವ್ಯಕ್ತಿತ್ವವೆಂದು ಹೇಳಿಕೊಂಡು ವಿನಾಕಾರಣ ತಿರುಗುತ್ತಿದ್ದೆ. ಆದರೆ ಇಂದು ಮನಸು ತಿಳಿಯಾಗಿದೆ, ನನಗೆ ತಿಳಿದಿದೆ, ಹುಂಬತನವೇ ಜೀವಮಾನದ ಬದುಕಲ್ಲ. ದಡ್ಡತನವೇ ಒಬ್ಬ ವ್ಯಕ್ತಿಯ ಗುಣವಲ್ಲ, ಯಾವುದೇ ಕಾರಣವಿಲ್ಲದೆ ಸುಖಾಸುಮ್ಮನೆ ಎಡವಟ್ಟುಗಳು ಸೃಷ್ಟಿಯಾಗುವುದಿಲ್ಲ. ಗುರಿಯಿಲ್ಲದೆ, ಕನಸಿಲ್ಲದೆ, ಕೆಲಸವಿಲ್ಲದೆ ಸುಮ್ಮನೆ ಹೇಗೋ ಇದ್ದರೆ ಆ ಬದುಕು ಬದುಕಲ್ಲ, ಹೀಗೇ ಇರಬೇಕೆಂದು ಸಾಧಿಸಿ ತೋರಿಸುವುದು ಬದುಕು.

ತಪ್ಪುಗಳಾಗದಂತೆ ಎಚ್ಚರ ವಹಿಸುವುದು ಬದುಕು. ನಾನು ಕಟ್ಟಿದ ಕನಸನ್ನು ಸಾಕಾರಗೊಳಿಸಲು ನನ್ನ ಮನಸನ್ನು ನಾನೇ ಅಡವಿಟ್ಟು ಮೈಯೆಲ್ಲಾ ಕಣ್ಣಾಗಿ ದುಡಿಯುವುದೇ ಬದುಕು. ಹೀಗೆ ದುಡಿಯುತ್ತಾ ಸಾಗಿದಂತೆಲ್ಲಾ, ದಾರಿಗಳೇ ಇಲ್ಲದ ಈ ಕಲ್ಲು ಮುಳ್ಳುಗಳ ನೆಲದಲ್ಲಿ ನನ್ನದೇ ಕಾಲುದಾರಿಯೊಂದನ್ನು ನಿರ್ಮಿಸುತ್ತೇನೆ. ದಾರಿಯಲ್ಲಿ ಸಿಗುವ ನಿರ್ಮಾನುಷ ಕಾಡುಗಳ ಹಾಡು ಕಲಿತು ಮುಂದೆ 
ಸಾಗುತ್ತೇನೆ, ಭಾವದ ಎದೆ ತಾಳದ ಈ ಶೃತಿಯನ್ನು ಅಪ್ಪಿತಪ್ಪಿಯೂ ಎಲ್ಲಿಯೂ ತಪ್ಪುವುದಿಲ್ಲ.

ಭೂಮಿ ದುಂಡಗಿದೆ ಎಂಬ ಮಾತನ್ನು ನಂಬಿದವನು ನಾನು. ಈ ಜೀವನ ಹಾದಿಯ ಯಾವುದೋ ತಿರುವಿನಲ್ಲಿ ನೀನು ಸಿಕ್ಕೇ ಸಿಗುತ್ತೀಯಾ ಎಂದು ಗೊತ್ತಿದೆ, ಹಾಗೆ ಒಮ್ಮೆ ಸಿಕ್ಕಾಗ, ಯಾವುದೋ ಜನ್ಮದ ಏನೋ ಒಂದು ನೆನಪಾದವಳಂತೆ ನನ್ನ ನೀ ಗುರುತಿಸಿದಾಗ, ಆ ಹೊಳಪು ಕಣ್ಣಿನ ಬೆಳಕಿನಲ್ಲಿ ನಿನ್ನ ಒಂದೇ ಒಂದು ಮುಗುಳ್ನಗೆ ನನಗೆ ಸಿಕ್ಕರೆ ನನಗಷ್ಟೇ ಸಾಕು. ಈ ಜೀವನದಲ್ಲಿ
ಆ ಗಳಿಗೆ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯೊಂದಿಗೆ… 

ಕಾಳಿಂಗ ಹೆಗಡೆ ಡಿ. ಎನ್‌. ಶಿವಮೊಗ್ಗ

Advertisement
Advertisement

Udayavani is now on Telegram. Click here to join our channel and stay updated with the latest news.

Next