Advertisement

ಗರಿಷ್ಠ ಸದ್ಭಾವನೆ ತೋರಿದ್ದೇವೆ; ಸಹನೆ ತಳಮಟ್ಟ ತಲುಪಿದೆ : ಚೀನ ಖಡಕ್‌

12:14 PM Aug 04, 2017 | Team Udayavani |

ಬೀಜಿಂಗ್‌ : “ಸಿಕ್ಕಿಂ ನಲ್ಲಿನ ಡೋಕ್‌ಲಾಂ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನಾವು ಗರಿಷ್ಠ ಸದ್ಭಾವನೆಯನ್ನು ತೋರಿದ್ದೇವೆ; ಹಾಗಿದ್ದರೂ ನಮ್ಮ ಸಹನೆ ತಳ ಮಟ್ಟವನ್ನು ತಲುಪಿದೆ’ ಎಂಬ ಖಡಕ್‌ ಸಂದೇಶವನ್ನು ಚೀನ ಭಾರತಕ್ಕೆ ರವಾನಿಸಿದೆ. 

Advertisement

ಭೂತಾನ್‌ಗೆ ಸೇರಿದ ವಿವಾದಿತ ಡೋಕ್‌ಲಾಂ ನಲ್ಲಿ ಭಾರತ – ಚೀನ ಸೇನೆಯ ಮುಖಾಮುಖೀ ಕಳೆದ ಜೂನ್‌ 16ರಿಂದಲೂ ಸಾಗಿದ್ದು  ಇದು ಉಭಯ ದೇಶಗಳ ನಡುವೆ ಸಮರ ಸ್ಫೋಟದ ಭೀತಿಯನ್ನು ಹುಟ್ಟಿಸಿದೆ.

ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ಅವರು ನಿನ್ನೆಯಷ್ಟೇ ಸಂಸತ್ತಿನಲ್ಲಿ “ಭಾರತ – ಚೀನ ನಡುವಿನ ಗಡಿ ವಿವಾದಕ್ಕೆ ಯುದ್ಧವೇ ಪರಿಹಾರವಲ್ಲ; ಪರಸ್ಪರ ಮಾತುಕತೆಯೇ ಪರಿಹಾರ; ಒಂದೊಮ್ಮೆ ಯುದ್ಧ ಸಂಭವಿಸಿದರೂ ಆ ಬಳಿಕದಲ್ಲಿ ಶಾಂತಿ – ಸೌಹಾರ್ದ ಸ್ಥಾಪನೆಗೆ ಮಾತುಕತೆಯೇ ಮುಖ್ಯವಾಗುತ್ತದೆ. ಆದುದರಿಂದ ಉಭಯ ದೇಶಗಳು ಡೋಕ್‌ಲಾಂ ನಿಂದ ತಮ್ಮ ಸೇನೆಯನ್ನು ಹಿಂದೆಗೆದುಕೊಂಡು ಬಿಕ್ಕಟ್ಟು ಬಗೆ ಹರಿಸುವ ಮಾತುಕತೆಗೆ ತೊಡಗಬೇಕು ಮತ್ತು ಆ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸಬೇಕು’ ಎಂದು ಹೇಳಿದ್ದರು. 

ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಚೀನದ ರಕ್ಷಣಾ ಸಚಿವಾಲಯ, “ಚೀನ ಡೋಕ್‌ಲಾಂ ವಿವಾದದ ವಿಷಯದಲ್ಲಿ ಗರಿಷ್ಠ ಸದ್ಭಾವನೆಯನ್ನು ತೋರಿದೆ; ನಮ್ಮ ಸಹನೆ ತಳ ಮಟ್ಟವನ್ನು ತಲುಪಿದೆ; ಭಾರತ ಇದನ್ನು ತಿಳಿಯಬೇಕು’ ಎಂದು ಹೇಳಿದೆ. 

ಭೂತಾನ್‌ಗೆ ಸೇರಿದ ವಿವಾದಿತ ಡೋಕ್‌ಲಾಂ ಪ್ರದೇಶದಲ್ಲಿ ಚೀನ ರಸ್ತೆಯನ್ನು ನಿರ್ಮಿಸಿದರೆ ಅದರಿಂದ ಭಾರತಕ್ಕೆ ತನ್ನ ಈಶಾನ್ಯ ರಾಜ್ಯಗಳ ಸಂಪರ್ಕ ಮಾರ್ಗ ಕಡಿದು ಹೋಗುವುದು ಎಂಬ ಭೀತಿ ಇದೆ. ಆ ಕಾರಣಕ್ಕಾಗಿ ಭಾರತೀಯ ಸೇನೆ ಚೀನ ಡೋಕ್‌ಲಾಂನಲ್ಲಿ ರಸ್ತೆ ನಿರ್ಮಿಸುವುದನ್ನು ತಡೆದಿತ್ತು. ಪರಿಣಾಮವಾಗಿ ಕಳೆದ ಜೂನ್‌ 16ರಿಂದ ಡೋಕ್‌ಲಾಂ ತ್ರಿರಾಷ್ಟ್ರ ಚೌಕದಲ್ಲಿ ಉಭಯ ದೇಶಗಳ ಸೇನಾ ಮುಖಾಮುಖೀ ಗಡಿ ಉದ್ವಿಗ್ನತೆಗೆ ಕಾರಣವಾಗುವ ರೀತಿಯಲ್ಲಿ  ಸಮರ ಭೀತಿಯನ್ನು ಸೃಷ್ಟಿಸುತ್ತಾ ಮುಂದುವರಿದಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next