ಹುಬ್ಬಳ್ಳಿ: ಸಿಖ್ ಧರ್ಮ ಗುರು ಗುರುನಾನಕ್ ಅವರು ಇರದಿದ್ದರೆ ಭಾರತದಲ್ಲಿ ನಾವು ಸ್ವತಂತ್ರವಾಗಿ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಗುರುನಾನಕ್ ಅವರ 550ನೇ ಜಯಂತಿ ನಿಮಿತ್ತ ದೇಶಪಾಂಡೆ ನಗರದ ಗುರುದ್ವಾರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುರುನಾನಕ್ ಸೇರಿದಂತೆ ಹಲವು ಸಿಖ್ ಧರ್ಮ ಗುರುಗಳು ಧರ್ಮ ರಕ್ಷಣೆಗಾಗಿ ಸಶಸ್ತ್ರವಾಗಿ ಹೋರಾಟ ನಡೆಸಿದರು. ಇದರಿಂದ ಧರ್ಮ ರಕ್ಷಣೆ ಸಾಧ್ಯವಾಯಿತು ಎಂದರು.
10 ಸಿಖ್ ಧರ್ಮ ಗುರುಗಳಲ್ಲಿ ಗುರುನಾನಕ್ ಪ್ರಮುಖರು. ಅವರಿಗೆ ಬಡವರ ಬಗ್ಗೆ ಅಪಾರ ಕಾಳಜಿಯಿತ್ತು. ಬಾಲ್ಯದಲ್ಲಿಯೇ ಅವರು ಬಡವರ ಸ್ಥಿತಿಗೆ ಮರುಗುತ್ತಿದ್ದರಲ್ಲದೇ ದಾನ ಮಾಡುವುದನ್ನು ರೂಢಿಸಿಕೊಂಡಿದ್ದರು. ತಮ್ಮ ಮನೆಯಲ್ಲಿ ಹಿರಿಯರು ಸಾಮಗ್ರಿಗಳ ಖರೀದಿಗೆ ನೀಡಿದ ಹಣವನ್ನು ಬಡವರಿಗೆ, ದೀನ ದಲಿತರಿಗೆ ದಾನ ಮಾಡುತ್ತಿದ್ದರು ಎಂದು ತಿಳಿಸಿದರು.
ಸಿಖ್ ಧರ್ಮೀಯರು ಸ್ವಾಭಿಮಾನಿಗಳು. ನ್ಯಾಯಕ್ಕಾಗಿ ಸದಾ ಹೋರಾಡುವ ಸಿಖ್ಖರು ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗುರುನಾನಕ್‌ರ ಜನ್ಮಸ್ಥಳ ಕರ್ತಾರ್ಪುರ ಸದ್ಯ ಪಾಕಿಸ್ತಾನದಲ್ಲಿದ್ದು, ಅಲ್ಲಿಗೆ ಸಿಖ್ಖರು ತೆರಳಲು ಪ್ರಧಾನಿ ನರೇಂದ್ರ ಮೋದಿ ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ನುಡಿದರು.
ಸಿಖ್ ಧರ್ಮೀಯರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಸತ್ಕರಿಸಿದರು. ಜಸ್ವೀರ್ ಸಿಂಗ್, ಪ್ರೀತಂ ಸಿಂಗ್, ಗಿರೀಶ ಧರೇರಾ, ಸುಮಿಧರ ಸಿಂಗ್, ರಾಜೇಂದ್ರ ಸಿಂಗ್, ಗುರುದೀಕ್ಷಿತ ಸಿಂಗ್, ಜಗತ್ ಸಿಂಗ್ ಇದ್ದರು.