Advertisement
ಶಾಲಾ-ಕಾಲೇಜಿಗೆ ಹೊರಟ ವಿದ್ಯಾರ್ಥಿಗಳು, ಕಚೇರಿ ಮತ್ತಿತರ ಕೆಲಸಗಳಿಗೆ ತೆರಳುವವರು, ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಹೊರಟವರು ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲಿಗೆ ಕಾದುಕುಳಿತರು. ನಿಗದಿತ ಸಮಯಕ್ಕಿಂತ ಸಾಕಷ್ಟು ತಡವಾಗಿ ಬರುತ್ತಿದ್ದ ಮೆಟ್ರೋ ರೈಲಿಗೆ ಜನ ಮುಗಿಬೀಳುತ್ತಿದ್ದರು. ಇದರಿಂದ ಬೋಗಿಗಳು ಕಿಕ್ಕಿರಿದಿದ್ದವು. ಅಷ್ಟೇ ಅಲ್ಲ, ನಿಲ್ದಾಣಗಳೂ ಗಿಜಗುಡುತ್ತಿದ್ದವು. ಅದರಲ್ಲೂ ಮೆಜೆಸ್ಟಿಕ್‌ನ ಕೆಂಪೇಗೌಡ ಇಂಟರ್‌ಚೇಂಜ್‌ನಲ್ಲಿ ದಟ್ಟಣೆ ತುಸು ಹೆಚ್ಚಾಗಿದ್ದು, ಸೇವೆಯಲ್ಲಿನ ವ್ಯತ್ಯಯದ ಬಿಸಿ ತುಸು ಜೋರಾಗಿಯೇ ತಟ್ಟಿತು.
Related Articles
Advertisement
ನೇರಳೆ ಮಾರ್ಗದಲ್ಲಿ ಬೆಳಗ್ಗೆ 9.20ಕ್ಕೆ ತಾಂತ್ರಿಕ ತೊಂದರೆ ನಿವಾರಣೆಗೊಂಡು, 9.22ರಿಂದ ಎಂದಿನಂತೆ ಸೇವೆ ಶುರುವಾಯಿತು. ಆದರೆ, ಬೆಳಗ್ಗೆ 10.30ರವರೆಗೂ ಕೆಲವು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹಾಗೇ ಇತ್ತು. ಈ ನಡುವೆ 20ಕ್ಕೂ ಹೆಚ್ಚಿನ ರೈಲುಗಳ ಸಂಚಾರ ವ್ಯತ್ಯಯವಾಗಿತ್ತು. ಮೂರು ಶಾರ್ಟ್‌ಲೂಪ್ ರೈಲುಗಳ ಕಾರ್ಯಾಚರಣೆ ನಡೆಸುವ ಮೂಲಕ ಬಿಎಂಆರ್‌ಸಿಎಲ್, ಸಮಸ್ಯೆ ಪ್ರಮಾಣ ತಗ್ಗಿಸಲು ಯತ್ನಿಸಿತು. ಆದರೆ, ನಿರೀಕ್ಷಿತ ಫಲ ನೀಡಲಿಲ್ಲ. ಎರಡು ದಿನಗಳ ಹಿಂದಷ್ಟೇ ಚಲ್ಲಘಟ್ಟ-ಕೆಂಗೇರಿ ನಡುವೆ ಟ್ರ್ಯಾಕ್‌ನಲ್ಲಿ ಮೆಟ್ರೋ ರೈಲು ನಿಂತು ಪ್ರಯಾಣಿಕರನ್ನು ಆತಂಕಕ್ಕೆ ದೂಡಿತ್ತು. ಜ.27ರಂದು ವಿದ್ಯುತ್ ಪೂರೈಕೆ ವ್ಯತ್ಯಯದಿಂದಾಗಿ ಎಂ.ಜಿ.ರಸ್ತೆ- ಬೈಯಪ್ಪನಹಳ್ಳಿ ನಡುವೆ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು. ಡಿಸೆಂಬರ್‌ನಲ್ಲೂ ಇದೇ ಸಮಸ್ಯೆ ಉಂಟಾಗಿತ್ತು. ಅ.3ರಂದು ರಾಜಾಜಿನಗರ ಬಳಿ ರೋಡ್ ಕಂ ರೈಲ್ ವೆಹಿಕಲ್ ಸಿಲುಕಿ ಹಸಿರು ಮಾರ್ಗದಲ್ಲಿ ವ್ಯತ್ಯಯ ಉಂಟಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಮರ್ಪಕ ಮಾಹಿತಿ ನೀಡದ ನಿಗಮದ ವಿರುದ್ಧ ಪ್ರಯಾಣಿಕರ ತೀವ್ರ ಆಕ್ರೋಶ:
ಬೆಳಗ್ಗೆ 8.48ಕ್ಕೆ ಅಧಿಕೃತವಾಗಿ ಬಿಎಂಆರ್‌ಸಿಎಲ್ ಈ ಬಗ್ಗೆ ಮಾಹಿತಿ ನೀಡಿತು. ಅಷ್ಟೊತ್ತಿಗಾಗಲೇ ಸಮಸ್ಯೆ ಬಗ್ಗೆ ಪ್ರಯಾಣಿಕರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ನಿಗಮದ ವಿರುದ್ಧ ಹರಿಹಾಯ್ದಿದ್ದರು. ಪ್ರಯಾಣಿಕರಿಗೆ ಸಮರ್ಪಕ ಮಾಹಿತಿ ನೀಡದೆ ಟಿಕೆಟ್ ವಿತರಿಸುತ್ತಿದ್ದ ಬಗ್ಗೆಯೂ ಜನತೆ ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ ಆ್ಯಪ್‌ನಲ್ಲಿ ಕ್ಯೂಆರ್ ಕೋಡ್ ಟಿಕೇಟ್ ಖರೀದಿ ವೇಳೆಯೂ ಈ ಸಂಬಂಧ ಮಾಹಿತಿ ಇರಲಿಲ್ಲ ಎಂದು ಕಿಡಿಕಾರಿದರು. “ಎಕ್ಸ್’ನಲ್ಲಿ ಸಾಕಷ್ಟು ಪ್ರಯಾಣಿಕರು ದಟ್ಟಣೆ ಬಗ್ಗೆ ಫೋಟೋ ಹಂಚಿಕೊಂಡು ಬಿಎಂಆರ್‌ಸಿಎಲ್ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು. ಸಾಮಾನ್ಯವಾಗಿ 10 ನಿಮಿಷಕ್ಕೊಂದು ರೈಲು ಸೇವೆ ಇರುತ್ತದೆ. ಅರ್ಧ ಗಂಟೆಗೊಂದು ರೈಲುಗಳು ಬರುತ್ತಿವೆ. ಬೆಳಗ್ಗೆ 8.15ಕ್ಕೆ ಬಂದಿದ್ದೇವೆ. 9.30 ಆದರೂ ಇನ್ನೂ ನಿಲ್ದಾಣದಲ್ಲೇ ಇದ್ದೇವೆ ಎಂದು ಸ್ವಾಮಿ ವಿವೇಕಾನಂದ ನಿಲ್ದಾಣದಲ್ಲಿದ್ದ ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.