ಕಲಬುರಗಿ: ಅಭ್ಯರ್ಥಿ ಬಯಸಿದ ಮತ್ತು ತಾನು ಪ್ರಚಾರ ಮಾಡಿದ ಚಿಹ್ನೆಯ ಗುರುತು ಒಂದಾದರೆ, ಇಂದು ಚುನಾವಣೆ ಮತಪತ್ರದಲ್ಲಿ ಬೇರೆಯೊಂದು ಚಿಹ್ನೆ ಮುದ್ರಣವಾಗಿದೆ. ಇದರಿಂದ ಸ್ವತಃ ಅಭ್ಯರ್ಥಿ ದಿಗಿಲುಗೊಂಡರೆ, ಮತದಾನದ ಮಾಡಲು ಹೋದ ಮತದಾರರು ಸಹ ಕಂಗಾಲುಗೊಂಡಿದ್ದಾರೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಶ್ರೀಚಂದ್ ಗ್ರಾಮ ಪಂಚಾಯಿತಿಯ ಎರಡನೇ ವಾರ್ಡ್‍ನಲ್ಲಿ ಈ ಪ್ರಸಂಗ ನಡೆದಿದ್ದು, ಹಲ್ಲುಜ್ಜುವ ಪೇಸ್ಟ್ ಬದಲು ಬ್ರಷ್ ಚಿಹ್ನೆ ಮುದ್ರಣವಾಗಿದೆ. ಇದರಿಂದ ಕೆಲ ಕಾಲ ಮತದಾನ ಸ್ಥಗಿತಗೊಂಡಿದೆ.
ಅಭ್ಯರ್ಥಿ ಗಜಾನಂದ ದತ್ತಾಪ್ರಸಾದ ಎಂಬುವರು ತಮ್ಮ ಪ್ರಚಾರ ಪತ್ರದಲ್ಲಿ ಟೂತ್ ಪೇಸ್ಟ್ ಚಿಹ್ನೆ ಹಾಕಿಕೊಂಡು ಪ್ರಚಾರ ಕೈಗೊಂಡಿದ್ದಾರೆ. ಇಂದು ಬೆಳಿಗ್ಗೆ ಮತ ಚಲಾಯಿಸಲು ಹೋದ ಮತದಾರರೊಬ್ಬರು ಟೂತ್ ಪೇಸ್ಟ್ ಚಿಹ್ನೆಗಾಗಿ ಗಮನಿಸಿದ್ದಾರೆ. ಚಿಹ್ನೆ ಕಾಣದೆ ದಂಗಾಗಿದ್ದಾರೆ. ಹೊರಗೆ ಬಂದು ಮತದಾರ ಅಭ್ಯರ್ಥಿಗೆ ನೀನು ಟೂತ್ ಪೇಸ್ಟ್ ಗೆ ಮತ ಚಲಾಯಿಸಲು ಹೇಳಿದ್ದು, ಆದರೆ ಅಲ್ಲಿ ಈ ಚಿಹ್ನೆ ಇಲ್ಲ. ಬರಿ ಟೂತ್ ಬ್ರಷ್ ಇದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿ ಬಳಿ ಲೋಡೆಡ್ ರಿವಾಲ್ವರ್ ಪತ್ತೆ!
ನನಗೆ ಹಲ್ಲುಜ್ಜುವ ಪೇಸ್ಟ್ ಚಿಹ್ನೆ ನೀಡಲಾಗಿತ್ತು. ಇದೇ ಚಿಹ್ನೆ ಮೇಲೆಯೇ ಪ್ರಚಾರ ಕಾರ್ಯ ಕೈಗೊಂಡಿದ್ದೇನೆ. ಆದರೆ ಮತ ಪತ್ರದಲ್ಲಿ ಹಲ್ಲುಜ್ಜುವ ಬ್ರಷ್ ಪ್ರಿಂಟ್ ಆಗಿದೆ ಎಂದು ಅಭ್ಯರ್ಥಿ ಗಜಾನಂದ ತಕರಾರು ತೆಗೆದರು. ಅಲ್ಲದೇ, ಈ ಬಗ್ಗೆ ಚುನಾವಣಾಧಿಕಾರಿಗೆ ತಿಳಿಸಿದ್ದು, ಸದ್ಯಕ್ಕೆ ಮತದಾನ ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ರಮೇಶ ಪೆದ್ದೆ, ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಚಿಹ್ನೆ ಸರಿಯಾಗಿದೆ. ಫಾರಂ ಸಂಖ್ಯೆ 10 ರಲ್ಲಿ 139 ಹಲ್ಲುಜ್ಜುವ ಬ್ರಷ್ ಎಂದೇ ನಮೂದಾಗಿದೆ ಎಂದು ಮತಗಟ್ಟೆ ಅಧಿಕಾರಿ ತಿಳಿಸಿದ್ದಾರೆ. ಅಭ್ಯರ್ಥಿ ದೂರು ನೀಡಲಿ ಪರಿಶೀಲಿಸಲಾಗುವುದು. ಚುನಾವಣೆ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.
ಇನ್ನು, ಈ ವಾರ್ಡ್ ನಲ್ಲಿ 2 ಸ್ಥಾನಗಳಿದ್ದು, 8 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.