ಚೆನ್ನೈ: ಸರ್ಕಾರಿ ನೌಕರರು, ಅಂಚೆ ಇಲಾಖೆ ನೌಕರರು, ಪೊಲೀಸ್ ಇಲಾಖೆ ಹೀಗೆ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ವೇಳೆ ಅವರನ್ನು ಗೌರವಪೂರ್ವಕವಾಗಿ ಬೀಳ್ಕೊಡಲಾಗುತ್ತದೆ. ಆದರೆ ಬರೋಬ್ಬರಿ 99 ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು, ನಿವೃತ್ತಿಯಾದ (60ವರ್ಷ) “ಕಲೀಮ್” ಎಂಬ ಆನೆಗೆ ತಮಿಳುನಾಡಿನ ಕೊಜಿಯಮುಟ್ಟಿ ಆನೆ ಶಿಬಿರದಲ್ಲಿ ಭಾವಪೂರ್ಣ ಗೌರವ ರಕ್ಷೆಯೊಂದಿಗೆ ಬೀಳ್ಕೊಟ್ಟ ಅಪರೂಪದ ಘಟನೆ ನಡೆದಿದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ವೈರಲ್: ರಶ್ಮಿಕಾ ಮಂದಣ್ಣ ಮೇಲೆ ಶುಭಮನ್ ಗಿಲ್ ಗೆ ಕ್ರಶ್; ಸಾರಾಳನ್ನು ಮರೆತ್ರಾ ಗಿಲ್?
ಕಲೀಮ್ ಎಂಬ ಈ ಆನೆ ಈವರೆಗೆ 99 ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಇದೀಗ 60 ವರ್ಷ ಪ್ರಾಯವಾದ ಹಿನ್ನೆಲೆಯಲ್ಲಿ ನಿವೃತ್ತಿಯಾಗಿದ್ದು, ಆನೆಯ ಕಾರ್ಯಾಚರಣೆ ಕಾರ್ಯ ಮರೆಯಲು ಸಾಧ್ಯವಿಲ್ಲ. ಅದಕ್ಕಾಗಿ ಅರಣ್ಯಾಧಿಕಾರಿಗಳಿಂದ ಆನೆಗೆ ಗೌರವ ರಕ್ಷೆಯ ಮೂಲಕ ಬೀಳ್ಕೊಡಲಾಯಿತು ಎಂದು ತಮಿಳುನಾಡು ಸರ್ಕಾರದ ಅರಣ್ಯ ಮತ್ತು ಪರಿಸರ, ಹವಾಮಾನ ಬದಲಾವಣೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ತಿಳಿಸಿದ್ದು, ಆನೆ ಕಲೀಮ್ ಶಿಬಿರದಲ್ಲಿ ಗೌರವ ರಕ್ಷೆ ಸ್ವೀಕರಿಸುತ್ತಿರುವ ವಿಡಿಯೋವನ್ನು ಟ್ವೀಟ್ ನಲ್ಲಿ ಶೇರ್ ಮಾಡಿದ್ದಾರೆ.
“ತಮಿಳುನಾಡಿನ ಕೊಜಿಯಮುಟ್ಟಿ ಆನೆ ಶಿಬಿರದಲ್ಲಿ ಕುಮ್ಕಿ ಆನೆ ಕಲೀಮ್ ಮಂಗಳವಾರ (ಮಾರ್ಚ್ 07) ನಿವೃತ್ತಿಯಾಗಿರುವುದು ನಮ್ಮ ಕಣ್ಣುಗಳನ್ನು ತೇವವಾಗಿಸಿದ್ದು, ಹೃದಯ ತುಂಬಿ ಬಂದಿರುವುದಾಗಿ” ಸುಪ್ರಿಯಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಅರಣ್ಯಾಧಿಕಾರಿಗಳಿಂದ ಗೌರವ ವಂದನೆ ಸ್ವೀಕರಿಸಿದ ಕಲೀಮ್:
ಅರಣ್ಯಾಧಿಕಾರಿಗಳಿಂದ ಆನೆ ಕಲೀಮ್ ಗೌರವ ವಂದನೆ ಸ್ವೀಕರಿಸಿದ್ದು, ಬಳಿಕ ಕಲೀಮ್ ತನ್ನ ಸೊಂಡಿಲನ್ನು ಎತ್ತಿ ಅಧಿಕಾರಿಗಳಿಗೆ ಪ್ರತಿವಂದನೆ ಸಲ್ಲಿಸಿ, ಘೀಳಿಟ್ಟಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ತಾನು ತನ್ನ ಕರ್ತವ್ಯವನ್ನು ಪೂರ್ಣಗೊಳಿಸಿರುವುದಾಗಿ ಮನದಟ್ಟು ಮಾಡಿಕೊಂಡಿರುವುದು ಕಲೀಮ್ ನಡವಳಿಕೆಯಲ್ಲಿ ಗಮನಿಸಬಹುದಾಗಿದ್ದು, ತಾನು ನಿವೃತ್ತಿಯಾಗಿರುವುದರಿಂದ ತನ್ನ ಸುತ್ತ, ಮುತ್ತಲಿದ್ದ ಪ್ರತಿಯೊಬ್ಬರಿಗೂ ಪ್ರೀತಿಯನ್ನು ತೋರ್ಪಡಿಸಿರುವುದಾಗಿ ವರದಿ ತಿಳಿಸಿದೆ.