Advertisement

ಸಿಗಂದೂರು ಕೇಬಲ್‌ ಬ್ರಿಡ್ಜ್ ಕೆಲಸ ಸರಾಗ; ದೇಶದ 2 ನೇ ಅತಿದೊಡ್ಡ ಸೇತುವೆ

02:50 PM Jul 08, 2022 | Team Udayavani |

ಶಿವಮೊಗ್ಗ: ರಾಜ್ಯದ ಪ್ರಮುಖ ಶಕ್ತಿಪೀಠ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ದೇಶದ ಎರಡನೇ ಅತಿ ದೊಡ್ಡ ಕೇಬಲ್‌ ಬ್ರಿಡ್ಜ್ ನಿರ್ಮಾಣಕ್ಕೆ ಇದ್ದ ತೊಡಕುಗಳನ್ನು ಮೀರಿ ಸೇತುವೆಯ ಪ್ರಮುಖ ಕಾಮಗಾರಿ ದಾಖಲೆ ಸಮಯದಲ್ಲಿ ಪೂರ್ಣಗೊಂಡಿದೆ.

Advertisement

ಇದನ್ನೂ ಓದಿ:ಚಂದ್ರಶೇಖರ ಗುರೂಜಿ ಹತ್ಯೆಯಾದ ಹೋಟೆಲ್ ನಲ್ಲಿ ಹೋಮ-ಹವನ

ಬ್ರಿಡ್ಜ್ ನಿರ್ಮಾಣಕ್ಕೆ ಲಿಂಗನಮಕ್ಕಿ ಜಲಾಶಯದ ನೀರು ತೊಡಕಾಗುತ್ತಿದೆ ಎಂದು ಹೇಳಲಾಗಿತ್ತು. ಈಗ ಎಲ್ಲ ತೊಡಕುಗಳನ್ನು ದಾಟಿ ಸೇತುವೆಯ ಪ್ರಮುಖ ಕಾಮಗಾರಿಯಾದ ಪೈಲ್‌ ಕ್ಯಾಪ್‌ ಅಳವಡಿಕೆಯನ್ನು ಪೂರ್ಣಗೊಳಿಸಲಾಗಿದೆ. ಇದರಿಂದ ಸೇತುವೆ ನಿರ್ಮಾಣಕ್ಕೆ ಇನ್ಮುಂದೆ ಯಾವುದೇ ಅಡೆತಡೆ ಎದುರಾಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ರಾಜ್ಯದ ಶಕ್ತಿ ಪೀಠಗಳಲ್ಲಿ ಒಂದಾದ ಸಿಗಂದೂರು ಹಾಗೂ ಜಲಾಶಯಗಳಿಂದಲೇ ಆವೃತ್ತವಾಗಿರುವ ಮಲೆನಾಡಿನ ಹಲವು ಗ್ರಾಮಗಳ ಜನರಿಗೆ ಸಂಪರ್ಕ ಮಾರ್ಗವೇ ದೊಡ್ಡ ಸಮಸ್ಯೆಯಾಗಿತ್ತು. ಆಗ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಆಗ ಹಲವು ಅಡೆತಡೆಗಳು ಎದುರಾಗಿದ್ದವು.

ನೀರೇ ಸಮಸ್ಯೆ: ಬ್ರಿಡ್ಜ್ ಕಾಮಗಾರಿ ಆರಂಭಿಸಿದಾಗ ಅತ್ಯಗತ್ಯವಾದ ಪೈಲ್‌ ಕ್ಯಾಪ್‌ ಅಳವಡಿಕೆಯೇ ದೊಡ್ಡ ಸವಾಲಾಗಿತ್ತು. ಎರಡು ವರ್ಷ ಕಳೆದರೂ 5 ಪೈಲ್‌ ಕ್ಯಾಪ್‌ ಮಾತ್ರ ಅಳವಡಿಸಲಾಗಿತ್ತು. ಇನ್ನು 14 ಪೈಲ್‌ ಕ್ಯಾಪ್‌ ಅಳವಡಿಕೆ ಕಾಮಗಾರಿ ಬಾಕಿ ಇತ್ತು. ಬಾಕಿ ಪೈಲ್‌ ಕ್ಯಾಪ್‌ ಅಳವಡಿಸಲು ಜಲಾಶಯದ ನೀರನ್ನು 538 ಮೀಟರ್‌ (1768 ಅಡಿ)ಗೆ ತಗ್ಗಿಸಬೇಕೆಂದು ರಾಷ್ಟ್ರೀಯ ಹೈವೇ ಪ್ರಾಧಿಕಾರ ಬೇಡಿಕೆ ಇಟ್ಟಿತ್ತು. ಇದು ಕೆಪಿಸಿಗೆ ನುಂಗಲಾರದ ತುತ್ತಾಗಿತ್ತು. ಕಳೆದ ವರ್ಷ ಉತ್ತಮ ಮಳೆಯಾಗಿ 1819 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ 1815 ಅಡಿವರೆಗೂ ನೀರು ಸಂಗ್ರಹವಾಗಿತ್ತು. ಅಷ್ಟು ಅಗಾಧ ಪ್ರಮಾಣದ ನೀರನ್ನು ಒಂದೇ ಬಾರಿ ಇಳಿಸುವುದು ಕೆಪಿಸಿಗೆ ಸವಾಲಿನ ಕೆಲಸವಾಗಿತ್ತು. ಕೊನೆಗೂ ಮೇ ತಿಂಗಳಲ್ಲಿ ನೀರು ಇಳಿದು ಕಾಮಗಾರಿಗೆ ಅವಕಾಶ ಸಿಕ್ಕಿದೆ.

Advertisement

45 ದಿನದಲ್ಲೇ ಪೂರ್ಣ: ಯಾವುದೇ ಸೇತುವೆಗೆ ಪೈಲ್‌ ಕ್ಯಾಪ್‌ ಹಾಕುವುದು ಪ್ರಮುಖ ಘಟ್ಟ. ಪೈಲ್‌ ಕ್ಯಾಪ್‌ ಹಾಕಿದ ನಂತರ ಪಿಲ್ಲರ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ನೂತನ ಮಾದರಿಯ ಸಿಗಂದೂರು ಸೇತುವೆಗೆ 19 ಪೈಲ್‌ ಕ್ಯಾಪ್‌ ಗಳ ಅವಶ್ಯಕತೆ ಇತ್ತು. ಎರಡು ವರ್ಷದಲ್ಲಿ 5 ಕ್ಯಾಪ್‌ ಹಾಕಲು ಮಾತ್ರ ಸಾಧ್ಯವಾಗಿತ್ತು. 2021ರಲ್ಲಿ ಕೆಪಿಸಿ ತಾಂತ್ರಿಕ ಕಾರಣಗಳಿಂದ ಜಲಾಶಯದಲ್ಲಿ ಹೆಚ್ಚಿನ ನೀರನ್ನು ಉಳಿಸಿತ್ತು. ಇದರಿಂದ ಕಾಮಗಾರಿಗೆ ನಿರೀಕ್ಷಿತ ವೇಗ ಸಿಕ್ಕಿರಲಿಲ್ಲ. ಸೇತುವೆ ನಿರ್ಮಾಣಕ್ಕೆ 2023ರ ಮೇ ವರೆಗೂ ಸಮಯ ನೀಡಲಾಗಿದ್ದು ನಿಗದಿತ ಅವ ಧಿಯಲ್ಲಿ ಪೂರ್ಣಗೊಳ್ಳುವುದು ಅನುಮಾನವಾಗಿತ್ತು. ಇದನ್ನು
ಸವಾಲಾಗಿ ಪರಿಗಣಿಸಿದ ಹೆದ್ದಾರಿ ಪ್ರಾಧಿಕಾರ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಕೇವಲ 45 ದಿನದಲ್ಲಿ ಪೈಲ್‌ ಕ್ಯಾಪ್‌ ಕಾಮಗಾರಿ ಪೂರ್ಣಗೊಳಿಸಿದೆ.

ನೀರು ಕಡಿಮೆ ಮಾಡಿಕೊಟ್ಟರೆ 120 ದಿನದಲ್ಲಿ ಕಾಮಗಾರಿ ಮುಗಿಸುತ್ತೇವೆ ಎಂದಿದ್ದ ಎಂಜಿನಿಯರ್‌ಗಳು ದಾಖಲೆ ಸಮಯದಲ್ಲಿ ಮುಕ್ತಾಯಗೊಳಿಸಿರುವುದು ಸ್ಥಳೀಯ ರಲ್ಲಿ ಸಂತಸ ತಂದಿದೆ. 300 ಜನ ಸಿಬ್ಬಂದಿ ದಿನದ 24 ಗಂಟೆಯೂ ಕೆಲಸ ಮಾಡಿದ್ದಾರೆ. ಮುಂಗಾರು ಪೂರ್ವ ಮಳೆ ಇದ್ದಾಗಲೂ ಕಾಮಗಾರಿ ನಿಲ್ಲಿಸಿಲ್ಲ. ಮೇ 10ಕ್ಕೆ ಆರಂಭವಾದ ಕೆಲಸ ಜೂ.20ಕ್ಕೆ ಪೂರ್ಣಗೊಂಡಿದೆ. 423 ಕೋಟಿ ವೆಚ್ಚದ 2125 ಮೀಟರ್‌ ಉದ್ದದ ಈ ಸೇತುವೆ ಇನ್ನು ಒಂದೂವರೆ ವರ್ಷದಲ್ಲಿ ಸೇವೆಗೆ ಮುಕ್ತವಾಗಲಿದೆ.

ಎರಡು ವರ್ಷದಿಂದ 5 ಪೈಲ್‌ ಕ್ಯಾಪ್‌ ಹಾಕಲು ಸಾಧ್ಯವಾಗಿರಲಿಲ್ಲ. 2020-21ರಲ್ಲೂ ನೀರು ಹೆಚ್ಚು ಸಂಗ್ರಹ ಇದ್ದ ಕಾರಣ ಕಾಮಗಾರಿಗೆ ತೊಡಕಾಗಿತ್ತು. ಮೇ ತಿಂಗಳಲ್ಲಿ ನೀರಿನ ಮಟ್ಟ ಕುಸಿದಿದ್ದರಿಂದ 120 ದಿನದಲ್ಲಿ ಮುಗಿಸಬೇಕಿದ್ದ ಕಾಮಗಾರಿಯನ್ನು 45 ದಿನದಲ್ಲೇ ಪೂರ್ಣಗೊಳಿಸಲಾಗಿದೆ. ಇದಕ್ಕಾಗಿ ಎಂಜಿನಿಯರ್‌, ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಲಾಗಿದೆ.
● ಪೀರ್‌ ಪಾಶ, ಸಿಗಂದೂರು ಸೇತುವೆ
ಕಾಮಗಾರಿ ಉಸ್ತುವಾರಿ ಎಂಜಿನಿಯರ್‌

● ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next