ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಮನೆಗಳಿಗೆ ಸೆಸ್ಕ್ ಸಿಬ್ಬಂದಿ ವಿದ್ಯುತ್ ಬಿಲ್ ನೀಡಲು ಮನೆಗಳಿಗೆ ತೆರಳಿದ ಸಮಯದಲ್ಲಿ ಹೊನ್ನೂರು ಗ್ರಾಮಸ್ಥರು ಹಾಗೂ ರೈತ ಸಂಘದ ಸದಸ್ಯರು ಮುತ್ತಿಗೆ ಹಾಕಿ ಬಿಲ್ ನೀಡದಂತೆ ಆಗ್ರಹಿಸಿ ಪ್ರತಿಭಟಿಸಿದ ಘಟನೆ ನಡೆದಿದೆ.
ಹೊನ್ನೂರು ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಸೆಸ್ಕ್ನ ಇಬ್ಬರು ಸಿಬ್ಬಂದಿ ವಿದ್ಯುತ್ ಬಿಲ್ ನೀಡುವುದನ್ನು ತಿಳಿದು ಹೊನ್ನೂರು ಗ್ರಾಮಸ್ಥರು ಹಾಗೂ ರೈತ ಸಂಘದ ವತಿಯಿಂದ ನೌಕರರನ್ನು ತಡೆ ಹಿಡಿದು ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ಪ್ರತಿಭಟನೆ ಎಚ್ಚರಿಕೆ: ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ವಿದ್ಯುತ್ ಬಿಲ್ ಅನ್ನು ಕಳೆದ 25 ವರ್ಷದಿಂದ ಹೊನ್ನೂರು ಗ್ರಾಮದಲ್ಲಿ ಕಟ್ಟುತ್ತಿಲ್ಲ. ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಇದನ್ನು ಮನ್ನಾ ಮಾಡಿಲ್ಲ. ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಜ್ಯೋತಿ ಯೋಜನೆಯಲ್ಲಿ ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವ ಭರವಸೆ ನೀಡಿದಂತೆ ಪಕ್ಷಕ್ಕೆ ಬಹುಮತ ಬಂದಿದೆ. ಜಿಲ್ಲೆಯ 4 ವಿಧಾನ ಸಭಾಕ್ಷೇತ್ರಗಳ ಪೈಕಿ 3 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜೇತರಾಗಿದ್ದಾರೆ.
ಅದರಂತೆ ಕಾಂಗ್ರೆಸ್ ರಾಷ್ಟ್ರನಾಯಕರಾದ ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ನುಡಿ ದಂತೆ ಈ ಯೋಜನೆಯನ್ನು ತಕ್ಷಣ ಮೊದಲ ಸಚಿವ ಸಂಪುಟದ ಸಭೆಯಲ್ಲಿ ತಕ್ಷಣ ಜಾರಿಗೊಳಿಸಿಬೇಕು, ಬಿಲ್ ನೀಡುವುದನ್ನು ನಿಲ್ಲಿಸಿ, ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ರೈತ ಸಂಘ ಹಾಗೂ ಸಾರ್ವಜನಿಕರು ಉಗ್ರವಾದ ಪ್ರತಿಭಟನೆ ಹಮ್ಮಿಕೊಂಡು ಹೋರಾಟದ ರೂಪರೇಷೆ ಸಿದ್ಧಪಡಿಸ ಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಗುಂಡೂರಾವ್, ಮಹೇಶ್, ಮಹದೇವಪ್ಪ, ಜ್ಯೋತಿ, ಕಮಲಮ್ಮ, ಮಹದೇವಸ್ವಾಮಿ, ಜಗದೀಶ್, ಲಿಂಗರಾಜು, ಬಸಪ್ಪ, ಸೋಮಣ್ಣ, ಪರಶಿವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.