ಹಿರೇಕೆರೂರ: ಬೆಳೆನಷ್ಟ ಪರಿಹಾರ ಮತ್ತು ಕಿಸಾನ್ ಸಮ್ಮಾನ್ ಯೋಜನೆ ತಾರತಮ್ಯ ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಅ.21ರಂದು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದೆರಡು ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಉತ್ತರ ಕರ್ನಾಟಕ ಜನತೆ ತತ್ತರಿಸಿದ್ದಾರೆ. ಜನತೆ ಮನೆ-ಮಠ ಕಳೆದುಕೊಂಡು ಕಂಗಾಲಾಗಿದ್ದಾರೆ. ರೈತರ ಬೆಳೆ ಸಂಪೂರ್ಣ ಕೊಚ್ಚಿ ಹೋಗಿ ರೈತ ಸಂಕುಲ ಸಂಕಷ್ಟದ ಪರಿಸ್ಥಿತಿ ಅನುಭವಿಸುವಂತಾಗಿದೆ.
ನೆರೆ ಹಾವಳಿಯಿಂದ ರಾಜ್ಯ ಸರ್ಕಾರದ ಅಂಕಿ ಅಂಶದ ಪ್ರಕಾರ 47 ಸಾವಿರ ಕೋಟಿ ರೂ. ಹಾನಿಯಾಗಿದೆ. ಆದರೆ, ಕೇಂದ್ರ ಸರ್ಕಾರ 1200 ಕೋಟಿ ರೂ. ನೀಡಿ ಕೈಚೆಲ್ಲಿ ಕುಳಿತಿದೆ ಎಂದು ದೂರಿದರು. ದೇಶದಲ್ಲಿ ಹಾಲು ಉತ್ಪಾದನೆ ಅಧಿಕವಾಗಿದ್ದರೂ ವಿದೇಶದಿಂದ ಹಾಲು ಆಮದು ಮಾಡಿಕೊಳ್ಳುವ ಮೂಲಕ ಕೇಂದ್ರ ಸರ್ಕಾರ ಹಾಲು ಉತ್ಪಾದಕರನ್ನು ಬೀದಿ ಪಾಲು ಮಾಡಲು ಹೊರಟಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗಳಿಗೆ ಹಣ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ.
ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು 2 ತಿಂಗಳು ಗತಿಸಿದರೂ ರೈತರಿಗೆ ಬೆಳೆ ಪರಿಹಾರ ಕೊಡುವಲ್ಲಿ ವಿಫಲವಾಗಿದೆ. ಅನ್ನದಾತರ ಸಂಕಷ್ಟಕ್ಕೆ ಸರ್ಕಾರಗಳು ಸ್ಪಂದಿಸದೇ ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅ. 21ರಂದು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಮ್ಮಿಕೊಂಡಿದ್ದು, ರೈತರು, ಕಾರ್ಮಿಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ರೈತ ಸಂಘದ ಗೌರವಾಧ್ಯಕ್ಷ ಎಸ್.ವಿ. ಚಪ್ಪರದಹಳ್ಳಿ, ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ಶಂಕರಗೌಡ ಶಿರಗಂಬಿ, ಗಂಗನಗೌಡ ಮುದಿಗೌಡ್ರ, ಮಹ್ಮದ್ ಗೌಸ್ ಪಾಟೀಲ, ಶಂಕರಗೌಡ ಮಕ್ಕಳ್ಳಿ, ಶಿವಾನಂದಯ್ಯ ಹಳ್ಳೂರಮಠ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.