Advertisement

ತಹಶೀಲ್ದಾರ್ ಕಚೇರಿಗೆ ಮುತ್ತಿಗೆ

11:42 AM Feb 07, 2020 | Suhan S |

ಕುಂದಗೋಳ: ಬೆಂಬಲ ಬೆಲೆಯಡಿ ಶೇಂಗಾ ಖರೀದಿಗೆ ರೈತರು ಹೆಸರು ನೋಂದಾಯಿಸುತ್ತಿರುವಾಗ ಜಿಪಿಎಸ್‌ ತಾಂತ್ರಿಕ ತೊಂದರೆಯಿಂದಾಗಿ ಬೆಳೆ ಕ್ಷೇತ್ರವೇ ಬದಲಾಗಿರುವುದರಿಂದ ಖರೀದಿಸಲು ಅಧಿಕಾರಿಗಳು ತಿರಸ್ಕರಿಸಿದ್ದರಿಂದ ರೈತರು ಗುರುವಾರ ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟಿಸಿದ ಘಟನೆ ಜರುಗಿತು.

Advertisement

ಮುಖಂಡ ಮುತ್ತು ಶಿವಳ್ಳಿ ಮಾತನಾಡಿ, ರೈತರು ಪ್ರಸಕ್ತ ವರ್ಷ ತಮ್ಮ ಹೊಲದಲ್ಲಿ ಶೇಂಗಾ ಬೆಳೆದಿದ್ದರೂ ಜಿಪಿಎಸ್‌ನಲ್ಲಿ ಮಾತ್ರ ಹತ್ತಿ ಬೆಳೆ ಎಂದು ನಮೂದಾಗಿರುವುದರಿಂದ ಬೆಂಬಲ ಬೆಲೆಯಿಂದ ರೈತರು ವಂಚಿತರಾಗುತ್ತಿದ್ದಾರೆ. ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯವರು ಅಸಮರ್ಪಕವಾಗಿ ಜಿಪಿಎಸ್‌ ಮಾಡಿರುವುದರಿಂದ ಈ ಅಚಾತುರ್ಯ ಸಂಭವಿಸಿದೆ. ಇದರಿಂದ ಸಾವಿರಾರು ರೈತರು ಬೆಂಬಲ ಬೆಲೆಯಿಂದ ವಂಚಿತರಾಗುತ್ತಿದ್ದಾರೆ. ಈ ಕೂಡಲೇ ರೈತರಿಗೆನ್ಯಾಯ ನೀಡುವವರೆಗೂ ಬೀಗ ತೆರೆಯುವುದಿಲ್ಲ ಎಂದು ಪಟ್ಟು ಹಿಡಿದ ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು.

ನಂತರ ತಹಶೀಲ್ದಾರ್‌ ರೈತರೊಂದಿಗೆ ಸಮಾಲೋಚಿಸಿ,ನಿಮಗೆ ತೊಂದರೆ ಆಗದ ರೀತಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಬೆಳೆ ದೃಢೀಕರಣ ಪತ್ರವನ್ನು ನಾವೇ ನೀಡುತ್ತೇವೆ. ಖರೀದಿ ಕೇಂದ್ರದಲ್ಲಿ ಇದನ್ನು ನೀಡಿ ನಿಮ್ಮ ಶೇಂಗಾ ಬೆಳೆಯನ್ನು ಮಾರಾಟ ಮಾಡಲು ಅನುವು ಮಾಡಿಕೊಡುವುದಾಗಿ ಹೇಳಿದ ಬಳಿಕ ಕಚೇರಿ ಬೀಗವನ್ನು ತೆರೆದರು. ಮುಖಂಡ ಶೇಖಣ್ಣ ಬಾಳಿಕಾಯಿ ಮಾತನಾಡಿ, ರೈತರ ಶೇಂಗಾ ಬೆಳೆಯನ್ನು ಇಲ್ಲೇ ಖರೀದಿಸಬೇಕು ಹಾಗೂ 10 ಕ್ವಿಂಟಲ್‌ ಬೆಳೆಯನ್ನು ಖರೀದಿಸುವಂತೆ ಸೂಚಿಸಬೇಕೆಂದು ಒತ್ತಾಯಿಸಿದರು.

ಪರಶುರಾಮ ಕಲಾಲ, ರವಿ ಕಿರೇಸೂರ, ಶಿವಾನಂದ ಕೊಪ್ಪದ, ಉಮೇಶಗೌಡ ಅಲ್ಲಾಪುರ, ಬಸವರಾಜ ಅಲ್ಲಾಪುರ, ಜಿ.ಎಸ್‌. ಸುಂಕದ, ಎಸ್‌.ಬಿ. ಗೌಡಪ್ಪನವರ, ಬಸವರಾಜ ಹೂಗಾರ, ಮಂಜುನಾಥ ರಂಗನಾಯ್ಕರ, ಯು.ವೈ. ಪಾಟೀಲ, ಬಸವರಾಜ ರೇವಡೆಣ್ಣವರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next