Advertisement

ಮೂಲಸೌಲಭ್ಯಕ್ಕೆ ಆಗ್ರಹಿಸಿ ಹುಳಿಯಾರು ಪಪಂ ಮುತ್ತಿಗೆ

04:18 PM Nov 06, 2019 | Team Udayavani |

ಹುಳಿಯಾರು: ಪಟ್ಟಣ ಪಂಚಾಯ್ತಿ ವ್ಯಾಪ್ತಿ ಯಲ್ಲಿದ್ದರೂ ಗ್ರಾಮಕ್ಕೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಿಲ್ಲವೆಂದು ರೊಚ್ಚಿಗೆದ್ದ ಲಿಂಗಪ್ಪನ ಪಾಳ್ಯದ ನಿವಾಸಿಗಳು ಹುಳಿಯಾರು ಪಪಂಗೆ ಮುತ್ತಿಗೆ ಹಾಕಿದ ಪ್ರಸಂಗ ಮಂಗಳವಾರ ನಡೆಯಿತು.

Advertisement

ಲಿಂಗಪ್ಪನ ಪಾಳ್ಯದ ಸಮಸ್ಯೆ ಬಗ್ಗೆ ಕಳೆದ ಹಲವಾರು ತಿಂಗಳಿನಿಂದಲೂ ಹುಳಿಯಾರು ಪಪಂ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಪಂಚಾ ಯಿತಿಯವರ ನಿರ್ಲಕ್ಷ್ಯ ಧೋರಣೆ ಯಿಂದಾಗಿ ಸಮಸ್ಯೆ ಬಗೆಹರಿದಿರಲಿಲ್ಲ. ಗ್ರಾಮಸ್ಥರು ಕೊಟ್ಟ ಮನವಿಗೆ ಉತ್ತರ ಬಾರದಿದ್ದರಿಂದ ಸೋಮವಾರ ಸಂಜೆ ಗ್ರಾಮದಲ್ಲಿ ಟಾಂಟಾಂ ಹಾಕಿಸಿ ಮನೆ ಗೊಬ್ಬರಂತೆ ಆಗಮಿಸಿ ಪಂಚಾಯ್ತಿ ಮುತ್ತಿಗೆ ಕಾರ್ಯಕ್ರಮಕ್ಕೆ ಆಗಮಿಸುವಂತೆಯೂ, ತಪ್ಪಿದರೆ ದಂಡ ವಿಧಿಸಲಾಗುವುದು ಎಂದು ಸಾರಿಸಿದರು.

ಅಸಮಾಧಾನ: ಮಂಗಳವಾರ ಗ್ರಾಮದ ಪ್ರತಿ ಯೊಬ್ಬರೂ ಅದರಲ್ಲೂ ವಿಶೇಷವಾಗಿ ಮಹಿಳೆ ಯರು ಹುಳಿಯಾರು ಪಪಂಗೆ ಆಗಮಿಸಿ ಅಧಿ ಕಾರಿಗಳ ಧೋರಣೆ ವಿರುದ್ಧ ಪ್ರತಿಭಟಿಸಿದರು. ಆದರೆ, ಸಂತ್ರಸ್ತರ ಸಮಸ್ಯೆ ಆಲಿಸಲು ಯಾವೊಬ್ಬ ಅಧಿಕಾರಿಯೂ ಇರದಿದ್ದರಿಂದ ರೊಚ್ಚಿಗೆದ್ದು ಒಂದು ಸಮಯದಲ್ಲಿ ಬೀಗ ಹಾಕಲು ಮುಂದಾದರು. ಸ್ಥಳದಲ್ಲಿಯೇ ಇದ್ದ ಪೊಲೀಸರು ಸಮಾಧಾನಪಡಿಸಿ ಪಪಂ ಆಡಳಿತಾಧಿಕಾರಿಯಾದ ತಹಶೀಲ್ದಾರ್‌ ಅವರಿಗೂ ಫೋನಾಯಿಸಿದರು. ಗಂಟೆಗಟ್ಟಲೆ ಮುತ್ತಿಗೆ ಹಾಕಿದರೂ ಯಾರೊಬ್ಬರೂ ಸಮಸ್ಯೆ ಆಲಿಸದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಪಂಚಾಯ್ತಿ ಮಾಜಿ ಸದಸ್ಯ ಜಯಣ್ಣ ಮಾತನಾಡಿ, ಲಿಂಗಪ್ಪನಪಾಳ್ಯ ಹುಳಿಯಾರಿಗೆ ಕೇವಲ 2 ಕಿಲೋಮೀಟರ್‌ ಸನಿಹದಲ್ಲೇ ಇದ್ದರೂ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಶುದ್ಧ ನೀರಿನ ಘಟಕ ಕೆಟ್ಟು ನಿಂತಿದ್ದು ನೀರಿಗಾಗಿ ಬೇರೆ ಊರಿಗೆ ಹೋಗಿ ತರುವಂತಾಗಿದೆ ಎಂದು ಆರೋಪಿಸಿದರು.

ಮನಸೋ ಇಚ್ಛೆ ಮನೆ ಕಂದಾಯ ನಿಗದಿ: ಸೊಸೈಟಿ ನಾಗರಾಜು ಮಾತನಾಡಿ, ರಸ್ತೆಯುದ್ದಕ್ಕೂ ಕಂಬ ಗಳಿದ್ದರೂ ಬೀದಿದೀಪಗಳು ಬೆಳಗುತ್ತಿಲ್ಲ. ಸಂಜೆ 7ರ ಸುಮಾರಿಗೆ ಇಡೀ ಗ್ರಾಮವೇ ಕಗ್ಗತ್ತಲಿನಿಂದ ಕೂಡಿರುತ್ತದೆ. ಈ ಬಗ್ಗೆ ಕೇಳಿದರೆ ನಿಮ್ಮ ಊರಿನ ಕಂದಾಯ ಲಕ್ಷಾಂತರ ಬಾಕಿಯಿದ್ದು ದುಡ್ಡು ಕಟ್ಟಿ, ನಂತರ ಬೀದಿ ದೀಪ ಕಟ್ಟುತ್ತೇವೆ ಎನ್ನುತ್ತಾರೆ.

Advertisement

ಆದರೆ ಕಂದಾಯ ಕಟ್ಟಿಸಿಕೊಳ್ಳಲು ಯಾರೊಬ್ಬರೂ ಬಂದಿಲ್ಲ. ಮನಸೋ ಇಚ್ಚೆ ಮನೆ ಕಂದಾಯ ನಿಗದಿ ಪಡಿಸಿದ್ದಾರೆಂದು ದೂರಿದರು. ಈ ವೇಳೆ ಪಂಚಾಯ್ತಿ ಮುಂದೆ ಜಮಾಯಿಸಿದ್ದ ನೂರಕ್ಕೂ ಹೆಚ್ಚು ಮಹಿಳೆ ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರೌಢಶಾಲೆ ಬಳಿ ಬೋರ್‌ವೆಲ್‌ ಕೊರೆಸಿದ್ದರೂ ಮೋಟಾರ್‌ ಕೆಟ್ಟು ಹೋಗಿದೆ. ಚರಂಡಿಗಳು ದುರ್ನಾತ ಬೀರು ತ್ತಿವೆ ಎಂದು ದೂರಿದರು.

ಪಪಂ ಲೆಕ್ಕಾಧಿಕಾರಿಗೆ ಮನವಿ: ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವವರೆಗೂ ಸ್ಥಳದಿಂದ ಕದಲುವುದಿಲ್ಲವೆಂದು ಪಟ್ಟು ಹಿಡಿದಿದ್ದ ಗ್ರಾಮಸ್ಥರಿಗೆ ಪಪಂ ಆಡಳಿತಾಧಿಕಾರಿ ತಹಶೀಲ್ದಾರ್‌ರನ್ನು ಫೋನ್‌ ಮುಖಾಂತರ ಸಂಪರ್ಕಿಸಿ ಗ್ರಾಮದ ಪರವಾಗಿ 3-4 ಮಂದಿ ತಮ್ಮ ಕಚೇರಿಗೆ ಬರುವಂತೆ ಮನವೊಲಿ ಸಿದರು. ಪರಿಣಾಮ ಗ್ರಾಮಸ್ಥರು ಪಪಂಲೆಕ್ಕಾಧಿಕಾರಿ ಜುನೇದ್‌ರಿಗೆ ಮನವಿ ಪತ್ರ ಸಲ್ಲಿಸಿ ಹಿಂತಿರುಗಿ ದರು. ಪಪಂ ಲೆಕ್ಕಾಧಿಕಾರಿ ಜುನೇದ್‌ ಮಾತನಾಡಿ, ಸಿಬ್ಬಂದಿ ಕೊರತೆಯಿಂದಾಗಿ ಸಮಸ್ಯೆ ಉಂಟಾಗಿದೆ. ನಿಮ್ಮಗಳ ಸಮಸ್ಯೆ ಮೇಲಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಪರಿಹರಿಸಲು ಯತ್ನಿಸಲಾಗುವು ದೆಂದರು. ಬೀರಣ್ಣ, ದುರ್ಗಪ್ಪ, ಈಶಣ್ಣ, ಮಂಜಣ್ಣ, ರಾಜಣ್ಣ, ಕೆಂಚಪ್ಪ, ಹನುಮೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next