ಮುಂಡರಗಿ: ತಾಲೂಕಿನ ಕದಾಂಪುರ ಗ್ರಾಮದ ರೈತರು ನಿರಂತರ ವಿದ್ಯುತ್ ಪೂರೈಕೆ ಮತ್ತು ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಗ್ರಾಮದ ನೂರಕ್ಕೂ ಹೆಚ್ಚು ರೈತರು ಗ್ರಾಮದ ರೈತ ಶಿವು ಬಿಡನಾಳ ನೇತೃತ್ವದಲ್ಲಿ ಡಂಬಳ ಗ್ರಾಮದ ಕೆಪಿಟಿಸಿಎಲ್ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಾಲ್ಕು ದಿನಗಳಿಂದ ಸರಿಯಾಗಿ ವಿದ್ಯುತ್ ಪೂರೈಕೆ ಆಗದಿರುವುದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಆಸ್ಪತ್ರೆ, ಮಹಿಳಾ ವಸತಿ ನಿಲಯಗಳಲ್ಲಿ ನೀರಿನ ಸಮಸ್ಯೆಯಾಗಿದೆ. ನಮ್ಮ ಬೆಳೆಗಳು ಒಣಗುತ್ತಿದ್ದು, ಸಾವಿರಾರು ಹಣ ಖರ್ಚು ಮಾಡಿ ಬೆಳೆದಿರುವ ಹೂವಿನ ತೋಟಗಳು ನೀರಿನ ಅಭಾವದಿಂದಾಗಿ ಒಣಗುತ್ತಿವೆ ಎಂದು ಪ್ರತಿಭಟನಾ ನೀರತ ರೈತರು ತಮ್ಮ ಅಳಲು ತೋಡಿಕೊಂಡರು.
ಗ್ರಾಮಕ್ಕೆ ದಿನಕ್ಕೆ ಎರಡು ತಾಸು ಮಾತ್ರ ವಿದ್ಯುತ್ ಪೂರೈಕೆಯಾಗುತ್ತಿದೆ. ನಿರಂತರ 8 ತಾಸು ವಿದ್ಯುತ್ ಪೂರೈಸಬೇಕು. ಗ್ರಾಮದಲ್ಲಿರುವ, ರೈತರ ಹೊಲದಲ್ಲಿರುವ ವಿದ್ಯುತ್ ತಂತಿಗಳು ಕೆಳಗೆ ಜೋತುಬಿದ್ದಿವೆ. ಗ್ರಾಮಕ್ಕೆ ಸರಿಯಾದ ಲೈನ್‌ಮನ್ ನೇಮಕ ಮಾಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಅಭಿಯಂತರ ಎಂ.ಬಿ. ಗೌರೋಜಿ, ರೈತರ ಸಮಸ್ಯೆ ಆಲಿಸಿ ಗ್ರಾಮಕ್ಕೆ ಪ್ರತ್ಯೇಕ ಕಂಬಗಳು ಹಾಕಿ ಹೊಸ ಮಾರ್ಗದ ಮುಖಾಂತರ ವಿದ್ಯುತ್ ಪೂರೈಸುವ ಕಾರ್ಯ ಕೆಲವೇ ದಿನಗಳಲ್ಲಿ ಮುಗಿಯಲಿದೆ. ಅಲ್ಲದೆ ಗ್ರಾಮದಲ್ಲಿರುವ ವಿದ್ಯುತ್ ತಂತಿಗಳನ್ನು ಬದಲಾಯಿಸಿ ಹೊಸ ವಿದ್ಯುತ್ ತಂತಿ ಅಳವಡಿಸಲಾಗುವುದು. ರೈತರ ಹೊಲಗಳಲ್ಲಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಲಾಗುವುದು. ಹೊಸ ಲೈನ್‌ಮನ್ ಗ್ರಾಮಕ್ಕೆ ನಿಯೋಜಿಸಲಾಗುವುದು. ರೈತರಿಗೆ ನಿರಂತರವಾಗಿ ಆರು ತಾಸು ವಿದ್ಯುತ್ ಪೂರೈಸಲಾಗವುದು ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.
ಈರಪ್ಪ ಗದುಗಿನ, ಬಸವರೆಡ್ಡಿ ನಾಗನೂರ, ನೂರಸಾಬ ಒಡ್ಡಟ್ಟಿ, ಮಹೇಶ ಹಳ್ಳಿ, ಪ್ರಶಾಂತ ಬಾವಿ, ವಿಠಲ್ ಬಡಿಗೇರ, ಅಡವೇಪ್ಪ ಪೂಜಾರ, ಪಂಚಾಕ್ಷರಯ್ಯ ಹರ್ಲಾಪುರಮಠ, ಬಸಪ್ಪ ಕೋವಿ, ಸಿದ್ಧಪ್ಪ ಸಂಕಣ್ಣವರ, ಶಂಕರ ಪಾಟೀಲ್, ಕುಮಾರ ಸಂಕಣ್ಣವರ, ಶ್ರೀಕಾಂತ ಬಿಡನಾಳ, ರಾಜು ಸಂಕಣ್ಣವರ ಸೇರಿದಂತೆ ಹೆಸ್ಕಾಂ ಅಧಿಕಾರಿ ಟೋಕಾ ನಾಯಕ, ಹೆಸ್ಕಾಂ ಸಿಬ್ಬಂದಿ ಇದ್ದರು.
ನಿರಂತರ ವಿದ್ಯುತ್ ಪೂರೈಕೆ ಮತ್ತು ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಕದಾಂಪುರ ಗ್ರಾಮದ ರೈತರು ಡಂಬಳ ಗ್ರಾಮದ ಕೆಪಿಟಿಸಿಎಲ್ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.