ಚಿಂತಾಮಣಿ: ರೈತರ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಜಾಥಾ ಆರಂಭಿಸಿ, ನಗರದಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ,ನೀರಾವರಿ ಯೋಜನೆಗಳು ಸೇರಿದಂತೆ ರೈತರ ಹಲವು ಬೇಡಿಕೆ ಈಡೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಧಿಕ್ಕಾರ ಕೂಗಿದರು. ತದನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ವಿಶ್ವನಾಥ್ ಮೂಲಕ ಬೇಡಿಕೆಗಳ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿದರು.
ನಿರಂತರ ಹೋರಾಟ: ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆಗಳು ಜಾರಿಯಾಗಬೇಕು ಎಂದು ಕಳೆದ 20 ವರ್ಷಗಳಿಂದ ರೈತ ಸಂಘ ಹೋರಾಟ ನಡೆಸುತ್ತಲೇ ಇದೆ. ಸಮಗ್ರ ಹಾಗೂ ಕೃಷಿ ಆಧಾರಿತ ನೀರಾವರಿ ಯೋಜನೆಗಳು ಇದುವರೆಗೂ ಜಾರಿಯಾಗಲಿಲ್ಲ. ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ನೀರು ವ್ಯವಸಾಯಕ್ಕೆ ಪರಿಪೂರ್ಣವಾಗಿ ಸಾಕಾಗುತ್ತಿಲ್ಲ ಎಂದು ಈಗಾಗಲೇ ಸರಕಾರಕ್ಕೆ ವರದಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ಎತ್ತಿನಹೊಳೆ ಯೋಜನೆ ತುರ್ತಾಗಿ ಜಾರಿಯಾಗಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ ಎಂದು ಆರೋಪಿಸಿದರು. ಲಂಚದ ಹೆಸರಿನಲ್ಲಿ ರೈತರ ಕೆಲಸ ಕಾರ್ಯ ಮಾಡಿಕೊಡಲು ವಿಳಂಬ ಮಾಡುತ್ತಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು. ನಾಲ್ಕೈದು ವರ್ಷಗಳಿಂದ ಬೀಡು ಬಿಟ್ಟಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಸೀಕಲ್ ರವಣಾರೆಡ್ಡಿ, ಗೌರವಾಧ್ಯಕ್ಷ ಆರ್.ಆರ್ .ನಾರಾಯಣಸ್ವಾಮಿ, ಖಜಾಂಚಿ ಅನಕಲ್ ಶಿವಾನಂದ, ಮಹಿಳಾ ಸಮಿತಿ ಅಧ್ಯಕ್ಷೆ ಮಂಜುಳಮ್ಮ, ಮಂಜುನಾಥ್, ರಾಮಕಷ್ಣಪ್ಪ, ವೈ.ಸಿ.ಜಯರಾಮರೆಡ್ಡಿ, ಶ್ರೀನಿವಾಸರೆಡ್ಡಿ, ಶ್ರೀರಾಮರೆಡ್ಡಿ, ನಾಗರಾಜ್, ಶಿವಕುಮಾರ್, ಚಂದ್ರಶೇಖರ್, ಅಲ್ಲಾಭಕ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಉಪಸ್ಥಿತರಿದ್ದರು