Advertisement

ಸಿದ್ರಾಂಪುರ ಲೇಔಟ್‌ ಸುಧಾರಣೆಗೆ ಮತ್ತೆ ಪ್ರಸ್ತಾವನೆ!

04:59 PM Jan 16, 2021 | Team Udayavani |

ರಾಯಚೂರು: ನಗರಾಭಿವೃದ್ಧಿ ಪ್ರಾಧಿಕಾರದ ಯಡವಟ್ಟಿನಿಂದಾಗಿ ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ಸಿದ್ರಾಂಪುರ ಲೇಔಟ್‌ಗೆ ಹೊಸ ರೂಪ ನೀಡಿ ಮತ್ತೆ ಪ್ರಸ್ತಾವನೆ ನೀಡಲಾಗಿದೆ. ಈ ಹಿಂದೆ ನಿರ್ಮಿಸಿದ ಲೇಔಟ್‌ ಅವೈಜ್ಞಾನಿಕವಾಗಿರುವ ಕಾರಣ ಈಗ ಪರಿಷ್ಕೃತ ಯೋಜನಾ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಮೀಪದ ಸಿದ್ರಾಂಪುರ ಗ್ರಾಮದ ರಸ್ತೆಯಲ್ಲಿ 2010ರಲ್ಲಿ 51.21 ಎಕರೆ ಪ್ರದೇಶದಲ್ಲಿ ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಲು
ಲೇಔಟ್‌ ನಿರ್ಮಿಸಲಾಗಿತ್ತು. 20/30, 30/40 ಹಾಗೂ 40/60 ಅಳತೆಯ 651 ನಿವೇಶನ ನಿರ್ಮಿಸಲಾಗಿತ್ತು. 2010ರ ಅಕ್ಟೋಬರ್‌ನಲ್ಲಿ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿತ್ತು.

Advertisement

ಸಾಕಷ್ಟು ಜನ ಮುಂಗಡ ಹಣ ಪಾವತಿಸಿ ಅರ್ಜಿ ಹಾಕಿದ್ದರು. 2011ರಲ್ಲಿ ಅವರಿಗೆಲ್ಲ ನಿವೇಶನ ಹಂಚಿಕೆ ಮಾಡಿ ಪೂರ್ಣ ಹಣ ಕಟ್ಟಿಸಿಕೊಳ್ಳಲಾಗಿತ್ತು. ಅದರಲ್ಲಿ 120ಕ್ಕೂ ಹೆಚ್ಚು ಜನ ಪೂರ್ಣ ಹಣ ಪಾವತಿಸಿದ್ದರು. ಆದರೆ, ಇಲ್ಲಿ ಸುಮಾರು 29 ಎಕರೆ ಪ್ರದೇಶ ಬೆಟ್ಟಗುಡ್ಡವೇ ಇರುವ ಕಾರಣ ವಿರೋಧಗಳು ವ್ಯಕ್ತವಾದವು. ಅದನ್ನು ಸಮತಟ್ಟು ಮಾಡುವಲ್ಲಿ ಪ್ರಾ ಧಿಕಾರ ಕೂಡ ಕೈ ಚೆಲ್ಲಿತ್ತು. ಲೇಔಟ್‌ನಲ್ಲಿ ರಸ್ತೆ, ಚರಂಡಿ, ವಿದ್ಯುತ್‌ ಸಂಪರ್ಕ ಕಲ್ಪಿಸಲಾಯಿತಾದರೂ ಹಂಚಿಕೆ ಪ್ರಕ್ರಿಯೆ ಮಾತ್ರ ಶುರುವಾಗಲಿಲ್ಲ. ಇದರಿಂದ ಯೋಜನೆ ನನೆಗುದಿಗೆ ಬಿತ್ತು.

ಮರು ಪ್ರಸ್ತಾವನೆ ಸಲ್ಲಿಕೆ: ಈ ಹಿಂದೆ ಅನುಮೋದನೆ ಸಿಕ್ಕಿರುವ ಬಡಾವಣೆ ನಿರ್ಮಿಸುವುದು ವಾಸ್ತವದಲ್ಲಿ ಕಷ್ಟಸಾಧ್ಯ ಎನ್ನುವಂತಿದೆ. ಒಟ್ಟು 50 ಎಕರೆ ಪ್ರದೇಶದಲ್ಲಿ ಲೇಔಟ್‌ ನಿರ್ಮಿಸಲಾಗಿತ್ತು. ಆದರೆ, ಅದರಲ್ಲಿ ಸುಮಾರು 29 ಎಕರೆ ಬರೀ ಗುಡ್ಡಗಾಡುಗಳೇ ಇದೆ. ಹೀಗಾಗಿ ನೂತನವಾಗಿ ಅಧಿ ಕಾರಕ್ಕೆ ಬಂದ ಆರ್‌ಡಿಎ ಅಧ್ಯಕ್ಷ ಯಾಪಚೆಟ್ಟಿ ಗೋಪಾಲರೆಡ್ಡಿ ನೇತೃತ್ವದಲ್ಲಿ ಸರ್ಕಾರಕ್ಕೆ ಮತ್ತೂಂದು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈಗ ಕೇವಲ 21.88 ಎಕರೆ ಪ್ರದೇಶದಲ್ಲಿ ಮಾತ್ರ ಲೇಔಟ್‌ ನಿರ್ಮಿಸಲಾಗುತ್ತಿದೆ. ಈ ಹಿಂದೆ ಹಣ ಕಟ್ಟಿದವರಿಗೆ ಈ ಸ್ಥಳದಲ್ಲಿ ನಿವೇಶನ ನೀಡಬಹುದಾಗಿದೆ. ಉಳಿದ ಸ್ಥಳ ಸದ್ಯಕ್ಕೆ ಕಾಯ್ದಿರಿಸಲಾಗಿದೆ.

ಯಾಕೆ ನನೆಗುದಿಗೆ ಬಿದ್ದಿದ್ದು..?: ಸಿದ್ರಾಂಪುರ ಬಡಾವಣೆ ನನೆಗುದಿಗೆ ಬೀಳಲು ಮುಖ್ಯ ಕಾರಣವೇ ಅಧಿಕಾರಿಗಳ ಅವೈಜ್ಞಾನಿಕ ನಡೆ. ಒಟ್ಟು 51.21 ಎಕರೆ ಜಮೀನಿನಲ್ಲಿ ಬೆಟ್ಟ ಸೇರಿಸಿ ಸರ್ವೇ ಮಾಡಿದ್ದೇ  ಸಮಸ್ಯೆಯಾಗಿತ್ತು. 651 ನಿವೇಶನದಲ್ಲಿ ಸುಮಾರು 270ಕ್ಕೂ ಅಧಿ ಕ ನಿವೇಶನಗಳು ರೂಪಿಸಲು ಆಗಲೇ
ಇಲ್ಲ. ಈ ಕಾರಣಕ್ಕೆ 2017ರಲ್ಲಿ ಅರ್ಜಿದಾರರಿಗೆ ಹಣ ಹಿಂಪಡೆಯುವಂತೆ ಆರ್‌ಡಿಎ ನೋಟಿಸ್‌ ಕೂಡ ಜಾರಿ ಮಾಡಿತ್ತು. ಆದರೆ, ಇಂದಲ್ಲ ನಾಳೆ ನಮಗೆ
ನಿವೇಶನ ಸಿಗುವ ವಿಶ್ವಾಸದಲ್ಲಿ ಜನ ಹಣ ವಾಪಸ್‌ ಪಡೆಯಲಿಲ್ಲ.

ಇಂದಿಗೂ ಕಾದ ಫಲಾನುಭವಿಗಳು ಹಿಂದೆ ಬಡಾವಣೆ ನಿರ್ಮಿಸುವ ವಿಚಾರ ತಿಳಿಯುತ್ತಿದ್ದಂತೆ ಸಾರ್ವಜನಿಕರು ನಾ ಮುಂದು..ತಾ ಮುಂದು.. ಎಂದು
ಹಣ ಪಾವತಿಸಿದ್ದಾರೆ. ತಮ್ಮ ಯೋಗ್ಯತಾನುಸಾರ ಅಳತೆಯ ನಿವೇಶನ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆಯ್ಕೆಯಾದವರು ಮೊದಲ ಕಂತಿನ ಹಣ ಕೂಡ ಪಾವತಿಸಿದ್ದರು. ಉಳಿದ ಸ್ಥಳದಲ್ಲಿ ನಿವೇಶನ ನಿರ್ಮಿಸಲಾಗದ ಕಾರಣ ನನೆಗುದಿಗೆ ಬಿತ್ತು. ಪ್ರಾಧಿಕಾರ ಹಣ ಹಿಂದಿರುಗಿಸಲು ಸಿದ್ಧವಿದ್ದರೂ ಜನರು
ಒಪ್ಪಿರಲಿಲ್ಲ. ಆದರೆ, ಈವರೆಗೂ ನಿವೇಶನಗಳು ಮಾತ್ರ ಕೈಗೆಟುಕಿಲ್ಲ.

Advertisement

ಮತ್ತೆ ಹೆಚ್ಚಿದ ಬೇಡಿಕೆ
ಈಗ ಆರ್‌ಟಿಒ ಕಚೇರಿಯಿಂದ ಹೈಟೆಕ್‌ ಚಾಲನಾ ಪಥ ಇದೇ ಸಿದ್ರಾಂಪುರ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಜನ ಸಂಚಾರ ಹೆಚ್ಚಾಗಲಿದೆ. ಇನ್ನೂ ಈ ಭಾಗದಲ್ಲಿ ನಗರ ಸಾಕಷ್ಟು ಬೆಳವಣಿಗೆಯಾಗಿದ್ದು, ಸ್ಥಳಕ್ಕೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಈಗ ಸಿದ್ರಾಂಪುರ ಲೇಔಟ್‌ಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ.

ನಾನು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರ ಸ್ವೀಕರಿಸಿದ ಬಳಿಕ ಹೊಸ ಬಡಾವಣೆ ನಿರ್ಮಿಸುವ ಆಲೋಚನೆ ಇತ್ತು. ಆದರೆ, ಸಿದ್ರಾಂಪುರ ಬಡಾವಣೆ ಸಮಸ್ಯೆ ದಶಕಗಳಿಂದ ಮುಕ್ತಿ ಕಾಣದೇ ಉಳಿದಿತ್ತು. ಹೀಗಾಗಿ ಅಲ್ಲಿನ ವಸ್ತು ಸ್ಥಿತಿ ಅರಿತು ಸರ್ಕಾರಕ್ಕೆ ಮತ್ತೂಂದು ಪ್ರಸ್ತಾವನೆ ಸಲ್ಲಿಸಲಾಗಿದೆ. 21.88 ಎಕರೆಯಲ್ಲಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬಹುದು. ಉಳಿದ 29 ಎಕರೆ ಅಭಿವೃದ್ಧಿಪಡಿಸಿದರೆ ಮತ್ತೂಂದು ಬಡಾವಣೆ ನಿರ್ಮಿಸಬಹುದು. ಆದರೆ, ಅದಕ್ಕೆ ಹಣದ ಅಭಾವ ಕಾಡುತ್ತಿದೆ.
ಯಾಪಚೆಟ್ಟಿ ಗೋಪಾಲರೆಡ್ಡಿ, ಆರ್‌ಡಿಎ ಅಧ್ಯಕ್ಷ

*ಸಿದ್ದಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next