Advertisement

ಸಿದ್ದು –ಪ್ರಸಾದ್‌ ಪ್ರತಿಷ್ಠೆಯ ಕಣ “ನಂಜನಗೂಡು’

03:45 AM Apr 07, 2017 | Harsha Rao |

ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್‌ ಅವರ ರಾಜೀನಾಮೆಯಿಂದ ತೆರವಾಗಿರುವ ನಂಜನಗೂಡಿನಲ್ಲಿ ನಡೆಯುತ್ತಿರುವ ಉಪಚುನಾವಣೆಯ ಕಾವು ರಂಗೇರುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಹಾಗೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್‌ ನಡುವೆ ಬಿರುಸಿನ ಸ್ಪರ್ಧೆಯಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್‌ ಪ್ರಸಾದ್‌ ನಡುವಿನ ಪ್ರತಿಷ್ಠೆಯ ಕಣವಾಗಿ ಇದು ಪರಿವರ್ತಿತವಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ಅಭ್ಯರ್ಥಿಗಳೊಂದಿಗೆ “ಉದಯವಾಣಿ’ ನಡೆಸಿದ ಸಂದರ್ಶನ ಹಾಗೂ ಕ್ಷೇತ್ರವಾರು ವಿವರ ಇಲ್ಲಿದೆ…

Advertisement

ಷಡ್ಯಂತ್ರಕ್ಕೆ  ಮತದಾರರಿಂದ ತಕ್ಕ ಉತ್ತರ 
ಉಪ ಚುನಾವಣೆಯ ಪ್ರಚಾರ ಹೇಗೆ ನಡೆಯುತ್ತಿದೆ?

– ಬಿರುಸಿನಿಂದ ನಡೀತಿದೆ. ಹಿಂದೆ ತ್ರಿಕೋನ ಸ್ಪರ್ಧೆ ಇರುತ್ತಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ.

– ಕ್ಷೇತ್ರದಲ್ಲಿ ವಾತಾವರಣ ಹೇಗಿದೆ?
-ಉಪ ಚುನಾವಣೆ ಬಂದಿದ್ದೇಕೆ ಎಂಬುದನ್ನು ಕ್ಷೇತ್ರದ ಜನತೆಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಹಿಂದೆ ನಾನು ಐದು ಬಾರಿ ಪ್ರತಿ ನಿಧಿಸಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ (ನಂಜನಗೂಡು- ಗುಂಡ್ಲುಪೇಟೆ) ಎರಡೂ ಉಪ ಚುನಾವಣೆ ಬಂದಿದೆ. ಎರಡೂ ಕಡೆ ಬಿಜೆಪಿಗೆ ಉತ್ತಮ ವಾತಾವರಣ ಇದೆ.

– ಈ ಉಪ ಚುನಾವಣೆ ಬಂದಿದ್ದೇಕೆ?
– ಸ್ವಾಭಿಮಾನ ವರ್ಸಸ್‌ ಷಡ್ಯಂತ್ರ ಈ ಉಪ ಚುನಾವಣೆಯ ವಿಷಯ. ಕಳೆದ ನಾಲ್ಕು ವರ್ಷಗಳಿಂದಲೂ ಸಿದ್ದರಾಮಯ್ಯ ನನ್ನ ವಿರುದ್ಧ ಷಡ್ಯಂತ್ರ ಮಾಡಿದರು. ಸ್ವಾಭಿಮಾನ ಮತ್ತು ಆತ್ಮ ಗೌರವದ ಪ್ರಶ್ನೆ ಬಂದಾಗ ರಾಜೀನಾಮೆ ಕೊಟ್ಟು
ಈ ಉಪ ಚುನಾವಣೆಗೆ ಬರಬೇಕಾಯಿತು.

– ಫ‌ಲಿತಾಂಶ ಏನಾಗಬಹುದು?
– ನಂಜನಗೂಡು ಕ್ಷೇತ್ರದ ಯಾವುದೇ ಹಳ್ಳಿಗೆ ಹೋದರೂ ಸ್ವಾಭಿಮಾನದ ಪ್ರಜ್ಞೆ ಜಾಗೃತವಾಗಿ, ಬಿಜೆಪಿ ಪರ ಒಲವು ವ್ಯಕ್ತವಾಗಿ ಒಳ್ಳೆಯ ವಾತಾವರಣ ಇದೆ. ಹೀಗಾಗಿ ಗೆಲ್ಲುವ ಆತ್ಮಸ್ಥೈರ್ಯ ಬಂದಿದೆ. 1972ರಲ್ಲಿ ಪ್ರಧಾನಿ ಇಂದಿರಾಗಾಂಧಿಯವರು “ಗರೀಬಿ ಹಠಾವೋ’ ಎಂಬ ಕ್ರಾಂತಿಕಾರಕ ಘೋಷಣೆ ಮಾಡಿದ್ದರು. ಅದರ ನಡುವೆಯೂ ಅಂದು ಮೈಸೂರಿನ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಅಶೋಕಪುರಂನ ಸಂಪೂರ್ಣ ಮತ ಪಡೆದಿದ್ದೆ.

Advertisement

– ಕ್ಷೇತ್ರದಲ್ಲಿ ಕೆಲಸವನ್ನೇ ಮಾಡದೆ ಕಡೆಗಣಿಸಿದ್ದರು ಎಂಬ ಆರೋಪವಿದೆಯಲ್ಲ?
– ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬುದು ವಿರೋಧಪಕ್ಷದವರ ಟೀಕೆ. ಇದಕ್ಕೆ ನಾನು ಉತ್ತರ
ನೀಡುವುದಕ್ಕಿಂತ ಕ್ಷೇತ್ರವನ್ನು ಒಂದು ಸುತ್ತು ಹಾಕಿದರೆ ಕಳೆದ 8 ವರ್ಷಗಳಲ್ಲಿ ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾಣುತ್ತದೆ.

– ನೀವು ರಾಜೀನಾಮೆ ಕೊಟ್ಟ ನಂತರ ನಂಜನಗೂಡಿನ ಅಭಿವೃದ್ಧಿ ಪರ್ವ ಆರಂಭವಾಗಿದೆ ಅಂತಾರೆ?
– ಉಪಚುನಾವಣೆ ನೆಪದಲ್ಲಿ 800 ಕೋಟಿ ರೂ.ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂಬ ಮಾತಿದೆ. ಆದರೆ, ಈ ಪೈಕಿ ಬಹುತೇಕ ಯೋಜನೆಗಳು ನನ್ನ ಅವಧಿಯಲ್ಲಿ ಮಂಜೂರಾಗಿದ್ದವಕ್ಕೆ ಅಡಿಗಲ್ಲು ಹಾಕಿದ್ದಾರೆ.

– ಬದನವಾಳು ಘಟನೆ ವಿಚಾರ ಈ ಚುನಾವಣೆಯಲ್ಲಿ ಪ್ರಸ್ತಾಪಿಸುತ್ತಿರುವುದೇಕೆ?
– ಬದನವಾಳು ಘಟನೆ 1993ರಲ್ಲಿ ನಡೆದಿದೆ. ಆನಂತರದ ಯಾವುದೇ ಚುನಾವಣೆಯಲ್ಲೂ ಈ ಘಟನೆ ನನಗೆ ವ್ಯತಿರಿಕ್ತವಾಗಿ ಪರಿಣಮಿಸಿಲ್ಲ. ಈ ಉಪಚುನಾವಣೆಯಲ್ಲಿ ಆ ವಿಷಯ ಪ್ರಸ್ತಾಪಿಸಿ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಜನ ಇವರ ಮಾತುಗಳನ್ನು ನಂಬುವುದಿಲ್ಲ ಎಂಬ ವಿಶ್ವಾಸವಿದೆ.

ಜನಪರ ಯೋಜನೆಗಳೇ ನನಗೆ ಶ್ರೀರಕ್ಷೆ
– ಕ್ಷೇತ್ರದಲ್ಲಿ ವಾತಾವರಣ ಹೇಗಿದೆ?
– ನಾವು ಹೋದಲ್ಲೆಲ್ಲ ಕಾಂಗ್ರೆಸ್‌ ಪಕ್ಷದ ಪರ ಒಲವು ವ್ಯಕ್ತವಾಗುತ್ತಿದೆ. ಮುಖ್ಯವಾಗಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಜನಪರ ಯೋಜನೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ.
ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ…ಹೀಗೆ ಒಂದಲ್ಲಾ ಒಂದು ಯೋಜನೆಯ ಸವಲತ್ತು ಜನರ ಮನೆ ಬಾಗಿಲಿಗೆ ತಲುಪಿದೆ. ಅದೇ ನನಗೆ ಶ್ರೀರಕ್ಷೆ.

– ಉಪ ಚುನಾವಣೆ ಹೇಗನಿಸುತ್ತಿದೆ?
– ಅಭ್ಯರ್ಥಿಯಾದವರಿಗೆ ಸಾರ್ವತ್ರಿಕ, ಉಪ ಚುನಾವಣೆ ಎರಡೂ ಒಂದೇ. ಆದರೆ, ಪಕ್ಷದ ಪಾಲಿಗೆ ಉಪ ಚುನಾವಣೆ ಪ್ರತಿಷ್ಠೆಯಾಗಿರುತ್ತದೆ. ಸಾಮೂಹಿಕವಾಗಿ ಹಳ್ಳಿ ಹಳ್ಳಿಗೆ ಹೋಗಿ ಸ್ಥಳೀಯ ಮುಖಂಡರು ಹೇಳಿದಂತೆಯೇ ಮತಯಾಚನೆ
ಮಾಡುತ್ತಿದ್ದೇವೆ. ಅದರ ಜತೆಗೆ ಅಭ್ಯರ್ಥಿಯಾಗಿ ಮತದಾರರ ಮನೆಬಾಗಿಲಿಗೆ ಹೋಗಿ ಮತಯಾಚಿಸುವ ಕೆಲಸ ಮಾಡುತ್ತಿದ್ದೇನೆ.

– ಮುಖ್ಯಮಂತ್ರಿ ಸೇರಿದಂತೆ ಹತ್ತಾರು ಮಂತ್ರಿಗಳು ನಂಜನಗೂಡಿನಲ್ಲಿ ಠಿಕಾಣಿ ಹೂಡಿದ್ದಾರಲ್ಲ?
-ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೊಂದು ತಂಡ ಮಾಡಿದ್ದಾರೆ. ಮುಖ್ಯಮಂತ್ರಿಗಳು, ಮಂತ್ರಿಗಳು, ಪಕ್ಷದ ಹಿರಿಯ ನಾಯಕರು,
ಕಾರ್ಯಕರ್ತರು ಬಂದು ಪ್ರಚಾರ ಮಾಡುತ್ತಿದ್ದಾರೆ. ಪಕ್ಷದ ಕೆಲ ಮುಖಂಡರು, ಕಾರ್ಯಕರ್ತರಂತೂ ಶಿಕಾರಿಪುರ ಸೇರಿದಂತೆ ದೂರದ ಊರುಗಳಿಂದ ಸ್ವಯಂಪ್ರೇರಿತರಾಗಿ ಬಂದು ಕೆಲಸ ಮಾಡುತ್ತಿದ್ದಾರೆ. ಜತೆಗೆ ಉಪ ಚುನಾವಣೆ ಹೇಗೆ ನಡೆಯುತ್ತದೆ ಎಂಬ ಕುತೂಹಲದಿಂದಲೂ ಹೊರಗಿನವರು ಹೆಚ್ಚಿನ ಸಂಖ್ಯೆಯಲ್ಲಿ ನಂಜನಗೂಡಿಗೆ ಬಂದು ನೋಡಿಕೊಂಡು ಹೋಗುತ್ತಿದ್ದಾರೆ.

– ಈಗ ಆಯ್ಕೆಯಾದರೆ, ಈ ಅಲ್ಪ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಹೇಗೆ ಮಾಡುತ್ತೀರಾ?
ಡಾ.ಎಚ್‌.ಸಿ.ಮಹದೇವಪ್ಪ ಅವರು ಜಿಲ್ಲಾಮಂತ್ರಿಯಾದ ನಂತರ ನಂಜನಗೂಡು ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ
ಕೆಲಸಗಳ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಸ್ಥಳೀಯ ಸಂಸದ ಧ್ರುವನಾರಾಯಣ ಅವರ ಜತೆ ಸೇರಿ
ಸುಮಾರು 600 ಕೋಟಿ ರೂ.ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದಾರೆ. ಈ ಪೈಕಿ ಒಂದಷ್ಟು ಮುಕ್ತಾಯ ಹಂತಕ್ಕೆ ಬಂದಿವೆ. ಕೆಲವು ಕಾಮಗಾರಿ ಪ್ರಗತಿಯಲ್ಲಿವೆ, ಇನ್ನು ಕೆಲವು ಆರಂಭವಾಗಬೇಕಿದೆ. ಈ ಎಲ್ಲ
ಕಾಮಗಾರಿಗಳನ್ನು ಪೂರ್ಣಗೊಳಿಸಿದರೆ ಸಾಕು, ನಂಜನಗೂಡು ಬೇರೆಲ್ಲಾ ಕ್ಷೇತ್ರಗಳಿಗಿಂತ ಹೆಚ್ಚು
ಅಭಿವೃದ್ಧಿಯಾದಂತಾಗುತ್ತದೆ.

– ಈ ಉಪ ಚುನಾವಣೆ ಸಿಎಂ, ಬಿಎಸ್‌ವೈ ನಡುವಿನ ಸಂಘರ್ಷ ಎಂಬ ಮಾತಿದೆಯಲ್ಲ?
ಹಾಗೇನಿಲ್ಲ. ಇದು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಚುನಾವಣಾ ಸಂಘರ್ಷ ಮಾತ್ರ. ಹಿಂದಿನ ಎರಡು ಚುನಾವಣೆಗಳಲ್ಲಿ ತ್ರಿಕೋನ ಸ್ಪರ್ಧೆ ಇತ್ತು. ಈಗ ನೇರಾನೇರ ಸ್ಪರ್ಧೆ ಇದೆ.

– ಮೂರನೇ ಪ್ರಯತ್ನದಲ್ಲಿ ವಿಧಾನಸೌಧ ಪ್ರವೇಶಿಸುವ ಭರವಸೆ ಇದೆಯಾ?
ಕ್ಷೇತ್ರದ ಜನರು ಏನು ತೀರ್ಮಾನ ಕೊಡುತ್ತಾರೊ ಅದಕ್ಕೆ ತಲೆ ಬಾಗುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next