ಚಂಡಿಗಢ: 2022 ರಲ್ಲಿ ಹತ್ಯೆಗೀಡಾದ ಪಂಜಾಬಿ ಗಾಯಕ ಸಿದ್ದು ಮೂಸೆವಾಲ ಪೋಷಕರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಮೂಸೆವಾಲ ಅವರ ತಾಯಿ ಚರಣ್ ಕೌರ್ ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿರುವುದಾಗಿ ವರದಿಯಾಗಿದೆ.
ಬಲ್ಕೌರ್ ಸಿಂಗ್ – ಚರಣ್ ಕೌರ್ ದಂಪತಿಗೆ ಸಿದ್ದು ಮೂಸೆವಾಲ ಒಬ್ಬನೇ ಮಗನಾಗಿದ್ದ. ಸದ್ಯ ಈ ಬಗ್ಗೆ ಅವರ ಪೋಷಕರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಶೀಘ್ರದಲ್ಲೇ ಹೆರಿಗೆಯ ನಿರೀಕ್ಷೆಯಿದೆ ಎಂದು ಮೂಲಗಳು ಖಚಿತಪಡಿಸಿವೆ.
ಚರಣ್ ಕೌರ್ ಆರು ತಿಂಗಳಿನಿಂದ ಸಾರ್ವಜನಿಕರಿಂದ ದೂರ ಉಳಿದಿದ್ದಾರೆ ಎಂದು ವರದಿ ತಿಳಿಸಿದೆ. ದಂಪತಿಗಳಿಗೆ ಐವತ್ತು ದಾಟಿದ ವಯಸ್ಸಾಗಿದೆ ಎಂದು ವರದಿ ತಿಳಿಸಿದೆ.
2022 ರ ಮೇ 29 ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಮೂಸೆವಾಲ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಅದೇ ವರ್ಷದಲ್ಲಿ ಅವರು ಮಾನ್ಸಾದಿಂದ ಕಾಂಗ್ರೆಸ್ ಟಿಕೆಟ್ನಲ್ಲಿ ಪಂಜಾಬಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
ಈ ಪ್ರಕರಣದಲ್ಲಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಸೇರಿದಂತೆ 31 ಆರೋಪಿಗಳನ್ನು ಹೆಸರು ಕೇಳಿ ಬಂದಿದ್ದು, ಇದುವರೆಗೆ 25 ಮಂದಿಯನ್ನು ಬಂಧಿಸಲಾಗಿದೆ.