Advertisement

ಸಿದ್ದು “ಆಪ್ತ ಮಾತುಕತೆ”ವಿವಾದ

10:25 AM Oct 30, 2019 | mahesh |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮತ್ತಷ್ಟು ಬಲವಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ವಿರುದ್ಧ ತನ್ನ ಆಪ್ತರ ಜತೆ ಖಾಸಗಿಯಾಗಿ ಮಾತನಾಡಿದ್ದರೆ ಎನ್ನಲಾದ ವೀಡಿಯೋ ವೈರಲ್‌ ಆಗಿ ಚರ್ಚೆಗೆ ಗ್ರಾಸವಾಗಿದೆ.

Advertisement

ಡಿಕೆಶಿ ಬಿಡುಗಡೆಗೊಂಡು ಬೆಂಗಳೂರಿಗೆ ಬಂದಾಗ ಜೆಡಿಎಸ್‌ ಬಾವುಟ ಕೈಯಲ್ಲಿ ಹಿಡಿದುಕೊಂಡ ಬಗ್ಗೆ ಸಿದ್ದರಾಮಯ್ಯ ತಕರಾರು ಎತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಅಷ್ಟೇ ಅಲ್ಲದೆ, ಲಿಂಗಾಯತರು ಯಡಿಯೂರಪ್ಪ ಅವರಿಂದ, ಒಕ್ಕಲಿಗರು ಕುಮಾರಸ್ವಾಮಿ ಅವರಿಂದ ದೂರವಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಆಪ್ತರೊಂದಿಗೆ ಮಾತುಕತೆ ಸಂದರ್ಭ ರೆಕಾರ್ಡ್‌ಆದ ವೀಡಿಯೋ ಸೋರಿಕೆ ಹೇಗಾಯಿತು ಎನ್ನುವ ಚರ್ಚೆ ಆರಂಭವಾಗಿದೆ. ಒಂದು ಮೂಲದ ಪ್ರಕಾರ ಅಲ್ಲಿ ದ್ದವರೇ ಸೋರಿಕೆ ಮಾಡಿದ್ದಾರೆ. ಇನ್ನೊಂದು ಮೂಲದ ಪ್ರಕಾರ ಉದ್ದೇಶಪೂರ್ವಕ ಇದನ್ನು ಬಿಡುಗಡೆ ಮಾಡಲಾಗಿದೆ.

ಕಾಂಗ್ರೆಸ್‌ನಲ್ಲಿ ಆಂತರಿಕ ಸಂಘರ್ಷವಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಬಿಜೆಪಿ ಲೇವಡಿ ಮಾಡಿದೆ. ಸಿದ್ದರಾಮಯ್ಯ ಮಾತಿನಲ್ಲಿ ಲಿಂಗಾ ಯತರು, ಒಕ್ಕಲಿಗರು, ಡಿಕೆಶಿ ಬಗ್ಗೆ ಪ್ರಸ್ತಾವಿಸಿರುವ ಬಗ್ಗೆ ಕಾಂಗ್ರೆಸ್‌ನಲ್ಲಿಯೂ ನಾನಾ ವ್ಯಾಖ್ಯಾನಗಳು ಕೇಳಿಬರುತ್ತಿವೆ. ರಾಜಕೀಯವಾಗಿ ಇದರಿಂದ ಉಂಟಾಗಬಹುದಾದ ಲಾಭ -ನಷ್ಟಗಳ ಬಗ್ಗೆ ಲೆಕ್ಕಾಚಾರಗಳು ಆರಂಭವಾಗಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್‌, ನನ್ನನ್ನು ಸ್ವಾಗತಿಸಲು ಎಲ್ಲರೂ ಬಂದಿದ್ದರು. ಕಾಂಗ್ರೆಸ್‌, ಜೆಡಿಎಸ್‌, ಕನ್ನಡ ಪರ ಸಂಘಟನೆಗಳ ನಾಯಕರು ಬಂದಿದ್ದರು. ಆಗ ಅವರ ಬಾವುಟ ಕೊಟ್ಟರು. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ನಾನು ಹುಟ್ಟಾ ಕಾಂಗ್ರೆಸಿಗ, ಕಾಂಗ್ರೆಸ್‌ ಪಕ್ಷವನ್ನು ದೇವಸ್ಥಾನ ಎಂದು ನಂಬಿರುವವನು ಎಂದುಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ನನ್ನ ಬಗ್ಗೆ ಪ್ರೀತಿಯಿದೆ. ಅವರು ನನ್ನ ಬಗ್ಗೆ ಹಾಗೆ ಹೇಳಿರಲು ಸಾಧ್ಯವಿಲ್ಲ. ಯಾರಾದರೂ ದಾರಿ ತಪ್ಪಿಸಿರಬಹುದು ಎಂದೂ ತಿಳಿಸಿದ್ದಾರೆ.

Advertisement

ಇದರ ಬೆನ್ನಲ್ಲೇ ಸಿದ್ದರಾಮಯ್ಯ ಟ್ವೀಟ್‌ ಮೂಲಕ ವಿಡಿಯೋ ವೈರಲ್‌ಗೆ ಪ್ರತಿಕ್ರಿಯಿಸಿದ್ದಾರೆ. ವಿಡಿಯೋದಲ್ಲಿನ ಅಂಶಗಳ ಬಗ್ಗೆ ತಪ್ಪು ವ್ಯಾಖ್ಯಾನ ಮಾಡಲಾಗಿದೆ. ರಾಜಕೀಯ ಪಕ್ಷಗಳು ನೈತಿಕವಾಗಿ ದಿವಾಳಿಯಾದಾಗ ಇಂತಹ ಅಸತ್ಯಗಳು ಹುಟ್ಟಿಕೊಳ್ಳುತ್ತವೆ. ವೈಯಕ್ತಿಕ ದಾಳಿಗಳು ನನ್ನ ಸಾಮಾಜಿಕ ಬದ್ಧತೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ ಮತ್ತು ಜನರಿಗಾಗಿ ಹೋರಾಡುವ ಹುಮ್ಮಸ್ಸು ಇಮ್ಮಡಿಗೊಳಿಸುತ್ತದೆ. ಇದಕ್ಕಾಗಿ ನನ್ನ ರಾಜಕೀಯ ವಿರೋಧಿಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಧರ್ಮಸ್ಥಳದಿಂದ ಪ್ರಾರಂಭ
ಸಿದ್ದರಾಮಯ್ಯ ಅವರು ಭಿನ್ನಧ್ವನಿ ಎತ್ತಿರುವುದು ಇದೇ ಮೊದಲಲ್ಲ. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ರಚನೆಯಾದಾಗ ಸಿದ್ದರಾಮಯ್ಯ ಅವರು ಧರ್ಮಸ್ಥಳದಲ್ಲಿ ಆಪ್ತರ ಜತೆ ಮಾತನಾಡುತ್ತ “ಲೋಕಸಭೆ ಚುನಾವಣೆವರೆಗೂ ಮಾತ್ರವೇ ಈ ಸರಕಾರದ ಆಯುಷ್ಯ. ಆಮೇಲೆ ಏನಾಗುತ್ತೋ’ ಎಂದಿದ್ದರು.

ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ಸಮ್ಮಿಶ್ರ ಸರಕಾರದಲ್ಲಿ ಸಿದ್ದರಾಮಯ್ಯ ಅವರ ಮಾತು ಸಂಚಲನ ಮೂಡಿಸಿತ್ತು. ಅಲ್ಲಿಂದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವಿನ ಆಂತರಿಕ ಸಂಘರ್ಷ ಬಹಿರಂಗವಾಯಿತು.
ವಿಧಾನಸಭೆ ಚುನಾವಣೆಗೆ ಮುನ್ನವೂ ಹೊಳೇನರಸೀಪುರ ಕ್ಷೇತ್ರಕ್ಕೆ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಮಂಜೇಗೌಡರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿ, “ಹೊಳೇನರಸೀಪುರ- ಹಾಸನದಲ್ಲಿ ದೇವೇಗೌಡರ ಕುಟುಂಬ ಮಾತ್ರ ರಾಜಕಾರಣ ಮಾಡಬೇಕಾ, ಹೋಗಿ ನಿಲ್ಲು’ ಎಂದಿದ್ದರು.

ಮೈತ್ರಿ ಸರಕಾರ ಪತನವಾದ ಅನಂತರ ಸಿದ್ದರಾಮಯ್ಯ ಬಗ್ಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಸಮ್ಮಿಶ್ರ ಸರಕಾರ ಪತನಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದಿದ್ದರು. ಇತ್ತೀಚೆಗಷ್ಟೇ ಸಿದ್ದರಾಮಯ್ಯ ಅವರು ಮತ್ತೂಮ್ಮೆ “ಜೆಡಿಎಸ್‌ ಸಹವಾಸ ಮಾಡಿ ಅನುಭವಿಸಿದ್ದು ಸಾಕು’ ಎಂದು ಹೇಳಿದ್ದುದು ಕೂಡ ಪರ-ವಿರೋಧ ಚರ್ಚೆ ಹುಟ್ಟು ಹಾಕಿತ್ತು.

ಡಿ.ಕೆ. ಶಿವಕುಮಾರ್‌ ಜೆಡಿಎಸ್‌ ಬಾವುಟ ಹಿಡಿದು ಕೊಂಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಅವರನ್ನು ಸ್ವಾಗತಿಸಲು ಹೋದಾಗ ಕೊಟ್ಟಿರಬಹುದು, ಹಿಡಿದುಕೊಂಡಿರಬಹುದು. ಅದಕ್ಕೆ ಬೇರೆ ರೀತಿಯ ವ್ಯಾಖ್ಯಾನಗಳೂ ಸರಿಯಲ್ಲ.
– ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

ಕಾಂಗ್ರೆಸ್‌ನಲ್ಲಿ ಗೊಂದಲವಿದೆ. ಡಿ.ಕೆ. ಶಿವಕುಮಾರ್‌ ಬಗ್ಗೆ ಸಿದ್ದರಾಮಯ್ಯ ಅವರು ಆಪ್ತರ ಜತೆ ಮಾತನಾಡಿರುವುದೇ ಇದಕ್ಕೆ ಸಾಕ್ಷಿ. ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿದ್ದಾರೆ.
– ಆರ್‌. ಅಶೋಕ್‌, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next