Advertisement

ಜಗತ್ತನ್ನು ಆಳುತ್ತಿದೆ ರಾಕ್ಷಸ ಚಕ್ರವರ್ತಿ

03:46 PM Mar 21, 2023 | Team Udayavani |

ಮೊಬೈಲ್‌ ಇತ್ತೀಚೆಗೆ ಜಗತ್ತು ಬಹಳ ವೇಗವಾಗಿ ಬೆಳೆಯುತ್ತಿದೆ. ಜತೆಗೆ ಜನರು ಕೂಡ ಬೆಳೆಯುತ್ತಿದ್ದಾರೆ. ಮೊದಲಿನಂತೆ ಯಾವುದೂ ಇಲ್ಲ. ಜನರನ್ನು ಜನರೇ ಉಪಯೋಗಿಸಿ ಎಸೆಯುವಂತಹ ಕರವಸ್ತ್ರದಂತೆ ನಡೆಸಿಕೊಳ್ಳುತ್ತಿದ್ದಾರೆ. ಸಂಬಂಧಗಳಿಗೆ ಮೊದಲೇ ಇಲ್ಲಿ ಬೆಲೆ ಇಲ್ಲ. ಪ್ರಸ್ತುತ ಮನುಷ್ಯನಿಗೆ ಮನುಷ್ಯನ ಬಳಿ ಮಾತನಾಡಲು ಸಮಯವಿಲ್ಲ, ಅದರ ಬದಲು ಕುಳಿತು ಗಂಟೆಗಟ್ಟಲೆ ಮೊಬೈಲ್‌ ನೋಡಲು ಸಮಯ ಸಿಗುತ್ತದೆ. ಇಂತವರಿಗೆ ಮನೆಯವರು, ಗೆಳೆಯರು, ಸಂಬಂಧಿಕರ ಪರಿಚಯವೇ ಅಪರೂಪ.

Advertisement

ಜಾಲತಾಣದಲ್ಲಿ ಎಲ್ಲರೊಂದಿಗೆ ಮಾತನಾಡಿದರೂ ಎದುರು ಸಿಗುವಾಗ ಮುಖದ ಪರಿಚಯವೇ ಇಲ್ಲವೆನ್ನುವಂತೆ ಇರುತ್ತಾರೆ. ಬೆಳಕಲ್ಲಿ ಕುಳಿತು ಕತ್ತಲನ್ನು ದಿಟ್ಟಿಸುವಂತೆ ಅವರ ಜೀವನ. ಸುತ್ತಲೂ ಏನಾಗುತ್ತಿದೆ ಎನ್ನುವ ಪರಿವೆಯೇ ಇಲ್ಲದೆ ಅಗತ್ಯವಿಲ್ಲದ ವಿಷಯಗಳಿಗಾಗಿ ಮೊಬೈಲ್‌ ಹಿಡಿದು ಒಂದು ಮೂಲೆಯಲ್ಲಿ ಹೋಗಿ ಸೇರಿದರೆ ಮುಗಿಯಿತು. ತಿಂಡಿ, ಊಟ, ನಿದ್ರೆ, ಕೊನೆಗೆ ಸಂಬಂಧವೂ ಬೇಡ.

ಮನೆಯಲ್ಲಿ ಅಪ್ಪ ಅಮ್ಮ ಎನ್ನುವವರು ಗಾಣದ ಎತ್ತಿನ ರೀತಿ ಹಗಲು ರಾತ್ರಿ ಶ್ರಮಿಸಿ ತಮ್ಮ ಮಕ್ಕಳು ಚೆನ್ನಾಗಿರಲಿ ಎಂದು ತಮ್ಮನ್ನು ತಾವು ದಂಡಿಸಿಕೊಳ್ಳುತ್ತಾರೆ. ಆದರೆ ಮೊಬೈಲ್‌ ಎನ್ನುವ ಚಕ್ರವರ್ತಿಯು ಜಗತ್ತನ್ನು ಆಳಲು ಪ್ರಾರಂಭಿಸಿದ ಬಳಿಕ ಮನೆಯ ಸದಸ್ಯರು ಮೊಬೈಲ್‌ ಬಿಟ್ಟು ಅಲುಗಾಡದೆ ಇರುವ ಸ್ಥಿತಿ ಬಂದೊದಗಿದೆ. ಹಿರಿಯರು ಎನ್ನುವವರು ಮನೆಯಲ್ಲಿ ಇದ್ದರೂ ಅವರನ್ನು ಲೆಕ್ಕಿಸದೆ ತಮ್ಮದೇ ಆದ ಜಗತ್ತಲ್ಲಿ ಮುಳುಗಿರುತ್ತಾರೆ. ಅದು ಯಾವ ಮಟ್ಟಿನಲ್ಲಿ ಜನರು ಜಾಲತಾಣಕ್ಕೆ ಅಂಟಿಕೊಂಡಿರುತ್ತಾರೆ ಎಂದರೆ ಆಸ್ಪತ್ರೆಯಲ್ಲಿ ರೋಗಿ ಮಲಗಿಕೊಂಡು ಇರುವ ದೃಶ್ಯದ ಜತೆ ಆತನಿಗೆ ಸಂಬಂಧ ಪಟ್ಟ ವ್ಯಕ್ತಿಯು ಊಟ ಮಾಡಿಸುತ್ತಿರುವುದನ್ನು ಫೋಟೋ ತೆಗೆದು ಜಾಲತಾಣಕ್ಕೆ ಹಾಕುವ ಸಲುವಾಗಿ ಆತನಿಗೆ ಸರಿಯಾಗಿ ಆಹಾರ ಕೊಡದೆ ರೋಗಿಯ ಬಾಯಿಯ ಬಳಿ ಆಹಾರವನ್ನು ತಿನ್ನಿಸುವ ರೀತಿಯಾಗಿ ಇಟ್ಟು ತನಗೆ ಬೇಕಾದ ಹಾಗೆ ಫೋಟೋ ತೆಗೆಯುತ್ತಾರೆ. ರೋಗಿಯನ್ನು ಪೀಡಿಸುವುದನ್ನು ನೋಡುವಾಗ ಒಂದು ತಿಂಗಳಲ್ಲಿ ಗುಣವಾಗುವ ರೋಗಿ ಒಂದು ವರ್ಷವಾದರೂ ಏಳಲಿಕ್ಕಿಲ್ಲ ಎಂದೆನಿಸುತ್ತದೆ.

ಈಗಿನ ಫೇಸ್ನುಕ್‌, ಇನ್‌ಸ್ಟಾಗ್ರಾಮ್‌, ಟ್ವಿಟರ್‌ ಮುಂತಾದ ಹೊಸ ಹೊಸ ಆ್ಯಪ್‌ ಗಳಲ್ಲಿ ಜನರು ಹೆಚ್ಚು ಲೈಕ್ಸ್‌ ಮತ್ತು ಕಾಮೆಂಟ್ಸ್‌ ಬರಲಿ ಎಂದು ಕುಣಿಯುತ್ತಾರೆ. ಸಾಗುವ ದಾರಿಯಲ್ಲಿ ಯಾವುದೋ ವ್ಯಕ್ತಿ ನರಳಾಡುತ್ತಿದ್ದರೂ ಅದನ್ನು ವೀಡಿಯೋ ಮಾಡುವ ಜನರೇ ಇಲ್ಲಿ ಹೆಚ್ಚಾಗಿದ್ದಾರೆ. ಮೊಬೈಲಿನ ಜತೆ ಸೇರಿ ತಾವು ಯಂತ್ರದಂತೆ ವರ್ತಿಸುವುದನ್ನು ಕಲಿತಿದ್ದಾರೆ. ಜನರಿಗೆ ಭಾವನೆಗಳೇನಿದ್ದರೂ ಅದು ಬೆಳೆಯುವುದು ಮಾತ್ರ ಈಗಿನ ಮೊಬೈಲ್‌ಗ‌ಳೊಂದಿಗೆ. ತನಗೇನಾದರು ಪರವಾಗಿಲ್ಲ ಆದರೆ ತನ್ನ ಮೊಬೈಲ್‌ಗೆ ಒಂದು ಗೆರೆಯೂ ಆಗಕೂಡದು ಎನ್ನುವಷ್ಟು ಜಾಗೃತೆ.

ಮೊಬೈಲ್‌ ಎನ್ನುವ ರಾಕ್ಷಸ ಚಕ್ರವರ್ತಿಯಾಗಿ ಇಡೀ ಜಗತ್ತನ್ನು ಆಳುತ್ತಿರುವುದು ಒಂದು ಬೇಸರದ ಸಂಗತಿಯಾಗಿದೆ. ಮೊಬೈಲಿನಿಂದ ಒಳ್ಳೆಯದಿದ್ದರೂ ಅದರ ಹತ್ತು ಪಟ್ಟು ಜಾಸ್ತಿ ಕೆಟ್ಟದಾಗುತ್ತಿರುವುದಕ್ಕೆ ಈಗಿನ ಜನರೇ ಸಾಕ್ಷಿ. ಹುಟ್ಟಿದ ಮಗುವಿನಿಂದ ಹಿಡಿದು ಕೊನೆಯುಸಿರೆಳೆಯುವ ಮನುಷ್ಯರಲ್ಲಿ ಮೊಬೈಲನ್ನು ಬಳಸದವರೇ ಇಲ್ಲ. ಅಂತಹದ್ದೇನಾದರೂ ಇದ್ದಲ್ಲಿ ಅದೊಂದು ಪವಾಡವೇ ಸರಿ.

Advertisement

– ಪೂರ್ಣಶ್ರೀ ಕೆ. ­ ಎಸ್‌ಡಿಎಂ ಕಾಲೇಜು ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next