Advertisement
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಉಪ ಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿ ಬಹುತೇಕ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿ ಯಾಗಿದ್ದು, ಕನಿಷ್ಠ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಳು ಗೆಲ್ಲುತ್ತಾರೆಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿನ ಸಿದ್ದರಾಮಯ್ಯ ವಿರೋಧಿ ಬಣದವರ ಪ್ರಕಾರ ಸಿದ್ದರಾಮಯ್ಯ ಲೆಕ್ಕಾಚಾರವೇ ಬೇರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದಿನ ಮೂರು ವರ್ಷ ಅಧಿಕಾರದಲ್ಲಿ ಮುಂದುವರಿದರೆ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಅವಕಾಶ ಬರಬಹುದು ಮತ್ತು ತಾವೂ ಪಕ್ಷದಲ್ಲಿ ಗಟ್ಟಿಯಾಗಬಹುದು ಎಂಬ ಯೋಚನೆಯಲ್ಲಿರ ಬಹುದು ಎಂಬುದು ವಿರೋಧ ಬಣದವರ ಮಾತು.
Related Articles
Advertisement
ಜೆಡಿಎಸ್ ದೂರ ಇಡುವ ಯತ್ನ: ಉಪ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯದಿದ್ದರೆ, ಜೆಡಿಎಸ್ ಮತ್ತೆ ಸಕ್ರಿಯವಾಗುವುದರಿಂದ ಸರ್ಕಾರದಲ್ಲಿ ಪಾಲುದಾರಿಕೆ ಪಡೆಯುವ ಸಾಧ್ಯತೆಯಿದೆ. ಆ ಮೂಲಕ ಜೆಡಿಎಸ್ ಸರ್ಕಾರದ ಭಾಗವಾದರೆ ಹಳೇ ಮೈಸೂರು ಭಾಗದಲ್ಲಿ ಮತ್ತಷ್ಟು ಬಲಗೊಳ್ಳಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಒಂದು ವೇಳೆ, ಜೆಡಿಎಸ್‌ನ್ನು ಸೇರಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಹಿಂದೇಟು ಹಾಕಿದರೂ ಯಡಿಯೂರಪ್ಪ ಅವರ ಬಗ್ಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಮೃದು ಧೋರಣೆ ಅನುಸರಿಸುತ್ತಿದ್ದು, ಅವರಿಗೆ ಬಾಹ್ಯ ಬೆಂಬಲ ನೀಡುವ ಮೂಲಕವೂ ಸರ್ಕಾರದಲ್ಲಿ ತಮ್ಮ ಹಿಡಿತ ಸಾಧಿಸುವ ಯತ್ನ ನಡೆಸುವ ಸಾಧ್ಯತೆಯಿದೆ.
ಇದಲ್ಲದೇ ಕಾಂಗ್ರೆಸ್‌ನ ಒಂದು ಗುಂಪು ಈಗಲೂ ಜೆಡಿಎಸ್ ನಾಯಕರ ಜತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಈಗಲೂ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರೊಂದಿಗೆ ಉತ್ತಮ ಬಾಂಧವ್ಯ ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಎರಡೂ ಪಕ್ಷಗಳ ನಡುವೆ ಆಂತರಿಕ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆಯೂ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.
ಆದರೆ, ಸಿದ್ದರಾಮಯ್ಯ ಜೆಡಿಎಸ್ ಜತೆಗೆ ಯಾವುದೇ ರೀತಿಯ ಸಂಬಂಧ ಬೇಡವೆಂದು ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಜತೆಗಿನ ಕಾಂಗ್ರೆಸ್ ನಾಯಕರ ಆಂತರಿಕ ಮೈತ್ರಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಆದರೆ, ಉಪ ಚುನಾವಣೆಯ ಫಲಿತಾಂಶ ಬಂದ ನಂತರ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಸಿದ್ದರಾಮಯ್ಯ ವಿರೋಧಿ ಬಣದ ಕಾಂಗ್ರೆಸ್ ನಾಯಕರು ಜೆಡಿಎಸ್ ಜತೆಗೆ ಮತ್ತೆ ಮೈತ್ರಿ ಮಾಡಿಕೊಳ್ಳಲು ಮುಂದಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
* ಶಂಕರ ಪಾಗೋಜಿ