ರಬಕವಿ-ಬನಹಟ್ಟಿ: ಸರ್ಕಾರಿ ಆಸ್ತಿಗಳು ದೇಶದ ಮಹತ್ವ ಆಸ್ತಿಗಳು, ಸರ್ಕಾರಿ ಅಧಿಕಾರಿಗಳು ಶಾಲಾ ಕಾಲೇಜುಗಳನ್ನು ಕಟ್ಟುವ ಸಂದರ್ಭದಲ್ಲಿ ಪ್ರಾಮಾಣಿಕವಾದ ಕಾಮಗಾರಿಯನ್ನು ಕೈಗೊಳ್ಳಬೇಕು. ಸ್ಥಳೀಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಲಯದ ಕಾಮಗಾರಿಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಳಪೆ ಕಾಮಗಾರಿ ನಡೆದಿದೆ. ಇದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಅವರು ಭಾನುವಾರ ರಬಕವಿಯಲ್ಲಿರುವ ರಬಕವಿ-ಬನಹಟ್ಟಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಉದ್ಘಾಟಿಸಿ ಮತ್ತು ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಇದುವರೆಗೆ ರೂ. 20 ಕೋಟಿಯಷ್ಟು ಹಣ ಖರ್ಚು ಮಾಡಿದರೂ ಕಳಪೆ ಮಟ್ಟದ ಕಾಮಗಾರಿಗಳು ನಡೆದಿರುವುದು ನೋವಿನ ಸಂಗತಿಯಾಗಿದೆ.
ಇಲ್ಲಿಯ ಕಟ್ಟಡ, ಹಾಸ್ಟೆಲ್ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ ನಾರಾಯಣ ಅವರ ಗಮನಕ್ಕೆ ತಂದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸುತ್ತೇನೆ. ಉನ್ನತ ಶಿಕ್ಷಣ ಸಚಿವರನ್ನು ಇಲ್ಲಿಗೆ ಕರೆದುಕೊಂಡು ಬಂದು ಕಾಮಗಾರಿಯನ್ನು ಗಮನಕ್ಕೆ ತರಲಾಗುವುದು. ಸರ್ಕಾರಿ ಕಟ್ಟಡಗಳ ಕಳೆಪೆ ಕಾಮಗಾರಿ ಕುರಿತು ಸದನದಲ್ಲಿ ಚರ್ಚೆ ಮಾಡುತ್ತೇನೆ. ಪ್ರಾಚಾರ್ಯರು ಸ್ಥಳೀಯರನ್ನು ಸೇರಿಸಿಕೊಂಡು ಕಾಲೇಜು ಅಭಿವೃದ್ಧಿಯನ್ನು ನಿರ್ಮಿಸಿ. ಇಂಥ ಸಂಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿಯೇ ಇದ್ದ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರಿ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಕಲಿಯಲು ಸೂಕ್ತ ಪರಿಸರವನ್ನು ನಿರ್ಮಾಣ ಮಾಡಬೇಕು. ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸುತ್ತ ಮುತ್ತಲಿನ ಪ್ರದೇಶದಲ್ಲಿ ಹೂದೋಟ, ಆಟದ ಮೈದಾನ ಸೇರಿದಂತೆ ಅನೇಕ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು. ಇಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಶಾಸಕರ ಗಮನಕ್ಕೆ ತೆಗೆದುಕೊಂಡು ಬರಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಮಹಾದೇವ ಕತ್ತಿ ಮಾತನಾಡಿದರು.
ವೇದಿಕೆಯ ಮೇಲೆ ನಗರಸಭೆಯ ಅಧ್ಯಕ್ಷ ಸಂಜಯ ತೆಗ್ಗಿ, ಉಪಾಧ್ಯಕ್ಷೆ ವಿದ್ಯಾ ಧಬಾಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸಪ್ರಭು ಹಟ್ಟಿ, ಧರೆಪ್ಪ ಉಳ್ಳಾಗಡ್ಡಿ, ಯಲ್ಲಪ್ಪ ಕಟಗಿ, ಗೌರಿ ಮಿಳ್ಳಿ, ಪಿ.ಜಿ.ಕಾಖಂಡಕಿ, ಬಸಪ್ಪ ಪೂಜಾರಿ, ಸುರೇಶ ಅಕ್ಕಿವಾಟ, ರವಿಕುಮಾರ ಸಜ್ಜನವರ ಇದ್ದರು.
ಪಾರ್ವತಿ ನಾಯಕ ಪ್ರಾರ್ಥಿಸಿದರು. ಪ್ರಕಾಶ ಖವಟೆಪ್ಪಗೋಳ ಸ್ವಾಗತಿಸಿದರು. ಭರಮು ಬಣಜವಾಡ ನಿರೂಪಿಸಿದರು. ಪ್ರಸಾದ ಮಾಹುರಕರ್ ಇದ್ದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ಮಿರ್ಜಿ, ಸಿ.ವಿ.ಪಟ್ಟಣಶೆಟ್ಟಿ, ಬಸವರಾಜ ತೆಗ್ಗಿ ಸೇರಿದಂಗೆ ಅನೇಕರು ಇದ್ದರು.