ರಬಕವಿ-ಬನಹಟ್ಟಿ: ಗ್ರಾಮಸ್ಥರು ತಮ್ಮ ಸಮಸ್ಯೆಗಳಿಗೆ ತಾಲ್ಲೂಕು ಕಚೇರಿಗಳಿಗೆ ಅಲೆಯದೆ ಗ್ರಾಮದಲ್ಲಿಯೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳ ನಡೆಗೆ ಹಳ್ಳಿಯ ಕಡೆಗೆ ಮಹತ್ವದ ಯೋಜನೆಯನ್ನು ಸರ್ಕಾರ ಆರಂಭಿಸಿದೆ. ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಅವರು ಶನಿವಾರ ರಬಕವಿ-ಬನಹಟ್ಟಿ ತಾಲೂಕಿನ ತಾಲ್ಲೂಕಿನ ಹನಗಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯರಗಟ್ಟಿ ಗ್ರಾಮದ ಸದಾಶಿವ ಮಠದಲ್ಲಿ ನಡೆದ ಅಧಿಕಾರಿಗಳ ನಡೆಗೆ ಹಳ್ಳಿಯ ಕಡೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಗ್ರಾಮದ ಮೂಲ ಸಮಸ್ಯೆಗಳಾದ ರಸ್ತೆ, ಕುಡಿಯುವ ನೀರು, ಶೌಚಾಲಯ, ಒಳ ಚರಂಡಿ, ಸರ್ವೆ ಕಾರ್ಯ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಲಿಖಿತ ಇಲ್ಲವೆ ಮೌಖಿಕವಾಗಿ ಅಧಿಕಾರಿಗಳಿಗೆ ತಿಳಿಸಿದರೆ ಅಂಥ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುತ್ತಾರೆ. ವೈಯಕ್ತಿಕ ಸಮಸ್ಯೆಗಳನ್ನು ಇಲ್ಲಿ ತಿಳಿಸಬಹುದಾಗಿದೆ ಎಂದು ಶಾಸಕ ಸವದಿ ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಎಸ್.ಬಿ.ಇಂಗಳೆ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಸರ್ಕಾರವು ಅರ್ಹ ಫಲಾನುಭವಿಗಳಿಗೆ ನೀಡುವ ಪಿಂಚಣಿ ಸೌಲಭ್ಯಗಳ ಕುರಿತು ಮಾಹಿತಿಯನ್ನು ಕೂಡಾ ಪಡೆದುಕೊಳ್ಳಬಹುದಾಗಿದೆ. ಸರ್ಕಾರವು ಹಮ್ಮಿಕೊಂಡಿರುವ ಕಾರ್ಯಕ್ರಮದ ಸೂಕ್ತ ಸದ್ಬಳಕೆಯನ್ನು ಗ್ರಾಮಸ್ಥರು ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ : ಭಟ್ಕಳ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟನೆ
ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಆದೇಶದ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು.
ವೇದಿಕೆಯ ಮೇಲೆ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ, ಸಿಡಿಪಿಒ ಅನುರಾಧಾ ಹಾದಿಮನಿ, ಎಡಿಎಲ್‌ಆರ್ ಚಲವಾದಿ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಮುನ್ನೋಳ್ಳಿ, ವಿಠ್ಠಲ ಕೂಗಟೆ ಸೇರಿದಂತೆ ಯರಗಟ್ಟಿ ಗ್ರಾಮ ಪಂಚಾಯ್ತಿ ಸದಸ್ಯರು ಇದ್ದರು.
ಕಾರ್ಯಕ್ರಮದಲ್ಲಿ ರವಿ ಹುಕ್ಕೇರಿ, ಡಿ.ಬಿ.ಜಾಯಗೊಂಡ, ಎಸ್.ಬಿ.ಮೋಮಿನ್, ಪ್ರಕಾಶ ವಂದಾಲ, ಪ್ರಕಾಶ ಮಠಪತಿ, ಸುರೇಶ ನೀಲನೂರ, ಮಂಜುನಾಥ ನೀಲನ್ನವರ, ಸೇರಿದಂತೆ ಅನೇಕರು ಇದ್ದರು. ಬಿ.ಎಸ್.ಲೋಕಾಪುರ ಕಾರ್ಯಕ್ರಮ ನಡೆಸಿಕೊಟ್ಟರು.