ರಬಕವಿ-ಬನಹಟ್ಟಿ: ಇನ್ಫೋಸಿಸ್ ಸಂಸ್ಥೆಯು ಸ್ಥಳೀಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 131 ಕಂಪ್ಯೂಟರ್ ಗಳನ್ನು ದೇಣಿಗೆಯನ್ನಾಗಿ ನೀಡಿದೆ. ವಿದ್ಯಾರ್ಥಿಗಳು ಇವುಗಳ ಸದ್ಬಳಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳಾಗುವುದರ ಜೊತೆಗೆ ಸಮಾಜಕ್ಕೂ ತಮ್ಮದೆ ಆದ ಕೊಡುಗೆಯನ್ನು ನೀಡಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಅವರು ಶನಿವಾರ ಸ್ಥಳೀಯ ಸರ್ಕಾರಿ ಪಾಲಿಟೆಕ್ನಕ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ ಇನ್ಫೋಸಿಸ್ ಸಂಸ್ಥೆಯ ಕೊಡುಗೆ ಶ್ರೇಷ್ಠವಾದುದು. ರಬಕವಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಉತ್ತರ ಕರ್ನಾಟಕದ ಪ್ರತಿಷ್ಠೆಯ ಕಾಲೇಜುಗಳಲ್ಲಿ ಒಂದಾಗಿದೆ. ಈ ಬಾರಿ ಐದು ಶಾಖೆಗಳಲ್ಲಿ 650 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಇಂದಿನ ದಿನಗಳಲ್ಲಿ ತಾಂತ್ರಿಕತೆ ಬಹಳಷ್ಟು ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ರೋಟರಿ ಸಂಸ್ಥೆಯವರು ಕೂಡಾ ಸಮಾಜಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕ ಸವದಿ ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಕಿರಣ ದೇಸಾಯಿ ಮಾತನಾಡಿ, ರೋಟರಿ ಸಂಸ್ಥೆಯ ಸಹಾಯದಿಂದ ಕಂಪ್ಯೂಟರ್ ಗಳನ್ನು ರಬಕವಿಗೆ ತೆಗೆದುಕೊಂಡು ಬಂದು ಅವುಗಳನ್ನು ಇಲ್ಲಿ ಸ್ಥಾಪನೆ ಮಾಡಲಾಗಿದೆ. ವಿದ್ಯಾರ್ಥಿಗಳು ಇಲ್ಲಿಯ ಕಂಪ್ಯೂಟರ್ ಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಜಮಖಂಡಿ ರೋಟರಿ ಸಂಸ್ಥೆಯ ಅಧ್ಯಕ್ಷ ಮಹೇಶ ಪಾಟೀಲ, ಕಾರ್ಯದರ್ಶಿ ಮುತ್ತುರಾಜ ಅತ್ತೆಪ್ಪನವರ, ಕಾಲೇಜು ಪ್ರಾಚಾರ್ಯ ಮಹಾದೇವ ಕತ್ತಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ರವಿಕುಮಾರ ಸಜ್ಜನವರ ಇದ್ದರು.
ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರಸಭೆಯ ಉಪಾಧ್ಯಕ್ಷೆ ವಿದ್ಯಾ ಧಬಾಡಿ, ಯಲ್ಲಪ್ಪ ಕಟಗಿ, ಮಹಾದೇವ ಕೊಟ್ಯಾಳ, ರೋಟರಿ ಸಂಸ್ಥೆಯ ಸುಭಾಸ ಕಾಶಿದ್ದ, ಗುರುರಾಜ ಮಠಪತಿ, ಎಸ್.ವೈ.ಬಿರಾದಾರ, ಅಶೋಕ ಕುಳಹಳ್ಳಿಕರ, ಮಲ್ಲು ಭಜಂತ್ರಿ, ಸಂತೋಷ ಗಾಡಗೆ, ವಿವೇಕ ಮಹಾಬಳಶೆಟ್ಟಿ, ನೀಲಗುಂದ ಸೇರಿದಂತೆ ಅನೇಕರು ಇದ್ದರು.