ರಬಕವಿ-ಬನಹಟ್ಟಿ: ದೇಶದ ಜನರಲ್ಲಿ ರಾಷ್ಟ್ರಾಭಿಮಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ರಾಷ್ಟ್ರೀಯ ಹಬ್ಬಗಳಲ್ಲಿ ಕಡ್ಡಾಯವಾಗಿ, ಸ್ವಯಃ ಪ್ರೇರಣೆಯಿಂದ ಭಾಗವಹಿಸಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಅವರು ಸೋಮವಾರ ರಬಕವಿ-ಬನಹಟ್ಟಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ನಿಮಿತ್ತವಾಗಿ ಹಮ್ಮಿಕೊಳ್ಳಲಾಗುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕೋವಿಡ್ ಹಿಇನ್ನಲೆಯಲ್ಲಿ ಗಣರಾಜ್ಯೋತ್ಸವವನ್ನು ಸರಕಾರದ ನಿಯಮಾನುಸಾರ ಸರಳವಾಗಿ ಆಚರಿಸಲಾಗುವುದು ಎಂದರು.
ರಾಷ್ಟ್ರದ ಅಖಂಡತೆಗೆ ನಾವೆಲ್ಲರೂ ಶ್ರಮಿಸಬೇಕು. ರಾಷ್ಟ್ರೀಯ ಹಬ್ಬಗಳು ಯಾವುದೆ ಜಾತಿ, ಮತ, ಪಂಥ ಮತ್ತು ಧರ್ಮಗಳಿಗೆ ಸಿಮೀತವಾಗಿರುವುದಿಲ್ಲ. ಈ ಸಂದರ್ಭದಲ್ಲಿ ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಶಾಸಕ ಸವದಿ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಸಂಜಯ ಇಂಗಳೆ ಮಾತನಾಡಿ, ಈ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಸಮಿತಿಯನ್ನು ನಿರ್ಮಾಣ ಮಾಡಲಾಗಿದೆ. ಶಿಸ್ತು ಬದ್ಧವಾದ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಸಹಾಯ ಸಹಕಾರ ಅಗತ್ಯವಾಗಿದೆ. ತಾಲೂಕಿನ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಯಾವುದೇ ನೆಪ ಹೇಳದೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.
ರಬಕವಿ-ಬನಹಟ್ಟಿ ತಾಲ್ಲೂಕಿನಾದ್ಯಂತ ಪ್ಲಾಸ್ಟಿಕ್ ಧ್ವಜ ಮಾರಾಟ, ಬಳಕೆ ಮಾಡುವುದನ್ನು ಕಟ್ಟು ನಿಟಾಗಿ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಧ್ವಜ ಮಾರಾಟಗಾರರಿಗೆ ತಿಳುವಳಿಕೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮೊದಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತ್ತಿದೆ. ಆದಾಗ್ಯ ಪ್ಲಾಸ್ಟಿಕ್ ಧ್ವಜ ಮಾರಾಟ ಹಾಗೂ ಬಳಕೆ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಇಂಗಳೆ ಹೇಳಿದರು.
ಸಭೆಯ ವೇದಿಕೆಯ ಮೇಲೆ ಗ್ರೇಡ್-2 ತಹಶೀಲ್ದಾರ್ ಎಸ್.ಬಿ.ಕಾಂಬಳೆ, ಸಿಪಿಐ ಜಿ.ಕರುಣೇಶಗೌಡ ಇದ್ದರು.
ಸಭೆಯಲ್ಲಿ ಉಪ ತಹಶೀಲ್ದಾರ್ ಎಸ್.ಎಲ್. ಕಾಗಿಯವರ, ಧರೆಪ್ಪ ಉಳ್ಳಾಗಡ್ಡಿ, ಪಿಎಸ್‌ಐ ಸುರೇಶ ಮಂಟೂರ, ಜಿ.ಎಸ್.ವಡಗಾವಿ, ರಾಮಣ್ಣ ಹುಲಕುಂದ, ಶಿವಾನಂದ ಬಾಗಲಕೋಟಮಠ, ಶ್ರೀಶೈಲ ಬುರ್ಲಿ, ಡಾ. ಎಂ. ಎನ್.ನದಾಫ್, ಡಿ. ಬಿ. ಜಾಯಗೊಂಡ, ರಾಜು ಬಾಣಕಾರ, ನಗರಸಭೆಯ ಅಧಿಕಾರಿಗಳಾದ ಸುಭಾಸ ಖುದಾನಪೂರ, ಬಿ. ಎಂ. ಡಾಂಗೆ, ಅರಣ್ಯ ಇಲಾಖೆಯ ಮಲ್ಲು ನಾವಿ, ಬಸವರಾಜ ತೆಗ್ಗಿ, ಪ್ರಾಚಾರ್ಯ ಎಸ್. ಎಂ. ಶೇಖ, ಚಂದ್ರಪ್ರಭಾ ಬಾಗಲಕೋಟ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮುಖಂಡರು ಇದ್ದರು.