Advertisement

ಸಿದ್ದರಾಮಯ್ಯಗೆ ಪರಮಾಧಿಕಾರ

10:38 AM Oct 18, 2019 | Team Udayavani |

ಬೆಂಗಳೂರು: ಅನರ್ಹ ಶಾಸಕರ ರಾಜೀನಾಮೆಯಿಂದ ತೆರವಾಗಿರುವ 15 ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಪೂರ್ಣ ಅಧಿಕಾರ ನೀಡಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಹಿಡಿತ ಮತ್ತೆ ಬಲಗೊಳ್ಳುತ್ತಿದೆ.

Advertisement

ಜತೆಗೆ ಸಿದ್ದರಾಮಯ್ಯ ಅವರ ನಿಕಟವರ್ತಿ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್‌ ಅವರನ್ನೂ ಬದಲಿಸುವ ಸಾಧ್ಯತೆ ಕಡಿಮೆಯಾಗಿದೆ. ಆ ಮೂಲಕ ಸಿದ್ದರಾಮಯ್ಯ, ದಿನೇಶ್‌ ಬದಲಾವಣೆಗೆ “ಹಿರಿಯರು’ ಹೇರಿದ್ದ ಒತ್ತಡಕ್ಕೆ ಜಯ ಸಿಕ್ಕಿಲ್ಲ ಎಂದು ಪಕ್ಷದೊಳಗೆ ವ್ಯಾಖ್ಯಾನಿಸಲಾಗಿದೆ.

ಕಾಂಗ್ರೆಸ್‌ನಲ್ಲಿ 2013-18ರ ವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿ, ಮೈತ್ರಿ ಸರಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ತಮ್ಮದೇ ಆದ ಹಿಂಬಾಲಕರ ಪಡೆ ಕಟ್ಟಿ ಕೊಂಡಿದ್ದ ಸಿದ್ದರಾಮಯ್ಯ, ಮೈತ್ರಿ ಸರಕಾರ ಪತನ ಗೊಂಡು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿಪಕ್ಷ ನಾಯಕನ ಸ್ಥಾನ ಪಡೆಯಲು ಸಾಕಷ್ಟು ಕಸರತ್ತು ಮಾಡ ಬೇಕಾಯಿತು. ಮೂಲ ಕಾಂಗ್ರೆಸಿಗರ ವಿರೋಧದಿಂದ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರನ್ನು ತೆರೆಗೆ ಸರಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಅಧ್ಯಕ್ಷರ ಬದಲಾವಣೆಯೂ ಅನುಮಾನ
ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಿನಿಂದಲೂ ಪಕ್ಷದ ಮೇಲೂ ಹಿಡಿತ ಸಾಧಿಸುತ್ತ ಬಂದಿದ್ದು, ದಿನೇಶ್‌ ಗುಂಡೂರಾವ್‌ ಅಧ್ಯಕ್ಷರಾದ ಮೇಲೆ ಎಲ್ಲವನ್ನೂ ತಮ್ಮ ಸೂಚನೆಯಂತೆಯೇ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ಇದು ಮೂಲ ಕಾಂಗ್ರೆಸಿಗರ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ಹಿರಿಯ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ ಎದುರು ಆರೋಪ ಮಾಡಿದ್ದರು. ಅಲ್ಲದೆ ದಿನೇಶ್‌ ಗುಂಡೂ ರಾವ್‌ ಅವರನ್ನು ಬದಲಾಯಿಸುವಂತೆಯೂ ಸಲಹೆ ನೀಡಿದ್ದರು. ಆದರೆ ಉಪ ಚುನಾವಣೆ ಘೋಷಣೆ ಆಗಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಅಧ್ಯಕ್ಷರ ಬದಲಾವಣೆ ಮಾಡುವುದು ಅನುಮಾನ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next