ನಂಜನಗೂಡು: ರಾಜ್ಯದಲ್ಲಿ ಶಾಸಕಾಂಗ ಹಾಗೂ ನ್ಯಾಯಾಂಗದ ನಡುವೆ ನಡೆಯುತ್ತಿರುವ ಜಟಾಪಟಿ ದುರದೃಷ್ಟಕರ. ಇದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವೇ ಕಾರಣ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ದೂರಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂಬರ್-1 ಅತೃಪ್ತರಾಗಿದ್ದಾರೆ. ಸಮ್ಮಿಶ್ರ ಸರ್ಕಾರದ ವಿರುದ್ಧ ಮೊದಲ ಅತೃಪ್ತಿ ಅವರದ್ದಾಗಿದೆ. ಕುಮಾರಸ್ವಾಮಿಯವರ ಇಂದಿನ ಈ ಪರಿಸ್ಥಿತಿಗೆ ಸಿದ್ದರಾಮಯ್ಯನವರೇ ಕಾರಣ. ಈ ಗುಟ್ಟು ಕುಮಾರಸ್ವಾಮಿ ಹಾಗೂ ದೇವೇಗೌಡರಾದಿಯಾಗಿ ಎಲ್ಲರಿಗೂ ಗೊತ್ತು. ಆದರೆ, ಅಧಿಕಾರ ಅವರ ಬಾಯಿ ಕಟ್ಟಿದೆ ಎಂದರು.
ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡರೂ ಸಾಧ್ಯವಾದಷ್ಟು ಕಾಲ ಅಧಿಕಾರದಲ್ಲಿ ಮುಂದುವರಿಯಲು ಹುನ್ನಾರ ನಡೆಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದು ನಿಶ್ಚಿತ. ಇದರಲ್ಲಿ ಯಾವುದೇ ಸಂಶಯವಿಲ್ಲ. ತಾಂತ್ರಿಕವಾಗಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಲೇ ರಾಜ್ಯದ ರಾಜಕಾರಣಕ್ಕೆ ಹಿಡಿದ ಗ್ರಹಣಕ್ಕೆ ಮೋಕ್ಷ ಸಿಗಲಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸಿರಲಿಲ್ಲ. ಆದರೆ, ಸೋತು ನಿವೃತ್ತಿಯಾಗುವುದಕ್ಕಿಂದ ಗೆದ್ದು ನಿವೃತ್ತಿಯಾಗೋಣ ಎಂಬ ಏಕೈಕ ಅಭಿಲಾಷೆಯಿಂದ ಚುನಾವಣೆಗೆ ಸ್ಪರ್ಧಿಸಿದೆ. ಈಗ ಗೆದ್ದಾಗಿದೆ, ನನ್ನ ರಾಜಕಾರಣದ ಆಸೆ ಪೂರೈಸಿದೆ.
-ವಿ.ಶ್ರೀನಿವಾಸ ಪ್ರಸಾದ್, ಸಂಸದ