ಬೆಂಗಳೂರು: ದಾಖಲೆಯ ಹದಿನೈದನೇ ಬಜೆಟ್ ಮಂಡನೆಗೆ ತಯಾರಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಂಚ ಗ್ಯಾರಂಟಿಗಳನ್ನು ಮುಂದುವರಿಸಿ ಕೊಂಡು ಹೋಗುವ ಸವಾಲಿನ ಜತೆಗೆ ಕರ್ನಾಟಕ- ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಪ್ರತಿ ಇಲಾಖೆಯಲ್ಲೂ ಹೊಸ ಕಾರ್ಯಕ್ರಮ ಘೋಷಿಸುವ ಕಸರತ್ತು ನಡೆಸಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ 13 ಬಜೆಟ್ ಮಂಡಿಸಿದ್ದರು. ಶುಕ್ರವಾರ ಬೆಳಗ್ಗೆ 10.15 ಕ್ಕೆ 2024-25ನೇ ಸಾಲಿನ ಆಯವ್ಯಯ ಮಂಡಿಸ ಲಿರುವ ಸಿಎಂ, ಬಜೆಟ್‌ಗೆ ಅನುಮೋದನೆ ಪಡೆಯಲು ಬೆಳಗ್ಗೆ 9.30ಕ್ಕೆ ವಿಧಾನಸೌದದಲ್ಲಿ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಮುಂಗಡ ಪತ್ರದ ಆರಂಭದಲ್ಲೇ ಬರಗಾಲದ ಭೀಕರತೆ ಹಾಗೂ ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಬಿಚ್ಚಿಡಲಿರುವ ಸಿಎಂ, ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಆಗಿದೆ ಎಂಬುದನ್ನು ನಿರೂಪಿಸಲು ಅಗತ್ಯ ಅಂಕಿ-ಅಂಶಗಳನ್ನೂ ಬಜೆಟ್ ಪುಸ್ತಕದಲ್ಲಿ ಸೇರಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಉತ್ತರ ಭಾರತ ಮತ್ತು ದಕ್ಷಿಣ ಭಾರತ ರಾಜ್ಯಗಳ ನಡುವಿನ ಅನುದಾನ ಹಂಚಿಕೆಯ ವ್ಯತ್ಯಾಸಗಳನ್ನೂ ಉಲ್ಲೇಖೀಸುವ ಸಂಭವವಿದೆ.
ಪೂರ್ಣಪ್ರಮಾಣದ ಬಜೆಟ್: ಅಭಿವೃದ್ಧಿಗೆ ಹೆಚ್ಚಿ ನ ಹಣ ತೊಡಗಿಸಲು ಇರುವ ತೊಡಕು ಗಳನ್ನು ಆರಂಭದಲ್ಲೇ ಜನರಿಗೆ ಮನವರಿಕೆ ಮಾಡುವ ಪ್ರಯತ್ನವನ್ನು ಸಿಎಂ ಮಾಡಲಿದ್ದು, ಕಳೆದ ಬಾರಿ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಗ್ಯಾರಂಟಿಗಳನ್ನು 8 ತಿಂಗಳಿಗೆ ಸೀಮಿತವಾಗಿ ಜಾರಿಗೊಳಿಸಲಾಗಿತ್ತು. ಈ ಬಾರಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಬೇಕಿದ್ದು, 12 ತಿಂಗಳಿಗೂ ಗ್ಯಾರಂಟಿಗಳಿಗೆ ಹಣ ಮೀಸಲಿಡ ಬೇಕಿದೆ. ಕಳೆದ ಬಾರಿ 32-35 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದ ಸರ್ಕಾರ, ಈ ಬಾರಿ 55-65 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಬೇಕಿದೆ. ಇಷ್ಟಾದರೂ ಗ್ಯಾರಂಟಿ ಯೋಜನೆಗಳಿಂದ ಯಾವ್ಯಾವ ವರ್ಗದ ಜನರಿಗೆ ಎಷ್ಟೆಷ್ಟು ಉಪಯೋಗ ಆಗಿದೆ ಎಂಬುದನ್ನು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖೀಸಿದ್ದಂತೆ ಬಜೆಟ್‌ನಲ್ಲೂ ಪ್ರಸ್ತಾಪಿಸುವ ಸಂಭವವಿದ್ದು, ಗ್ಯಾರಂಟಿಗಳನ್ನು ಟೀಕಿಸಿದ್ದ ಕೇಂದ್ರ ಸರ್ಕಾರ ಮತ್ತು ರಾಜ್ಯದ ಪ್ರತಿಪಕ್ಷಗಳಿಗೆ ಪ್ರತ್ಯುತ್ತರವನ್ನೂ ಬಜೆಟ್‌ನಲ್ಲೇ ನೀಡಲಿದ್ದಾರೆ.
ತೆರಿಗೆ ಹೆಚ್ಚಳ ಬದಲು ಸಾಲಕ್ಕೆ ಮೊರೆ: ಕಳೆದ ಬಾರಿ 8 ತಿಂಗಳಿಗಾಗಿ 3.24 ಲಕ್ಷ ಕೋಟಿ ರೂ.ಗಳಬಜೆಟ್ ಮಂಡಿಸಿದ್ದ ಸಿಎಂ, ಈ ಬಾರಿ 12 ತಿಂಗಳಿಗೆ 3.75 ಲಕ್ಷ ಕೋಟಿ ರೂ.ಗಳಿಂದ 3.80 ಲಕ್ಷ ಕೋಟಿ ರೂ.ವರೆಗೆ ಬಜೆಟ್ ಗಾತ್ರವನ್ನು ಕೊಂಡೊಯ್ಯ ಬಹುದು. ಅಂದರೆ, ಹಿಂದಿನ ಅವಧಿ ಗಿಂತ 50 ಸಾವಿರ ಕೋಟ ರೂ. ಹೆಚ್ಚಳ ಆಗಬಹುದು. ಈಗಾಗಲೇ ವಿದ್ಯುತ್ ದರ ಏರಿಕೆ, ಮು ದ್ರಾಂಕ ಶುಲ್ಕ ಹೆಚ್ಚಳ, ಅಬಕಾರಿ ಸುಂಕ ದುಬಾರಿ ಮಾಡಿರುವ ಆಪಾದನೆಗಳನ್ನು ಎದುರಿಸುತ್ತಿರುವ ಸರ್ಕಾರ, ಲೋಕಸಭೆ ಚುನಾ ವಣೆ ಹೊಸ್ತಿಲಲ್ಲಿರುವುದರಿಂದ ತೆರಿಗೆ ಹೆಚ್ಚಿ ಸುವ ಸಾಧ್ಯ ತೆಗಳು ತೀರಾ ಕಡಿಮೆ ಎನ್ನಬಹುದು. ಆದರೆ, ಆರ್ಥಿಕ ಶಿಸ್ತು ಕಾಪಾಡಿಕೊಂಡು ಹೆಚ್ಚಿನ ಸಾಲಕ್ಕೆ ಮೊರೆ ಹೋಗುವ ಪ್ರಸ್ತಾಪ ಮಾಡಬಹುದು.
ಸುವರ್ಣ ಕರ್ನಾಟಕದ ಸಂಭ್ರಮದ ಇಮ್ಮಡಿ?
ಎಲ್ಲ ಸವಾಲುಗಳ ನಡುವೆ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳು ಸಂದಿರುವ ಸವಿನೆನಪಿನಲ್ಲಿ ಎಲ್ಲ ಇಲಾಖೆಗಳಿಗೂ ಹೊಸ ಕಾರ್ಯಕ್ರಮ ಘೋಷಿಸುವ ತಯಾರಿ ಆಗಿದೆ. ಸುವರ್ಣ ಕರ್ನಾಟಕದ ಸಂಭ್ರಮವನ್ನು ಇಮ್ಮಡಿಗೊಳಿಸುವ ಸಲುವಾಗಿ ಪ್ರತಿ ಇಲಾಖೆಯಲ್ಲೂ ವಿನೂತನ ಕಾರ್ಯಕ್ರಮವನ್ನು ಸಿಎಂ ಪ್ರಕಟಿಸಲಿದ್ದಾರೆ ಎನ್ನಲಾಗಿದೆ.