Advertisement

ಸಿದ್ದು ಹೆಗಲಿಗೆ ಸಮಾಧಾನ ಹೊಣೆ

06:00 AM Sep 17, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಜಾರಕಿಹೊಳಿ ಸಹೋದರರಿಂದ ಉಂಟಾಗಿರುವ ಗೊಂದಲ ಬಗೆಹರಿಸುವ ಹೊಣೆಗಾರಿಕೆ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ.
ಅಷ್ಟೇ ಅಲ್ಲದೆ ಸಮ್ಮಿಶ್ರ ಸರ್ಕಾರದ ಬಗ್ಗೆ ಅನಗತ್ಯ ಹೇಳಿಕೆ ನೀಡದಂತೆ ಬೆಂಬಲಿಗ ಸಚಿವರು ಹಾಗೂ ಶಾಸಕರಿಗೆ ತಿಳಿಹೇಳುವಂತೆಯೂ ತಿಳಿಸಲಾಗಿದೆ.

Advertisement

ಯೂರೋಪ್‌ ಪ್ರವಾಸ ಮುಗಿಸಿ ಬೆಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭಾನುವಾರ ಬೆಳಗ್ಗೆ ಭೇಟಿ ಮಾಡಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌  ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿ, ಜಾರಕೊಹೊಳಿ ಸಹೋದರರಿಗೆ ನಿಮ್ಮ ಮೇಲೆ ಗೌರವ ಇದೆ. ನಿಮ್ಮ ಮಾತು ಕೇಳುತ್ತಾರೆ. ಹೀಗಾಗಿ, ನೀವು ಒಮ್ಮೆ ಅವರ ಬಳಿ ಮಾತನಾಡಿ. ಏನಾದರೂ ಸಮಸ್ಯೆ ಇದ್ದರೆ ಬಗೆಹರಿಸೋಣ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ರಾಷ್ಟ್ರದ ಮುಂದಿನ ರಾಜಕೀಯದ ದೃಷ್ಟಿಯಿಂದ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಬೇಕು.  ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿವರು ಕರ್ನಾಟಕದ ಬೆಳವಣಿಗೆ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.

ಇದಕ್ಕೆ ಸಿದ್ದರಾಮಯ್ಯ ಅವರು, ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ಆಗುವುದಿಲ್ಲ. ಕೆಲವೊಂದು ಬೇಸರ ಇರಬಹುದು, ಅದನ್ನು ಸರಿಪಡಿಸೋಣ. ನನಗೆ ಸಂಪೂರ್ಣ ಮಾಹಿತಿಯಿಲ್ಲ, ನಾನು ಅವರನ್ನು ಕರೆದು ಮಾತನಾಡಿಸುತ್ತೇನೆ ಎಂದು ಹೇಳಿದರು ಎನ್ನಲಾಗಿದೆ.

ಭೇಟಿಗೆ ಸಮಯ
ಎಐಸಿಸಿ ಆಧ್ಯಕ್ಷ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಲು ಸಮಯ ನಿಗದಿಪಡಿಸುವಂತೆ ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಕೆ.ಸಿ.ವೇಣುಗೋಪಾಲ್‌ ಬಳಿ ಪ್ರಸ್ತಾಪಿಸಿದರು. ದೆಹಲಿಗೆ ಹೋದ ನಂತರ ಚರ್ಚಿಸಿ ಸಮಯ ನಿಗದಿಮಾಡುವುದಾಗಿ ತಿಳಿಸಿದರು.

Advertisement

ಯೂರೋಪ್‌ ಪ್ರವಾಸದಿಂದ ವಾಪಸ್ಸಾದ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭಾನುವಾರ ಇಡೀ ದಿನ ಕಾಂಗ್ರೆಸ್‌ ನಾಯಕರ ದಂಡು ಭೇಟಿ ಮಾಡಿ ಸಮಾಲೋಚನೆ ನಡೆಸಿತು. ಶಾಸಕ ಅಜಯಸಿಂಗ್‌ ಸೇರಿ ಹಲವು ಶಾಸಕರು ಸಮಾಲೋಚನೆ ನಡೆಸಿದರು. ಹೀಗಾಗಿ, ಅವರ ನಿವಾಸ ರಾಜಕೀಯ ಚಟುವಟಿಕೆಗಳ ತಾಣವಾಗಿತ್ತು.

ಸಿದ್ದರಾಮಯ್ಯ ಅವರು ವಿದೇಶ ಪ್ರವಾಸ ಹೋಗುತ್ತಿದ್ದಂತೆ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಇದೆ ಎಂಬ ಮಾತುಗಳ ನಡುವೆಯೇ ಕಳೆದೊಂದು ವಾರದಿಂದ ನಡೆದ ವಿದ್ಯಮಾನಗಳು ಸಾಕಷ್ಟು ಕುತೂಹಲ ಕೆರಳಿಸಿದ್ದವು. ಇದೀಗ ಸಿದ್ದರಾಮಯ್ಯ ಅವರು ವಾಪಸ್ಸಾದ ನಂತರವೂ ಮುಂದಿನ ಬೆಳವಣಿಗೆಗಳು ಅವರ ಸುತ್ತವೇ ಕೇಂದ್ರೀಕೃತವಾಗಿವೆ.

ಪರಂ ಕರೆಸಿದ ವೇಣು
ವೇಣುಗೋಪಾಲ್‌ ಅವರು ಸಿದ್ದರಾಮಯ್ಯ ಅವರ ಜತೆ ಮಾತುಕತೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌, ಕಾರ್ಯಾಧ್ಯಕ್ಷ  ಈಶ್ವರ್‌ ಖಂಡ್ರೆ ಹಾಜರಿದ್ದರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಬಂದಿರಲಿಲ್ಲ. ವೇಣುಗೋಪಾಲ್‌ ಅವರು ನಂತರ ದೂರವಾಣಿ ಕರೆ ಮಾಡಿ ಪರಮೇಶ್ವರ್‌ ಅವರನ್ನು ಸಿದ್ದರಾಮಯ್ಯ ಮನೆಗೆ ಕರೆಸಿಕೊಂಡರು. ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲಕ್ಕೆ ಸಿದ್ದರಾಮಯ್ಯ ಅವರೇ ಕಾರಣ. ಅವರು ಮನಸ್ಸು ಮಾಡಿದ್ದರೆ  ಪ್ರಾರಂಭದಲ್ಲೇ ಇದಕ್ಕೆ ಕಡಿವಾಣ ಹಾಕಬಹುದಿತ್ತು ಎಂದು ಪರಮೇಶ್ವರ್‌ ಅಸಮಾಧಾನಗೊಂಡಿದ್ದಾರೆ. ಹೀಗಾಗಿಯೇ ಸಿದ್ದರಾಮಯ್ಯ ನಿವಾಸದಲ್ಲಿನ ಸಭೆಗೆ ಬಂದಿರಲಿಲ್ಲ ಎಂದು ಹೇಳಲಾಗಿದೆ.

ಹಾಸ್ಯ ಚಟಾಕಿ
ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬಂದಿದ್ದ ಕೆ.ಸಿ.ವೇಣುಗೋಪಾಲ್‌, ವಿದೇಶ ಪ್ರವಾಸ ಹೇಗಿತ್ತು ಎಂದು ಕೇಳಿದಾಗ ಸಿದ್ದರಾಮಯ್ಯ ಸೂಪರ್‌ ಚೆನ್ನಾಗಿತ್ತು ಎಂದು ಹೇಳಿದರು. ತೂಕ ಮತ್ತಷ್ಟು ಇಳಿಸಿಕೊಂಡು ಬಂದಂತಿದೆ ಎಂದು ವೇಣುಗೋಪಾಲ್‌ ಹೇಳಿದಾಗ, ನೋ…. ಇನ್ನೂ ಒಂದು ಕೆಜಿ ಹೆಚ್ಚಾಗಿದ್ದೇನೆ ಎಂದು ಸಿದ್ದರಾಮಯ್ಯ ಚಟಾಕಿ ಹಾರಿಸಿದರು.

ಸಿದ್ದರಾಮಯ್ಯ ಜತೆ ಮಾತನಾಡಲು ಬಂದಿದ್ದೆ. ಜಾರಕಿಹೊಳಿ ಸಹೋದರರ ವಿಷಯ ಸಮಸ್ಯೆಯೇ ಅಲ್ಲ. ಅದು ಜಿಲ್ಲೆಯ ವಿಷಯ ಅಷ್ಟೇ. ನಮ್ಮ ರಾಜ್ಯ ನಾಯಕರು ಅದನ್ನು ಸರಿಪಡಿಸಿದ್ದಾರೆ. ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಅನಗತ್ಯ ಗೊಂದಲ ಮೂಡಿಸುವುದು ಬಿಜೆಪಿಯವರ ಗೇಮ್‌.
– ಕೆ.ಸಿ.ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

ಈಗಿನ ವಿದ್ಯಮಾನಗಳೆಲ್ಲ ಬಿಜೆಪಿ ನಾಯಕರ ಸೃಷ್ಟಿ. ಮಾಜಿ ಸಿಎಂ  ಸಿದ್ದರಾಮಯ್ಯ ಮಧ್ಯಪ್ರವೇಶದಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಹೈಕಮಾಂಡ್‌ ಬಯಸಿದರೆ ನಾನು ಮುಖ್ಯಮಂತ್ರಿಯಾಗಲು ಸಿದ್ಧನಿದ್ದೇನೆ.
– ಡಿ.ಕೆ.ಶಿವಕುಮಾರ್‌, ಜಲಸಂಪನ್ಮೂಲ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next