ದಾವಣಗೆರೆ: ಸಿದ್ದರಾಮಯ್ಯ ಉತ್ತರ ಪ್ರದೇಶ ಕುರಿತು ಮಾತನಾಡುವ ಅಗತ್ಯ ಇಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಾಕೀತು ಮಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ನಮ್ಮ ಸರ್ಕಾರ ರಚನೆಯಾಗಿ ಒಂದೇ ವರ್ಷ ಕಳೆದಿದೆ.ಒಂದು ವರ್ಷದಲ್ಲಿ ರೈತರ ಸಾಲಮನ್ನಾ ಮಾಡಲಾಗಿದೆ. ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡಲಾಗುತ್ತಿದೆ. ಅಲ್ಲಿನ ರೈತರು ಸುಭಿಕ್ಷವಾಗಿದ್ದಾರೆ.
ಆದರೆ, ಕರ್ನಾಟಕ ರಾಜ್ಯದ ಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ಹೀಗಿದ್ದರೂ ಸಿದ್ದರಾಮಯ್ಯ ಉತ್ತರ ಪ್ರದೇಶದೊಂದಿಗೆ ಕರ್ನಾಟಕದ ಹೋಲಿಕೆ ಮಾಡಿ ನೋಡುವುದು ಸರಿಯಲ್ಲ ಎಂದರು.
ಕರ್ನಾಟಕದ ರೈತರು ಸಂಕಷ್ಟದಲ್ಲಿದ್ದಾರೆ. ಸಾಲದ ಭಾರದಿಂದ ಸೋತು ಹೋಗಿದ್ದಾರೆ. ಹೀಗಾಗಿಯೇ ರೈತರ ಆತ್ಮಹತ್ಯೆಯಲ್ಲಿ ಈ ರಾಜ್ಯ ಮುಂದಿದೆ.
ರಾಜ್ಯದ ರೈತರ ದುಸ್ಥಿತಿಗೆ ಕಾರಣವಾದ ಈ ಸರ್ಕಾರ ಅಧಿಕಾರದಲ್ಲಿರಲು ಅರ್ಹವಲ್ಲ ಎಂದು ಅವರು ತಿಳಿಸಿದರು. ಕರ್ನಾಟಕದಲ್ಲಿ ಈಗಿರುವ ಸರ್ಕಾರ ಭ್ರಷ್ಟಾಚಾರದಲ್ಲೂ ಭಾರೀ ಮುಂದೆ ಇದೆ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಎಂಬುದು ಎಟಿಎಂ ಆಗಿಹೋಗಿದೆ. ಇಲ್ಲಿನ ಜನ ಇದನ್ನು ಮುಂದುವರಿಯಲು ಬಿಡಬಾರದು. ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಬೇಕು ಎಂದರು.