Advertisement

ಸಿದ್ದು 2 ಹುದ್ದೆ ಮೇಲೆ ಕಣ್ಣು

02:36 AM Jun 07, 2019 | Sriram |

ಬೆಂಗಳೂರು: ಮೈತ್ರಿ ಸರ್ಕಾರದ ಕೇಂದ್ರ ಬಿಂದುವಾಗಿ ರಾಜ್ಯ ಕಾಂಗ್ರೆಸ್‌ ಹಾಗೂ ಸರ್ಕಾರವನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿರುವ ಶಾಸಕಾಂಗ ಪಕ್ಷದ ನಾಯಕ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ 2 ಹುದ್ದೆಗಳ ಮೇಲೆ ರಾಜ್ಯ ಕಾಂಗ್ರೆಸ್‌ ಹಿರಿಯ ನಾಯಕರ ಕಣ್ಣು ಬಿದ್ದಿದೆ.

Advertisement

ಆದರೆ, ಕಾಂಗ್ರೆಸ್‌ ಪಕ್ಷ ದಲ್ಲಿರುವ ಮಾಸ್‌ ಲೀಡರ್‌ ಎಂದರೆ ಸಿದ್ದರಾಮಯ್ಯ. ಜೆಡಿಎಸ್‌ ಜತೆ ಹೊಂದಾ ಣಿಕೆಗೆ ಇಷ್ಟ ಇಲ್ಲದಿದ್ದರೂ ಕಾಂಗ್ರೆಸ್‌ ಹೈಕಮಾಂಡ್‌ ಆಣತಿ ಮೇರೆಗೆ ಸಿದ್ದರಾಮಯ್ಯ ನಡೆದುಕೊಂಡಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲೇ ಸೋಲನ್ನು ಅನುಭವಿಸಿ ಈಗ ಸಿದ್ದರಾಮಯ್ಯ ಅವರ ಕಡೆ ಬೆಟ್ಟು ಮಾಡುತ್ತಿದ್ದಾರೆ ಎನ್ನುವುದು ಸಿದ್ದರಾಮಯ್ಯ ಬಣದವರ ವಾದ.

ಆದರೆ, ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯ ಕರಷ್ಟೇ ಅಲ್ಲದೇ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಆದರೆ, ಎರಡೂ ಪಕ್ಷಗಳ ನಡುವೆ ಸಮನ್ವಯತೆ ಮೂಡಿಸುವ ಬದಲು ಗೊಂದಲ ಹೆಚ್ಚಾಗುವಂತೆ ಪರೋಕ್ಷವಾಗಿ ಅವರೇ ನೋಡಿ ಕೊಂಡು ತಾವೇ ಪರಿಹಿಸುತ್ತಿರುವಂತೆ ನಡೆದುಕೊಳ್ಳು ತ್ತಿದ್ದಾರೆ ಎಂಬ ಅನುಮಾನ ಹಿರಿಯ ನಾಯಕರಿಗೆ ಕಾಡುತ್ತಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ಸದ್ಯದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಎಲ್ಲವನ್ನೂ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನ ನಡೆಸುತ್ತಿದ್ದು, ರಮೇಶ್‌ ಜಾರಕಿಹೊಳಿ ಬಂಡಾಯದ ಹಿಂದೆಯೂ ಸಿದ್ದರಾಮಯ್ಯ ಅವರ ಆಶೀರ್ವಾದ ಇರುವ ಬಗ್ಗೆ ಹಿರಿಯ ನಾಯಕರು ಅನುಮಾನ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಎರಡೂ ಪಕ್ಷಗಳ ಹೊಂದಾಣಿಕೆಯಿಂದಲೇ ಸರ್ಕಾರ ಮುನ್ನಡೆಯಬೇಕಿದ್ದರೂ. ಸಮನ್ವಯ ಸಮಿತಿಯಲ್ಲಿ ಎರಡೂ ಪಕ್ಷಗಳ ಅಧ್ಯಕ್ಷರನ್ನು ಹೊರಗಿಟ್ಟು ಸಮನ್ವಯ ಸಮಿತಿಯನ್ನು ನಡೆಸುತ್ತಿರುವುದು ಎಚ್.ವಿಶ್ವನಾಥ್‌ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆಗೂ ಕಾರಣವಾಗಿದೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನೂ ತಮ್ಮ ಅಣತಿಗೆ ತಕ್ಕಂತೆ ನಡೆಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಹಿರಿಯ ನಾಯಕರದ್ದಾಗಿದೆ.

Advertisement

ಹಿರಿಯ ನಾಯಕರ ವಾದಕ್ಕೆ ಸಿದ್ದರಾಮಯ್ಯ ಪರ ಇರುವ ವಾದವೇ ಬೇರೆ ಇದೆ. ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸಿದ್ದರಾಮಯ್ಯ ಮನಸ್ಸಿಲ್ಲದಿದ್ದರೂ, ಹೈಕಮಾಂಡ್‌ ಆದೇಶಕ್ಕೆ ಮಣಿದು ಒಪ್ಪಿಕೊಂಡಿದ್ದರು. ಲೋಕಸಭೆ ಚುನಾವಣೆ ಸೋಲಿಗೆ ಸಿದ್ದರಾಮಯ್ಯ ಒಬ್ಬರೇ ಹೊಣೆಗಾರರಲ್ಲ. ಹಿರಿಯ ನಾಯಕರು ತಮ್ಮ ಸ್ವಂತ ಕ್ಷೇತ್ರಗಳಲ್ಲಿಯೇ ಸೋಲು ಕಂಡಿರುವುದಕ್ಕೇನು ಸಿದ್ದರಾಮಯ್ಯ ಕಾರಣವಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ.

ಶಾಸಕಾಂಗ ಪಕ್ಷದ ನಾಯಕ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಹುದ್ದೆಗೇನು ಪ್ರತಿ ದಿನ ಕೆಲಸ ಇರುವುದಿಲ್ಲ. ಎರಡೂ ಹುದ್ದೆ ಕೇವಲ ಮೇಲ್ವಿಚಾರಣೆಗೆ ಸೀಮಿತವಾಗಿವೆ. ಎರಡು ಹುದ್ದೆಗಳ ಬಗ್ಗೆ ವಿರೋಧಿಗಳು ಅಸೂಯೆಯಿಂದ ಆಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಮಾಸ್‌ ಲೀಡರ್‌, ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನ ಸಂವಿಧಾನಿಕ ಹುದ್ದೆಯಲ್ಲ. ಎರಡು ಹುದ್ದೆಗಳ ಬಗ್ಗೆ ಆರೋಪ ಮಾಡುವವರು ಇರುವ ವ್ಯವಸ್ಥೆಯನ್ನು ಹಾಳು ಮಾಡಲು ನಡೆಸುತ್ತಿರುವ ಪ್ರಯತ್ನ ಎಂಬ ಅಭಿಪ್ರಾಯ ಹೊಂದಿದ್ದಾರೆ.

ಸಿದ್ದು ಧೋರಣೆಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ತಮ್ಮ ಅಣತಿಯಂತೆ ನಡೆಯಬೇಕೆಂಬ ಧೋರಣೆ ಅನುಸರಿಸುತ್ತಿರುವುದರಿಂದ ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂಬ ಭಾವನೆಯನ್ನು ಪಕ್ಷದ ಹಿರಿಯ ನಾಯಕರು ಹೊಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಲೋಕಸಭೆ ಚುನಾವಣೆಯಲ್ಲಿಯೂ ಮೈತ್ರಿ ಪಕ್ಷಗಳ ಹೊಂದಾಣಿಕೆಯ ನಡುವೆಯೂ ಹಠ ಹಿಡಿದು ಮೈಸೂರು, ಕೊಪ್ಪಳ, ಬಾಗಲಕೋಟೆ ಕ್ಷೇತ್ರಗಳಲ್ಲಿ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಿದ್ದರು. ಅವರ ಧೋರಣೆಯಿಂದ ತುಮಕೂರಿನಲ್ಲಿ ಹಾಲಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪುವಂತಾಯಿತು. ಅಲ್ಲದೇ ಮಂಡ್ಯ ಹಾಗೂ ತುಮಕೂರಿನಲ್ಲಿ ಸಿದ್ದರಾಮಯ್ಯ ನಡೆಯಿಂದ ಕುರುಬ ಸಮುದಾಯ ಜೆಡಿಎಸ್‌ಗೆ ಮತ ಹಾಕಲಿಲ್ಲ. ಮೈಸೂರಿನಲ್ಲಿ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ ಮತ ಹಾಕದಿರುವುದರಿಂದ ಮೈತ್ರಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು ಎಂಬ ವಾದ ಕಾಂಗ್ರೆಸ್‌ನ ಹಿರಿಯ ನಾಯಕರದ್ದು.

ಸಿದ್ದರಾಮಯ್ಯ ಅವರ ಜೆಡಿಎಸ್‌ ವಿರೋಧಿ ಭಾವನೆಯಿಂದಲೇ ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದೆ. ಅಲ್ಲದೇ ಲೋಕಸಭೆ ಚುನಾವಣೆಯ ಫ‌ಲಿತಾಂಶ ಬಂದ ನಂತರ ಸಂಪುಟ ಪುನಾರಚನೆಯ ಕಸರತ್ತು ನಡೆಸಿ, ಪಕ್ಷದಲ್ಲಿನ ಹಿರಿಯ ಶಾಸಕರನ್ನು ಕಡೆಗಣಿಸಿ ಕೇವಲ ಇಬ್ಬರು ಪಕ್ಷೇತರರಿಗೆ ಅವಕಾಶ ನೀಡಲು ಮುಂದಾಗಿರುವ ಬಗ್ಗೆಯೂ ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ. ಅದೇ ಕಾರಣಕ್ಕೆ ರಾಮಲಿಂಗಾ ರೆಡ್ಡಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ ಎಂಬ ಮಾತುಗಳು ಕೇಳು ಬರುತ್ತಿವೆ.

ರಾಮಲಿಂಗಾರೆಡ್ಡಿ ಅವರ ಬಹಿರಂಗ ಬಂಡಾಯದ ಹಿಂದೆ ಮೂಲ ಕಾಂಗ್ರೆಸ್‌ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್‌ ಬೆಂಬಲ ಇದೆ ಎನ್ನಲಾಗುತ್ತಿದೆ.

ಹೈ ಕಮಾಂಡ್‌ ಗಮನಕ್ಕೆ: ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿಯೇ ರಾಜ್ಯದಲ್ಲಿನ ಇತ್ತೀಚಿನ ಗೊಂದಲಗಳನ್ನು ರಾಹುಲ್ ಗಾಂಧಿಯೇ ಮಧ್ಯಸ್ಥಿಕೆ ವಹಿಸಬೇಕೆಂಬ ಬೇಡಿಕೆಯನ್ನು ಪಕ್ಷದ ಹಿರಿಯ ನಾಯಕರು ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಪಕ್ಷದ ಹಿರಿಯ ನಾಯಕರ ಮನವಿಗೆ ರಾಹುಲ್ ಸ್ಪಂದಿಸುವರೋ ಅಥವಾ ಸಿದ್ದರಾಮಯ್ಯಗೆ ಜೈ ಎನ್ನುವರೋ ಕಾದು ನೋಡಬೇಕು.

ಹಿರಿಯರ ಆಸೆ
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಘಟಾನುಘಟಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ ಸೋಲು ಕಂಡಿದ್ದಾರೆ. ಕೇಂದ್ರದಲ್ಲಿಯೂ ಕಾಂಗ್ರೆಸ್‌ ಅಧಿಕಾರ ವಂಚಿತ ಆಗಿರುವುದರಿಂದ ರಾಜ್ಯ ಸರ್ಕಾರದ ಸಮನ್ವಯ ಸಮಿತಿ ಹುದ್ದೆ ಮೇಲೆ ಕಣ್ಣಿಟ್ಟಿರಬಹುದು ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next