ವಿಜಯಪುರ: ಎಂ.ಬಿ. ಪಾಟೀಲರೆ ನೀವು ನೀರಾವರಿಗಾಗಿ ಮಾಡಿರುವ ಕೆಲಸ ಸದಾ ಶಾಶ್ವತವಾಗಿರುತ್ತದೆ. ನೀರಾವರಿಗೆ ನೀವು ಮಾಡಿರುವ ಕಾರ್ಯ ದೊಡ್ಡದಿದೆ. ಭವಿಷ್ಯದಲ್ಲೂ ನೀವು ಎಲ್ಲಿದ್ದರೂ ಸದಾ ನೀರಾವರಿಗಾಗಿ ನಿಮ್ಮ ಕಾರ್ಯ ಮುಂದುವರಿಸಿ. ನೀರು ಪುಣ್ಯದ ಕಾರ್ಯ, ನೀರಿನೊಂದಿಗೆ ನಿಮ್ಮ ಹೆಸರು ಸದಾ ಇರುತ್ತದೆ ಎಂದು ಸಿದ್ದೇಶ್ವರ ಶ್ರೀಗಳು ಆಶೀರ್ವದಿಸಿದ್ದಾರೆ.
ಶನಿವಾರ ಗೃಹ ಸಚಿವ ಎಂ.ಬಿ. ಪಾಟೀಲ ಬಾಗಲಕೋಟೆ ಜಿಲ್ಲೆಯ ಬೀಳಗಿ ಮಾರ್ಗವಾಗಿ ವಿಜಯಪುರ ಜಿಲ್ಲೆಯತ್ತ ಪ್ರಯಾಣ ಬೆಳೆಸಿದ್ದರು. ಇದೇ ವೇಳೆ ಸಿದ್ದೇಶ್ವರ ಶ್ರೀಗಳು ಕೃಷ್ಣಾ ನದಿಗೆ ನಿರ್ಮಿಸಿರುವ ಕೊರ್ತಿ-ಕೋಲ್ಹಾರ ಸೇತುವೆ ಮೇಲೆ ನಡೆದುಕೊಂಡು ಬರುತ್ತಿದ್ದರು. ಬೀಳಗಿ ಹಿರೇಮಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿದ್ದೇಶ್ವರ ಶ್ರೀಗಳು ಕೂಡ ವಿಜಯಪುರ ನಗರದತ್ತ ಹೊರಟಿದ್ದರು. ಮಾರ್ಗಮಧ್ಯೆ ಕೃಷ್ಣಾ ಸೇತುವೆ ಮೇಲೆ ವಾಹನ ನಿಲ್ಲಿಸಿದ ಶ್ರೀಗಳು, ನದಿ ದೃಶ್ಯ ಸವಿಯುತ್ತ ಸೇತುವೆ ಮೇಲೆ ನಡೆಯುತ್ತ ಹೊರಟಿದ್ದರು. ಶ್ರೀಗಳನ್ನು ನೋಡಿದ ಸಚಿವ ಎಂ.ಬಿ. ಪಾಟೀಲ ಅವರು ತಮ್ಮ ವಾಹನ ನಿಲ್ಲಿಸಿ, ಶ್ರೀಗಳ ಬಳಿ ಹೋಗಿ ಆಶೀರ್ವಾದ ಪಡೆದು ಯೋಗಕ್ಷೇಮ ವಿಚಾರಿಸಿದರು.
ಬಳಿಕ ಸಚಿವರ ಆರೋಗ್ಯ ವಿಚಾರಿಸಿದ ಶ್ರೀಗಳು, ನೀರಾವರಿ ಕೆಲಸಗಳು ಹೇಗೆ ನಡೆಯುತ್ತಿವೆ ಎಂದು ಕೇಳಿದರು. ನಾನೀಗ ನೀರಾವರಿ ಸಚಿವನಲ್ಲ, ಗೃಹ ಸಚಿವ. ಹೀಗಾಗಿ ಖಾತೆ ಕೆಲಸದ ಕುರಿತು ನನಗೆ ತಿಳಿಯದು ಎಂದಾಗ ನೀವು ಎಲ್ಲಿದ್ದರೂ, ಯಾವ ಖಾತೆ ನಿಭಾಯಿಸಿದರೂ ನೀರಾವರಿ ವಿಷಯ ಮಾತ್ರ ಮರೆಯಬಾರದು ಎಂದು ಸಲಹೆ ನೀಡಿದರು.
ನಂತರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ವಿವಿಧ ಕಾಮಗಾರಿಗಳ ಕುರಿತು ಸಚಿವರಿಂದ ಮಾಹಿತಿ ಪಡೆದ ಶ್ರೀಗಳು, ಭೂಸ್ವಾಧೀನ ಹಾಗೂ ಭೂ ಪರಿಹಾರ ಕುರಿತು ಏನೇನು ಕಾರ್ಯ ಆಗುತ್ತಿದೆ ಎಂದು ಕೇಳಿದರು. ಈ ಹಂತದಲ್ಲಿ ತಮಗೆ ಮಾಹಿತಿ ಇರುವುದನ್ನು ಶ್ರೀಗಳೊಂದಿಗೆ ಹಂಚಿಕೊಂಡ ಸಚಿವರು, ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು ಹಾಗೂ ಪುನರ್ವಸತಿ-ಪುನರ್ ನಿರ್ಮಾಣ ಕಾರ್ಯಕ್ಕಾಗಿ 3 ಹಂತಗಳಲ್ಲಿ ರೂಪುರೇಷೆ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಈಗಾಗಲೇ ಸಮಗ್ರ ಚರ್ಚೆ ಮಾಡಲಾಗಿದೆ ಎಂದು ಸಚಿವ ಎಂ.ಬಿ. ಪಾಟಿಲ ವಿವರಿಸಿದರು.
ಗೃಹ ಸಚಿವನಾಗಿ ಎರಡನೇ ಬಾರಿಗೆ ನನ್ನ ತವರು ಜಿಲ್ಲೆಗೆ ಹೊರಟ ವೇಳೆ ಅನಿರೀಕ್ಷಿತವಾಗಿ ಕೃಷ್ಣಾ ನದಿ ಸ್ಥಳದಲ್ಲಿ ಶ್ರೀಗಳ ದರ್ಶನ ಹಾಗೂ ಮಾರ್ಗದರ್ಶನ ದೊರೆತಿದ್ದು ನನ್ನ ಸೌಭಾಗ್ಯ. ಶ್ರೀಗಳ ಆಶಯದಂತೆ ನಡೆದುಕೊಳ್ಳುತ್ತೇನೆ. ಜಿಲ್ಲೆಯ ನೀರಾವರಿ ಹಾಗೂ ರೈತರ ಕುರಿತು ಶ್ರೀಗಳ ಕಳಕಳಿ, ಕಾಳಜಿ ಅನನ್ಯ. ಸಮಿಶ್ರ ಸರ್ಕಾರದ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರೊಂದಿಗೆ ನಾನೂ ಕೂಡಾ ನೀರಾವರಿಗೆ ಸದಾ ಶ್ರಮಿಸುತ್ತೇನೆ ಎಂದು ಹೇಳಿದರು.