Advertisement

ಸಿದ್ಧೇಶ್ವರ ಜಾನುವಾರು ಜಾತ್ರೆ

12:16 PM Jan 12, 2018 | |

ವಿಜಯಪುರ: ಶತಮಾನೋತ್ಸವ ಸಂಭ್ರಮದಲ್ಲಿರುವ ವಿಜಯಪುರ ಸಿದ್ಧೇಶ್ವರ ಜಾತ್ರೆ ಅಂಗವಾಗಿ ಈ ಬಾರಿಯೂ ಜಾನುವಾರು ಜಾತ್ರೆ ನಡೆಯುತ್ತಿದ್ದು, ಹತ್ತಾರು ಸಾವಿರ ಗೋವು-ಹೋರಿ, ಎತ್ತುಗಳು ಜಾನುವಾರು ಜಾತ್ರೆಗೆ ಬರುತ್ತಿವೆ.

Advertisement

ಸಿದ್ಧೇಶ್ವರ ಜಾತ್ರೆಗಾಗಿಯೇ ವಿಜಯಪುರಕ್ಕೆ ಹತ್ತಿರದ ತೊರವಿ ಗ್ರಾಮಕ್ಕೆ ಹೊಂದಿಕೊಂಡಿರುವ ನೂರಾರು ಎಕರೆ ವಿಸ್ತೀರ್ಣದಲ್ಲಿ ಪ್ರತಿ ವರ್ಷವೂ ಜಾನುವಾರು ಜಾತ್ರೆ ನಡೆಯುತ್ತದೆ. ಕಳೆದ ನಾಲ್ಕಾರು ವರ್ಷಗಳಲ್ಲಿ ಮಳೆ ಇಲ್ಲದೇ ಕಂಗಾಲಾಗಿದ್ದ ರೈತರು ಸೊರಗಿದ ಜಾನುವಾರುಗಳನ್ನು ಅಗ್ಗದ ದರಕ್ಕೆ ಮಾರಿಕೊಂಡಿದ್ದರು. ಕಾರಣ ಸಿದ್ದೇಶ್ವರ
ಜಾತ್ರೆಯೂ ಸೊರಗಿತ್ತು. ಈ ಬಾರಿ ಉತ್ತಮ ಮಳೆ ಆಗಿರುವ ಕಾರಣ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಅತ್ಯುತ್ತಮ ಮೈಕಟ್ಟಿನ ಆರೋಗ್ಯವಂತ ಗೋವು, ಹೋರಿ, ಎತ್ತುಗಳನ್ನು ಕೊಳ್ಳುವ ಉಮೇದು ಹೆಚ್ಚಿದೆ.

ಬುಧವಾರ ಸಂಜೆಯಿಂದ ಜಾತ್ರೆ ಪ್ರದರ್ಶನ-ಮಾರಾಟಕ್ಕೆ ಬರುತ್ತಿರುವ ಜಾನುವಾರುಗಳಲ್ಲಿ ಬಹುತೇಕ ಖೀಲಾರಿ
ತಳಿಯ ಗೋವು, ವಿವಿಧ ಹಂತದ ಹಲ್ಲಿನ ಹೋರಿಗಳು, ಉಳುವ ಎತ್ತುಗಳು ಪ್ರದರ್ಶನ ಮಾರಾಟಕ್ಕೆ ಬರತೊಡಗಿವೆ. ಒಂದು ವಾರ ಕಾಲ ನಡೆಯುವ ಜಾತೆಯಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಪ್ರದರ್ಶನ-ಮಾರಾಟಕ್ಕೆ ಬರುತ್ತವೆ. ಈ ಬಾರಿ ದೇಶಿ ಮಲಾಡ ಗಿಡ್ಡ, ದೇವಣಿಗಳೂ ಅಲ್ಲಲ್ಲಿ ಕಂಡು ಬರುತ್ತಿದ್ದು, ವಿದೇಶಿ ತಳಿಗಳು ಅಪರೂಪವಾಗಿವೆ. ಜಾತ್ರೆಯಲ್ಲಿ 5 ಸಾವಿರ ರೂ.ನಿಂದ 5 ಲಕ್ಷ ರೂ. ಮೊತ್ತದ ಹೋರಿಗಳು ಪ್ರದರ್ಶನಕ್ಕೆ ಬಂದಿರುವುದು ಗಮನಾರ್ಹ ಎನಿಸುತ್ತಿವೆ. 

ಜಾನುವಾರು ಜಾತ್ರೆಗೆ ಬರುವ ಜಾನುವಾರುಗಳು ಹಾಗೂ ರೈತರ ಅನುಕೂಲಕ್ಕಾಗಿ ಎಪಿಎಂಸಿ ಅಧಿಕಾರಿಗಳು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ. ಪಶುಪಾಲನೆ ಹಾಗೂ ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿ ಹಗಲು-ರಾತ್ರಿ ಎರಡು ಪಾಳೆಯಲ್ಲಿ ಜಾನುವಾರುಗಳ ಆರೋಗ್ಯಕ್ಕಾಗಿ ಟೊಂಕಕಟ್ಟಿದ್ದಾರೆ. 

ವಾಹನದಲ್ಲಿ ಜಾತ್ರೆಗೆ ಸಾಗಿಸುವಾಗ ಜಾನುವಾರುಗಳ ದೇಹಕ್ಕೆ, ಕಾಲುಗಳಿಗೆ ಆಗುವ ಗಾಯಗಳಿಗೆ, ಪರಿಸರದ ಬದಲಾವಣೆಯಿಂದ ಉಂಟಾಗುವ ದೈಹಿಕ ಬಾಧೆಗಳಿಗೆಲ್ಲ ಅಗತ್ಯ ಇರುವ ಮುಲಾಮು, ಔಷ ಧಗಳನ್ನು ನೀಡುವ ಮೂಲಕ ಜಾನುವಾರುಗಳ ಆರೋಗ್ಯ ರಕ್ಷಣೆ ಮಾಡುತ್ತಿದ್ದಾರೆ.

Advertisement

ಇನ್ನು ಜಾನುವಾರು ಜಾತ್ರೆಗೆ ಆಗಮಿಸುವ ರೈತರಿಗೆ ಆರೋಗ್ಯ ಚಿಕಿತ್ಸೆ ನೀಡಲು ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಆಸ್ಪತ್ರೆ, ಅಲ್‌ ಅಮೀನ್‌ ವೈದ್ಯಕೀಯ ಕಾಲೇಜು ಆಸ್ಪತ್ರೆ ವೈದ್ಯರು, ಸಿಬ್ಬಂದಿ ಶಿಬಿರಗಳನ್ನೇ ಆರಂಭಿಸಿವೆ. 

ಜಾನುವಾರು ಜಾತ್ರೆಗೆ ಬರುವ ರೈತರಿಗೆ ಸ್ಥಳೀಯವಾಗಿ ಊಟ-ಉಪಹಾರ ಕಲ್ಪಿಸಲು ಹತ್ತಾರು ಹೋಟೆಲ್‌ಗ‌ಳು, ತಳ್ಳುವ ಬಂಡಿಯಲ್ಲಿ ಚಹಾ ಮಾರುವವರು, ರೈತರು ಬಳಸುವ ಎಲೆ-ಅಡಿಕೆ, ಕರಿಸೊಪ್ಪು ಮಾರಾಟದ ಅಂಗಡಿಗಳೂ ತಲೆ ಎತ್ತಿವೆ. ಕಬ್ಬಿನ ಹಾಲು ಮಾರಾಟದ ಅಂಗಡಿಗಳಲ್ಲಿ ಮಾರಾಟವೂ ಜೋರಾಗಿದೆ. ಮಿಠಾಯಿ ಅಂಗಡಿಗಳೂ ಜಾನುವಾರು ಜಾತ್ರೆಯಲ್ಲೇ ಠಿಕಾಣಿ ಹಾಕಿದ್ದು, ಸೈಕಲ್‌ ಮೇಲೆ ಐಸ್‌ಕ್ರೀಮ್‌ ಮಾರಾಟ, ಬಯಲಿನಲ್ಲಿ ಶೆಡ್‌
ಹಾಕಿಕೊಂಡು ಬಾರೆಹಣ್ಣು, ಬಾಳೆಹಣ್ಣು, ಲಿಂಬೆ ಹಣ್ಣು, ರೈತರಿಗೆ ಸ್ಥಳದಲ್ಲೇ ಅಡುಗೆ ಮಾಡಿಕೊಳ್ಳಲು ತಳ್ಳು ಬಂಡಿಯಲ್ಲಿ ತರಕಾರಿಯೂ ಸೇರಿದಂತೆ ಹಲವು ಅಗತ್ಯದ ವಸ್ತುಗಳು ಜಾನುವಾರು ಜಾತ್ರೆಯಲ್ಲಿ ಸಿಗುತ್ತಿವೆ.

ಕೃಷಿ ಉತ್ಪನ್ನ ಮಾತುಕಟ್ಟೆ ಸಮಿತಿಯಿಂದ ಹಾಲಲ್ಲಿನ ಹೋರಿ, 2, 4, 6 ಹಲ್ಲಿನ ಹೋರಿ, ಜೋಡು ಎತ್ತು, ಆಕಳು ಮಣಕ-ಖೀಲಾರಿ, ಆಕಳು-ಖೀಲಾರಿ, ಮಿಶ್ರತಳಿ, ಮಾಸು ಮಿಶ್ರತಳಿ ಜಾನುವಾರುಗಳಿಗೆ ಬಹುಮಾನ ನೀಡಲಾಗುತ್ತಿದೆ.
ಇದಕ್ಕಾಗಿ ನೆರೆಯ ಜಿಲ್ಲೆಗಳ ಜಾನುವಾರು ತಜ್ಞ ವೈದ್ಯರನ್ನು ತೀರ್ಪುಗಾರರಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.
ಒಟ್ಟಾರೆ ಶತಮಾನದ ಸಂಭ್ರಮ ಆಚರಿಸುತ್ತಿರುವ ಸಿದ್ಧೇಶ್ವರ ಜಾತ್ರೆ ನಿಮಿತ್ತ ಜಾನುವಾರು ಜಾತ್ರೆ ಈ ಬಾರಿ ಜೋರಾಗಿದೆ. 

ಧರ್ಮದಲ್ಲಿ ನಾನು ಇಸ್ಲಾಮೀಯ ನಾದರೂ ಕಳೆದ ಹಲವು ವರ್ಷಗಳಿಂದ ಕೃಷಿ ಜೊತೆಗೆ ಗೋಮಾತೆ ಸಾಕುತ್ತಿರುವ
ನನಗೆ ಒಳಿತಾಗಿದೆ. ಗೋವುಗಳ ಸಾಕಾಣಿಕೆ ನನ್ನ ಮಟ್ಟಿಗೆ ಧರ್ಮ ಮೀರಿದ ಬದುಕಿನ ಸಂಗತಿ. ಕಳೆದ ಕೆಲವೇ ತಿಂಗಳ ಹಿಂದೆ 3.50 ಲಕ್ಷ ರೂ. ಗೆ ಒಂದು ಹೋರಿ ಮಾರಿದ್ದು, ಅದಕ್ಕಿಂತ ಸಣ್ಣ ಹೋರಿಯನ್ನು ಈ ಬಾರಿ 3 ಲಕ್ಷ ರೂ.ಗೆ ಮಾರಾಟಕ್ಕೆ ತಂದಿದ್ದೇನೆ ಎನ್ನುತ್ತಾರೆ.
 ಬೆಳವಾವಿ ಜಿಲ್ಲೆ ಅಥಣಿ ತಾಲೂಕು ಜನವಾಡ ಗ್ರಾಮದ ರೈತ ರಾಜು ಕಮಲನವರ.

ಹೋಟೆಲ್‌ ನಿಂದ ಹೆಚ್ಚಿನ ಲಾಭ
ಕಳೆದ ಹತ್ತು ವರ್ಷಗಳಿಂದ ಸಿದ್ಧೇಶ್ವರ ಜಾನುವಾರು ಜಾತ್ರೆಯಲ್ಲಿ ಹೋಟೆಲ್‌ ಹಾಕುತ್ತಿರುವ ನನಗೆ ಉತ್ತಮ
ಲಾಭವಾಗಿದೆ. ಭೂ ಬಾಡಿಗೆ, ಕಾರ್ಮಿಕರ ಕೂಲಿ ಅಂತೆಲ್ಲ ಖರ್ಚು ವೆಚ್ಚವೆಲ್ಲ ತೀರಿಯೂ ಕಳೆದ ವರ್ಷ 20 ಸಾವಿರ ರೂ. ಲಾಭವಾಗಿತ್ತು. ಈ ಬಾರಿ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದೇನೆ.
 ಮಹ್ಮದ್‌ ಹನೀಫ್‌, ತಿಕೋಟ ಜಾನುವಾರು ಜಾತ್ರೆ ಹೋಟೆಲ್‌ ಮಾಲೀಕ, 

„ಜಿ.ಎಸ್‌.ಕಮತ

Advertisement

Udayavani is now on Telegram. Click here to join our channel and stay updated with the latest news.

Next