ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಮಾರುಕಟ್ಟೆ ಕಾಮಗಾರಿ, ವಿಜಯಪುರ ರಸ್ತೆಯಲ್ಲಿ ನಡೆಯುತ್ತಿರುವ ಬಸವ ಭವನ ಕಾಮಗಾರಿಯನ್ನು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ವೀಕ್ಷಿಸಿ ಶುಭಾಶೀರ್ವಾದ ನೀಡಿದರು.
ಈ ವೇಳೆ ಶಾಸಕ ಶಿವಾನಂದ ಪಾಟೀಲ ಅವರು, ಮೆಗಾ ಮಾರುಕಟ್ಟೆ ಕಾಮಗಾರಿ ಮೊದಲ ಹಂತದಲ್ಲಿ 33 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಕೆಳ ಭಾಗದಲ್ಲಿ ವಾಹನಗಳ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗುವುದು. ಇದು ಐದು ಅಂತಸ್ತಿನ ಮೆಗಾ ಮಾರುಕಟ್ಟೆ ನಿರ್ಮಾಣವಾಗಲಿದೆ. ಸದ್ಯ ಮೊದಲ, ಎರಡನೇ ಅಂತಸ್ತಿನ ಕಟ್ಟಡ ಕಾಮಗಾರಿ ಆರಂಭವಾಗಿದೆ. ಮೆಗಾ ಮಾರುಕಟ್ಟೆಯ ಮೇಲಿನ ಅಂತಸ್ತಿನ ಅಂಗಡಿಗಳಿಗೆ ಹೋಗಲು ಲಿಪ್ಟ್ ವ್ಯವಸ್ಥೆ ಮಾಡಲಾಗುವದು. ಇದು ಒಟ್ಟು 57 ಕೋಟಿ ವೆಚ್ಚದ ಕಾಮಗಾರಿಯಾಗಿದೆ. ಪಟ್ಟಣದಲ್ಲಿರುವ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂದು ಶ್ರೀಗಳಿಗೆ ವಿವರಿಸಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿ ಅಂದಾಜು 9 ಕೋಟಿ ವೆಚ್ಚದಲ್ಲಿ ಭವ್ಯವಾದ ಬಸವ ಭವನ ನಿರ್ಮಾಣವಾಗುತ್ತಿದೆ. ಇದರಲ್ಲಿ ಮದುವೆ ಸೇರಿದಂತೆ ವಿವಿಧ ಸಮಾರಂಭಗಳನ್ನು ಮಾಡಲು ಜನರಿಗೆ ಬೇಕಾದ ಸೌಲಭ್ಯಗಳನ್ನು ಒಳಗೊಂಡಂತೆ ಬಸವ ಭವನ ನಿರ್ಮಾಣವಾಗುತ್ತಿದೆ. ಮೇಲ್ಭಾಗದಲ್ಲಿ ದೊಡ್ಡ ಪ್ರಮಾಣದ ಹಾಲ್ ವ್ಯವಸ್ಥೆಯಿದೆ. ಕೆಳ ಭಾಗದಲ್ಲಿ ಊಟದ ವ್ಯವಸ್ಥೆಗೆ ಜಾಗೆ ಕಲ್ಪಿಸಲಾಗಿದೆ. ಅಡುಗೆ ತಯಾರಿಸಲು ಅಡುಗೆ ಕೋಣೆ, ಜನರು ಕೈ ತೊಳೆಯಲು ಬೇಕಾದ ನಲ್ಲಿ ವ್ಯವಸ್ಥೆ ಸೇರಿದಂತೆ ಸಕಲ ಸೌಲಭ್ಯಗಳನ್ನು ಒಳಗೊಂಡ ಭವ್ಯವಾದ ಬಸವ ಭವನ ನಿರ್ಮಾಣವಾಗುತ್ತಿದೆ.
ಇದಕ್ಕೆ ಪಕ್ಕದಲ್ಲಿರುವ ಉರ್ದು ಪ್ರಾಥಮಿಕ ಶಾಲೆಯ ಜಾಗೆಯನ್ನು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ವಿಚಾರವಿದೆ. ಉರ್ದು ಶಾಲೆಯನ್ನು ಬೇರೆಡೆ ಸ್ಥಳಾಂತರ ಮಾಡಲಾಗುವದು. ಇಂಗಳೇಶ್ವರ ರಸ್ತೆಯಲ್ಲಿ ಪುರಸಭೆಯಿಂದ ಕಡು ಬಡವರಿಗೆ ಅನುಕೂಲವಾಗುವ 500 ಜಿ ಪ್ಲಸ್ ಮಾದರಿಯಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ ಎಂದು ಶ್ರೀಗಳ ಗಮನಕ್ಕೆ ತಂದ ಅವರು, ಬಸವ ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಶ್ರೀಗಳಿಗೆ ಆಗಮಿಸಬೇಕೆಂದು ಮನವಿ ಮಾಡಿಕೊಂಡರು.
ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ ಹರ್ಷಿಸಿದರು. ಈ ಸಂದರ್ಭದಲ್ಲಿ ಸಿದ್ದಲಿಂಗ ಸ್ವಾಮೀಜಿ, ಅಕ್ಕಅನ್ನಪೂರ್ಣತಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ತಹಸೀಲ್ದಾರ ಎಂ.ಎನ್.ಚೋರಗಸ್ತಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಕರೂರ, ಅಭಿಯಂತರರಾದ ಜಿ.ಸಿ.ವಂದಾಲ, ವಿಲಾಸ ರಾಠೊಡ, ಮುಖ್ಯಾಧಿಕಾರಿ ಬಿ.ಎ.ಸೌದಾಗರ, ಮುಖಂಡರಾದ ಬಸವರಾಜ ಕೋಟಿ, ಸಂಗಮೇಶ ಓಲೇಕಾರ, ಬಸವರಾಜ ರಾಯಗೊಂಡ, ಅಶೋಕ ಹಾರಿವಾಳ, ದೇವೇಂದ್ರ ಚವ್ಹಾಣ, ಶಿವಾನಂದ ತೋಳನೂರ, ವಿನುತ ಕಲ್ಲೂರ, ಸಂಜೀವ ಕಲ್ಯಾಣಿ, ನೀಲಪ್ಪ ನಾಯಕ, ಜಗದೇವಿ ಗುಂಡಳ್ಳಿ, ರುಕ್ಮಿಣಿ ರಾಠೊಡ, ಸುನೀಲ ಚಿಕ್ಕೊಂಡ, ಸುರೇಶ ಮಣ್ಣೂರ, ದೀಲಿಪ್, ಬಸವರಾಜ ಗಚ್ಚಿನವರ, ನಜೀರ ಗಣಿ, ರಾಜು ಬೂತನಾಳ, ಪಿಎಸ್‌ಐ ಗುರುಶಾಂತ ದಾಶ್ಯಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.