Advertisement

ಇಂದಿನಿಂದ ಸಿದ್ದೇಶ್ವರ ಶ್ರೀ ಪ್ರವಚನ: ಕೆಸಿಡಿ ಮೈದಾನ ಸಜ್ಜು

12:54 PM Feb 24, 2017 | |

ಧಾರವಾಡ: ಇಂದಿನಿಂದ (ಫೆ. 24) ಒಂದು ತಿಂಗಳ ಕಾಲ ಇಲ್ಲಿನ ಕೆಸಿಡಿ ಮೈದಾನದಲ್ಲಿ ನಡೆಯಲಿರುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಧ್ಯಾತ್ಮ ಪ್ರವಚನಕ್ಕೆ ಕೆಸಿಡಿ ಮೈದಾನ ಸಜ್ಜಾಗಿದ್ದು, ಸಿದ್ದೇಶ್ವರ ಶ್ರೀ ನಗರದ ತಪೋವನಕ್ಕೆ ಗುರುವಾರ ಆಗಮಿಸಿದ್ದಾರೆ. 

Advertisement

ಇನ್ನು ಒಂದು ತಿಂಗಳು ಇಲ್ಲಿಯೇ ವಾಸ್ತವ್ಯ ಹೂಡಲಿದ್ದು, ಗುರುವಾರ ಮಧ್ಯಾಹ್ನ ಆಗಮಿಸಿದ ಸ್ವಾಮಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಶಾಸಕ ಅರವಿಂದ ಬೆಲ್ಲದ, ತಪೋವನದ ಟ್ರಸ್ಟಿ ಬಿ.ಡಿ. ಪಾಟೀಲ್‌, ಪ್ರವಚನ ಸಮಿತಿ ಸಂಯೋಜಕ ಪ್ರಕಾಶ್‌ ಜಕಾತಿ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಮುಖಂಡರಾದ ಪ್ರದೀಪ್‌ ಪಾಟೀಲ್‌, ಗಂಗಾಧರ ಕಲ್ಲೂರು ಹಾಗೂ ಅಪಾರ ಭಕ್ತ ಮಂಡಳಿ ಸ್ವಾಗತಿಸಿತು. 

ಬಳಿಕ ಸಚಿವ ವಿನಯ ಕುಲಕರ್ಣಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರು ಕರ್ನಾಟಕ ಕಾಲೇಜ್‌ ಆವರಣದಲ್ಲಿ ಪ್ರವಚನ ಕಾರ್ಯಕ್ರಮಕ್ಕೆ ಅಗತ್ಯವಿರುವ ಸಿದ್ಧತೆ ಪೂರ್ಣಗೊಂಡ ಕುರಿತು ಸಿದ್ದೇಶ್ವರ ಶ್ರೀಗಳಿಗೆ ಮಾಹಿತಿ ನೀಡಿದರು. ನಂತರ ಪ್ರವಚನ ನಡೆಯುವ ಕೆಸಿಡಿ ಮೈದಾನವನ್ನು ಶ್ರೀಗಳು ವೀಕ್ಷಿಸಿದರು.

ಅಲ್ಲಿಂದ ಶ್ರೀಗಳು ತಪೋವನಕ್ಕೆ ತೆರಳಿದರು. ಅಲ್ಲಿ ಶ್ರೀಗಳ ದರ್ಶನಕ್ಕೆ ಆಗಮಿಸಿದ್ದ ಭಕ್ತಾದಿಗಳಿಗಾಗಿ ಮಾಡಲಾಗಿದ್ದ ದಾಸೋಹ ಸೇವೆಗೆ ಸಿದ್ದೇಶ್ವರ ಶ್ರೀಗಳು ಚಾಲನೆ ನೀಡಿದರು. ಶ್ರೀಗಳು ಸ್ವತಃ ತಾವೇ ನಿಂತು ನೂರಾರು ಭಕ್ತರಿಗೆ ಉಣ ಬಡಿಸಿದ್ದು, ಭಕ್ತರ ಮನ ಪುಳಕಿತಗೊಳ್ಳುವಂತೆ ಮಾಡಿತು. 

ಸಿದ್ದೇಶ್ವರ ಶ್ರೀ ಪ್ರವಚನ:ವಿಶೇಷ ಬಸ್‌ ವ್ಯವಸ್ಥೆ 
ಹುಬ್ಬಳ್ಳಿ:
ಧಾರವಾಡ ಕೆಸಿಡಿ ಮೈದಾನದಲ್ಲಿ ಫೆ.24ರಿಂದ ಪ್ರಾರಂಭವಾಗಲಿರುವ ವಿಜಯಪುರ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರವಚನ ಕಾರ್ಯಕ್ರಮಕ್ಕೆ ನಗರದಿಂದ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಫೆ.24ರಿಂದ ಪ್ರತಿದಿನ ಬೆಳಿಗ್ಗೆ 5:30 ಗಂಟೆಗೆ ಕೇಶ್ವಾಪುರ ರಮೇಶ ಭವನದಿಂದ ಬಸ್‌ ಸಂಚಾರ ಆರಂಭಿಸಲಿದೆ.

Advertisement

ಪ್ರವಚನ ಮುಕ್ತಾಯ ನಂತರ 8 ಗಂಟೆಗೆ ಕೆಸಿಡಿ ಮೈದಾನದಿಂದ ಹುಬ್ಬಳ್ಳಿ ರಮೇಶ ಭವನಕ್ಕೆ ಸಾರಿಗೆ ಸಂಸ್ಥೆಯ ಬಸ್‌ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next