Advertisement

ಶೋಧ ಕಾರ್ಯ ಪುನರಾರಂಭ : ಸಿದ್ದಾರ್ಥ್ ಪತ್ತೆಗೆ ವಿಶೇಷ ಬಹುಮಾನ ಘೋಷಿಸಿದ ಡಿಕೆಶಿ

09:06 AM Jul 31, 2019 | Team Udayavani |

ಮಂಗಳೂರು: ನಿಗೂಢವಾಗಿ ನಾಪತ್ತೆಯಾಗಿರುವ ಬಹುಕೋಟಿ ಉದ್ಯಮಿ ಸಿದ್ದಾರ್ಥ್ ಹೆಗ್ಡೆ ಅವರು ಕಾಣೆಯಾಗಿದ್ದಾರೆಂದು ಹೇಳಲಾಗುತ್ತಿರುವ ಉಲ್ಲಾಳದ ನೇತ್ರಾವತಿ ನದಿಯಲ್ಲಿ ಮಂಗಳವಾರ ಬೆಳಿಗ್ಗೆಯಿಂದ ನಡೆಯುತ್ತಿದ್ದ ಶೋಧಕಾರ್ಯವನ್ನು ರಾತ್ರಿಯೂ ಮುಂದುವರಿಸಲಾಗಿದೆ.

Advertisement

ಒಂದು ಹಂತದಲ್ಲಿ ಜಿಲ್ಲಾಡಳಿತವು ಮಂಗಳವಾರ ರಾತ್ರಿಯಾಗುತ್ತಿದ್ದಂತೆ ದಿನದ ಶೋಧಕಾರ್ಯವನ್ನು ನಿಲ್ಲಿಸುತ್ತಿರುವುದಾಗಿ ಮಾಹಿತಿ ನೀಡಿತ್ತು. ಈ ಕುರಿತಾಗಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮತ್ತು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರು ಶೋಧಕಾರ್ಯ ನಿಲುಗಡೆಗೆ ಆದೇಶವನ್ನೂ ಸಹ ನೀಡಿದ್ದರು.

ಆದರೆ ಈ ವಿಚಾರ ತಿಳಿದು ನೇತ್ರಾವತಿ ಸೇತುವೆ ಸ್ಥಳಕ್ಕೆ ಆಗಮಿಸಿದ ಮಾಜೀ ಸಚಿವ ಮತ್ತು ಸ್ಥಳೀಯ ಶಾಸಕ ಯು.ಟಿ. ಖಾದರ್ ಅವರು ಶೋಧಕಾರ್ಯ ನಿಲುಗಡೆಗೊಳಿಸಿದ ಜಿಲ್ಲಾಡಳಿತದ ನಿರ್ಧಾರಕ್ಕೆ ಅಸಮಧಾನ ವ್ಯಕ್ತಪಡಿಸಿದರು. ಮತ್ತು ಜಿಲ್ಲಾಧಿಕಾರಿಯವರಿಗೆ ಕರೆ ಮಾಡಿ ತಕ್ಷಣವೇ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡು ಶೋಧಕಾರ್ಯವನ್ನು ಪುನರಾರಂಭಿಸುವಂತೆ ತಾಕೀತು ಮಾಡಿದರು. ಈ ವೇಳೆ ಜಿಲ್ಲಾಧಿಕಾರಿಯವರು ತಕ್ಷಣವೇ ಶೋಧಕಾರ್ಯವನ್ನು ಪುನರಾರಂಭಿಸುವ ಭರವಸೆಯನ್ನು ಶಾಸಕರಿಗೆ ನೀಡಿದರು.

ಇದೀಗ ನೇತ್ರಾವತಿ ನದಿಭಾಗದಲ್ಲಿ ಶೋಧಕಾರ್ಯ ಪುನರಾರಂಭಗೊಂಡಿದೆ.

Advertisement

ಸಿದ್ದಾರ್ಥ್ ಅವರು ನಾಪತ್ತೆಯಾಗಿ 24 ಗಂಟೆಗಳು ಕಳೆದರೂ ಯಾವುದೇ ರೀತಿಯ ಸುಳಿವು ಲಭಿಸದ ಹಿನ್ನಲೆಯಲ್ಲಿ ಅವರ ಕುಟುಂಬ ಸದಸ್ಯರಲ್ಲಿ ಮತ್ತು ಸ್ನೇಹಿತ ವಲಯದಲ್ಲಿ ಆತಂಕ ಹೆಚ್ಚಾಗುತ್ತಿದೆ. ಈ ಮಧ್ಯೆ ಸಿದ್ದಾರ್ಥ್ ಅವರ ಪತ್ತೆಗೆ ನೆರವಾಗುವವರಿಗೆ ವಿಶೇಷ ಬಹುಮಾನವನ್ನು ಮಾಜೀ ಸಚಿವ ಡಿ. ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ.

ಈ ವಿಷಯವನ್ನು ಶಾಸಕ ಯು.ಟಿ. ಖಾದರ್ ಅವರು ತಡರಾತ್ರಿ ಶೋಧ ಕಾರ್ಯಾಚರಣೆಯ ಸ್ಥಳದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ತಿಳಿಸಿದರು. ಈ ವಿಚಾರವನ್ನು ಶಿವಕುಮಾರ್ ಅವರು ದೂರವಾಣಿ ಮುಖಾಂತರ ತನಗೆ ತಿಳಿಸಿರುವುದಾಗಿ ಖಾದರ್ ಅವರು ಇದೇ ಸಂದರ್ಭದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next