Advertisement

ಸಿದ್ಧಾರ್ಥರಂತೆ ನನಗೂ ಒತ್ತಡಗಳಿವೆ

12:40 AM Aug 26, 2019 | Team Udayavani |

ಬೆಂಗಳೂರು: “ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರಿಗೆ ಇದ್ದಂತೆಯೇ ನನಗೂ ಒತ್ತಡಗಳಿವೆ. ಆದರೆ, ಅವೆಲ್ಲವುಗಳನ್ನೂ ನಿವಾರಿಸಿಕೊಂಡು ಬದುಕುತ್ತಿದ್ದೇನೆ’ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Advertisement

ಜಯನಗರದ ಚಂದ್ರಸಾಗರ ಕಲ್ಯಾಣ ಮಂಟಪದಲ್ಲಿ ಮಲೆನಾಡಿನ ಸಂಘ ಸಂಸ್ಥೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಉದ್ಯಮಿ ವಿ.ಜಿ. ಸಿದ್ದಾರ್ಥ ಹೆಗ್ಡೆ ನುಡಿನಮನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಸಿದ್ಧಾರ್ಥ ಸಾವಿನ ಸಮಯದಲ್ಲಿ ಕೆಲ ಕಾರಣಗಳಿಗೆ ನನ್ನ ಹೆಸರನ್ನು ಬಳಸಿಕೊಂಡರು. ಆದರೆ, ನಾನು ಮಾತ್ರ ಎಷ್ಟೇ ತೊಂದರೆ ಒತ್ತಡಗಳು ಬಂದರೂ ಯಾವುದಕ್ಕೂ ಜಗ್ಗುವುದಿಲ್ಲ.

ಸಿದ್ಧಾರ್ಥನಂತೆ ನನಗೂ ಒತ್ತಡಗಳಿವೆ. ಅವುಗಳನ್ನು ನಿವಾರಿಸಿಕೊಂಡು ಬದುಕುತ್ತಿದ್ದೇನೆ’ ಎಂದು ಹೇಳಿದರು. ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಹೆಗ್ಡೆ ಸಾವಿನ ನಂತರ ದೇಶದ ಅನೇಕ ಉದ್ಯಮಿಗಳು ಭಯದ ನೆರಳಲ್ಲಿ ಕೆಲಸ ಮಾಡುತ್ತಿದ್ದಾರೆ. ಉದ್ಯಮಿಗಳಿಗೆ ಮುಕ್ತ ವಾತಾವರಣ ನಿರ್ಮಾಣವಾಗಬೇಕು. ಕೇಂದ್ರದಲ್ಲಿ ಆಡಳಿತ ನಡೆಸುವವರಿಗೆ ದೇವರು ಒಳ್ಳೆಯ ಬುದ್ಧಿ ನೀಡಲಿ ಎಂದು ತೀಕ್ಷ್ಣವಾಗಿ ಹೇಳಿದರು.

ಸಿದ್ದಾರ್ಥ ಸರಳ ಹಾಗೂ ಸಜ್ಜನಿಕೆಗೆ ಹೆಸರಾಗಿದ್ದರು, ತಮ್ಮ ಉದ್ಯಮದ ಮೂಲಕ ಸಾವಿರಾರು ಜನಕ್ಕೆ ಉದ್ಯೋಗ ನೀಡುವ ಮೂಲಕ ಸರ್ಕಾರ ಮಾಡದ ಕೆಲಸವನ್ನು ಮಾಡಿದ್ದಾರೆ. ಮಲೆನಾಡಿನ ಆಸ್ತಿಯಾಗದೆ, ದೇಶದ ಆಸ್ತಿಯಾಗಿ ಅನೇಕರ ಹೃದಯ ಗೆದ್ದಿದ್ದಾರೆ. ಪ್ರಾಮಾಣಿಕ ವ್ಯಕ್ತಿಯಾಗಿದ್ದ ಅವರು ರಾಜಕೀಯವಾಗಿ ಅನೇಕ ಅವಕಾಶಗಳು ಬಂದರು ಸಹ ಅವುಗಳನ್ನು ತ್ಯಜಿಸಿದರು. ಇಂತಹ ಪ್ರಾಮಾಣಿಕ ವ್ಯಕ್ತಿಯನ್ನು ಕಳೆದುಕೊಂಡಿರುವುದು ನಮ್ಮ ದುರ್ದೈವ ಎಂದು ಕಂಬನಿ ಮಿಡಿದರು.

ವಿಧಾನ ಪರಿಷತ್ತಿನ ಮಾಜಿ ಸಭಾಧ್ಯಕ್ಷ ಬಿ.ಎಲ್‌. ಶಂಕರ್‌ ಮಾತನಾಡಿ, ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದು, ಮಾನ ಮರ್ಯಾದೆಗೆ ಅಂಜಿ ಹೊರತು, ದುಡ್ಡಿನ ಕೊರತೆಯಿಂದಲ್ಲ. ದೇಶದ ಸಂವಿಧಾನದ ಕಾನೂನುಗಳು ಒಳ್ಳೆಯವರಿಗೂ ಶಿಕ್ಷೆ ನೀಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ದ್ರೋಹ ಬಗೆದು, ದೇಶ ಬಿಟ್ಟು ಹೋದವರಿಗೆ ಈ ಕಾನೂನುಗಳು ಏನೂ ಮಾಡುತ್ತಿಲ್ಲ ಎಂದು ಭಾವುಕರಾದ ಅವರು, ಸಿದ್ಧಾರ್ಥ ಅವರ ಸಾವು ಇಡೀ ಕಾಫಿ ಉದ್ಯಮಕ್ಕೆ ಬಂದಂತಹ ಸಂಕಷ್ಟವಾಗಿದೆ. ಈ ವ್ಯವಸ್ಥೆಯಲ್ಲಿರುವ ಕಾನೂನುಗಳು ಜನರ ರಕ್ಷಣೆಗೆ ಇರಬೇಕೆ ಹೊರತು, ತೊಂದರೆ ಕೊಡಲು ಅಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ. ರಾಜೇಗೌಡ, ಮಾಜಿ ಶಾಸಕ ಹೇಮಚಂದ್ರಸಾಗರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next