ಹುಣಸೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಪುರಸಭಾ ಮಾಜಿ ಉಪಾಧ್ಯಕ್ಷ ಎಸ್.ಜಯರಾಂ ಕಂಬನಿ ಮಿಡಿದರು.
ಕಾಂಗ್ರೆಸ್‌ನಿಂದ ನಗರದ ಬಸ್ ನಿಲ್ದಾಣದ ಬಳಿಯ ಕಚೇರಿ ಎದುರು ಪ್ರತಿಷ್ಠಾಪಿಸಿದ್ದ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಿದ್ಧಗಂಗಾ ಸ್ವಾಮೀಜಿಗಳು ಅಕ್ಷರ, ಆರೋಗ್ಯ, ಅನ್ನದಾಸೋಹಕ್ಕೆ ಒತ್ತುನೀಡಿ, ಲಕ್ಷಾಂತರ ಬಡ ಮಕ್ಕಳ ಬಾಳಿಗೆ ಬೆಳಕಾಗಿದ್ದರು.
ಇವರ ಅನ್ನದಾಸೋಹದಿಂದ ಪ್ರೇರಿತರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪುನರ್ ಆರಂಭಿಸಿದ್ದರಿಂದ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳವಾಯಿತು. ಶ್ರೀಗಳ ಅನ್ನದಾಸೋಹ ಕಾರ್ಯ ಜಗತ್ತಿಗೇ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೆರವಣಿಗೆ: ಕಾಂಗ್ರೆಸ್ ಕಚೇರಿಯಿಂದ ಅಲಂಕೃತ ವಾಹನದಲ್ಲಿ ಡಾ.ಶಿವಕುಮಾರಸ್ವಾಮೀಜಿಗಳ ಬೃಹತ್ ಭಾವಚಿತ್ರವನ್ನು ಹೊಸಬಸ್ ನಿಲ್ದಾಣ, ಕಲ್ಪತರು ವೃತ್ತ, ರೋಟರಿ ವೃತ್ತ, ಎಸ್.ಜೆ.ರಸ್ತೆ, ಎಚ್.ಡಿ.ಕೋಟೆ ಸರ್ಕಲ್ ವರೆಗೆ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಉಣ್ಣೆ ನೇಕಾರರ ಸಹಕಾರ ಸಂಘದ ಬಿ.ಎನ್.ಜಯರಾಂ, ಎಪಿಎಂಸಿ ಸದಸ್ಯ ಕರೀಮುದ್ದನಹಳ್ಳಿ ಬಸವರಾಜಪ್ಪ, ನಗರಸಭಾ ಸದಸ್ಯರಾದ ಮಹಮದ್ ಶಫಿ, ಜಾಕೀರ್ ಹುಸೇನ್, ಕಾಂಗ್ರೆಸ್ ಅಧ್ಯಕ್ಷರಾದ ಶಿವಯ್ಯ, ನಾರಾಯಣ್, ಯುವ ಅಧ್ಯಕ್ಷ ಬಿಳಿಕೆರೆ ಮಧು, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಮ್ಮ, ಮುಖಂಡರಾದ ಸ್ವಾಮಿಗೌಡ, ಎ.ಪಿ.ಸ್ವಾಮಿ, ಶ್ರೀನಿವಾಸ್ ರಾಘು, ಅಸ್ವಾಳು ಕೆಂಪೇಗೌಡ ಇತರರು ಹಾಜರಿದ್ದರು.