ಹೊನ್ನಾಳಿ: ಸಿದ್ಧಗಂಗಾ ಶ್ರೀಗಳ ತತ್ವಾದರ್ಶಗಳನ್ನು ಪಾಲಿಸುವುದು ಇಂದಿನ ಅಗತ್ಯವಾಗಿದೆ ಎಂದು ಡಾ| ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಹಿರೇಕಲ್ಮಠದಲ್ಲಿ ಗುರುವಾರ ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮಿಗಳಿಗೆ ಭಕ್ತಿಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ನನಗಾಗಿ ನಾನು ಬದುಕಬಾರದು, ಅನ್ಯರಿಗಾಗಿ ಬದುಕಬೇಕು ಎಂದು ಸಾರಿ ಹೇಳಿದ ಸಿದ್ಧಗಂಗಾ ಶ್ರೀಗಳು ಅದ್ಭುತ ಸಾಧನೆ ಮಾಡಿ ಮೇರು ಪರ್ವತದಂತೆ ಬೆಳೆದರು. ಸಿದ್ಧಗಂಗಾ ಶ್ರೀಗಳು ಎಂದೂ ಪ್ರಚಾರದ ಗೀಳಿಗೆ ಹೋಗದೆ ಕಾಯಕಕ್ಕೆ ಅಂಟಿಕೊಂಡವರು. ಹೆಚ್ಚು ಮಾತನಾಡದೆ ಸದಾ ಕ್ರಿಯಾಶೀಲರಾಗಿ ಮಾತು ಸಾಧನೆಯಾಗಬಾರದು ಸಾಧನೆ ಮಾತಾಗಬೇಕು ಎನ್ನುವಂತೆ ಬಾಳಿದ ಮಹಾನ್ ಸಂತ ಎಂದು ಬಣ್ಣಿಸಿದರು.
ಮಕ್ಕಳಲ್ಲಿ ದೇವರನ್ನು ಕಾಣುತ್ತೇವೆ. ಅದರಂತೆ ಮಕ್ಕಳನ್ನು ಪ್ರೀತಿಸಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡು ನಡೆದಾಡುವ ದೇವರೆನಿಸಿಕೊಂಡವರು ಎಂದು ನುಡಿದರು.
ಸಿದ್ಧಗಂಗಾ ಮಠಕ್ಕೆ ಬಂದಂತಹ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿ ತೆರಳುತ್ತಿದ್ದರು. ಇದಕ್ಕೆ ಕಾರಣೀಕರ್ತರು ಶ್ರೀಗಳು ಎಂದ ಅವರು, ಭಕ್ತರಿಂದ ಮಠ. ಮಠದಿಂದ ಭಕ್ತರಲ್ಲ ಎನ್ನುವ ತತ್ವ ಹೊಂದಿ ನಾಡಿಗೆ ಬೆಳಕಾದ ಸ್ವಾಮೀಜಿ ಡಾ| ಸಿದ್ಧಗಂಗಾ ಶ್ರೀಗಳು ಎಂದು ಹೇಳಿದರು.
ಚನ್ನಪ್ಪಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರುಮಠ ಮಾತನಾಡಿ, ಅನ್ನ, ಅಕ್ಷರ ಮತ್ತು ಆಶ್ರಯ ಕೊಟ್ಟ ನಾಡಿನ ನಡೆದಾಡುವ ದೇವರು ಡಾ| ಸಿದ್ಧಗಂಗಾ ಶ್ರೀಗಳು ತ್ರಿವಿಧ ದಾಸೋಹಿಗಳಾದರು ಎಂದು ಹೇಳಿದರು.
ಚನ್ನಪ್ಪಸ್ವಾಮಿ ವಿದ್ಯಾಪೀಠದ ಆಡಳಿತಾಧಿಕಾರಿ ಡಾ| ಎಚ್.ಜಯಪ್ಪ, ನಿರ್ದೇಶಕರಾದ ಎಚ್.ಆರ್. ಬಸವರಾಜಪ್ಪ, ಚನ್ನೇಶಯ್ಯ, ನಿವೃತ್ತ ಮುಖ್ಯ ಶಿಕ್ಷಕರಾದ ಚನ್ನಬಸಯ್ಯ, ವಿಜಯಾನಂದಸ್ವಾಮಿ ಮಾತನಾಡಿದರು. ವಿದ್ಯಾಪೀಠದ ನಿರ್ದೇಶಕರಾದ ಕೋರಿ ಮಲ್ಲಿಕಾರ್ಜುನಪ್ಪ, ಕುಂಬಾರ ವೀರಭದ್ರಪ್ಪ ಉಪಸ್ಥಿತರಿದ್ದರು.