Advertisement
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವೀರಶೈವ ಸಮಾಜದಿಂದ ಶ್ರದ್ಧಾಂಜಲಿ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಸೋಮವಾರ ಪೇಟೆ ಮಠದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯರು, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗೆ ಸರಿಸಾಟಿ ಯಾರೂ ಇಲ್ಲ. ಗಗನಕ್ಕೆ ಗಗನ, ಸಮುದ್ರಕ್ಕೆ ಸಮುದ್ರ ಹೇಗೆ ಸಾಟಿಯೋ. ಹಾಗೆ ಅವರಿಗೆ ಅವರೇ ಸಾಟಿ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕಿದೆ ಎಂದರು.
Related Articles
Advertisement
ನಗರದ ಜೆಡಿಎಸ್ ಕಚೇರಿಯಲ್ಲಿಯೂ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರು, ಶ್ರೀಗಳನ್ನು ಕಳೆದುಕೊಂಡ ನಾಡು ಅಕ್ಷರಶಃ ಅನಾಥವಾಗಿದೆ ಎಂದು ಅಭಿಪ್ರಾಯಪಟ್ಟರು.
ತಾಲೂಕಿನ ದೇವನಪಲ್ಲಿ ಗ್ರಾಮದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಠದ ಹಳೆ ವಿದ್ಯಾರ್ಥಿ ಕೆ.ರವಿ, ಡಿ .ಶಿವಾನಂದ, ಕೆ.ಈರೇಶ, ಕೆ.ಉರುಕುಂದ, ಸತ್ಯನಾರಾಯಣ, ರಾಮು, ರಾಜಪ್ಪ, ರಾಮುನಾಯಕ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.
ಗಡಿಗ್ರಾಮದಲ್ಲೂ ಶ್ರದ್ಧಾಂಜಲಿ: ಗಡಿ ಗ್ರಾಮವಾದ ಕೃಷ್ಣ ಪ್ರಾಂತದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಎಲ್ಲರೂ ಗೌರವ ನಮನ ಸಲ್ಲಿಸಿದರು. ನಡೆದಾಡುವ ದೇವರೆಂದು ಖ್ಯಾತಿ ಪಡೆದಿದ್ದ ಅವರ ಸಾಧನೆ ಸಣ್ಣದಲ್ಲ. ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಕೇವಲ ಕರ್ನಾಟಕಕ್ಕೆ ಅಷ್ಟೇ ಅಲ್ಲ ಸಂಪೂರ್ಣ ದೇಶದ ವಿದ್ಯಾರ್ಥಿಗಳಿಗೂ ಪಸರಿಸಿದೆ. ಅವರನ್ನು ಕಂಡಿರುವ ನಾವೇ ಧನ್ಯರು ಎಂದು ಮುಖಂಡರು ಅಭಿಪ್ರಾಯಪಟ್ಟರು. ಜಯಪ್ರಕಾಶ, ಹಂಪಯ್ಯ, ಮಹಾದೇವ, ಬಿ ಸುರೇಶಕುಮಾರ, ನರಸಿಂಹಾಚಾರ್, ಅಮರ್ ದೀಕ್ಷಿತ್ ಸೇರಿ ಅನೇಕ ಪಾಲ್ಗೊಂಡಿದ್ದರು.
ತುಮಕೂರಿನತ್ತ ಪಯಣ: ತುಮಕೂರು ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾದ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ತುಮಕೂರಿನತ್ತ ಪಯಣ ಬೆಳೆಸಿದರು. ಜಿಲ್ಲೆಯ ಸುಮಾರು 2 ಸಾವಿರಕ್ಕೂ ಅಧಿಕ ಮಕ್ಕಳು ಪ್ರಸ್ತುತ ಶ್ರೀಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಸಹಸ್ರಾರು ವಿದ್ಯಾರ್ಥಿಗಳು ಶ್ರೀಮಠದಲ್ಲಿ ಅಧ್ಯಯನ ಮಾಡಿ ಈಗ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲ ಮಂಗಳವಾರ ಶ್ರೀಗಳ ಅಂತಿಮ ದರ್ಶನಕ್ಕೆ ತೆರಳಿದರು. ಇನ್ನು ವ್ಯಾಸಂಗ ಮಾಡುತ್ತಿರುವ ಮಕ್ಕಳ ಪಾಲಕರು ಕೂಡ ಶ್ರೀಮಠದತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.