ಬೆಂಗಳೂರು:”ಸಿದ್ದರಾಮೋತ್ಸವ ನಮಗೆ ದೊಡ್ಡ ಪ್ರಶ್ನೆ ಅಲ್ಲ,ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಅವರಿಗಿಂತ ಜನಪ್ರಿಯ ಎಂದು ತೋರಿಸಲು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಾಕತ್ ತೋರಿಸೋದು ಅವರಿಗೆ ಅನಿವಾರ್ಯ.ನಮಗೆ ಜನಸೇವೆ ಮಾಡೋದಷ್ಟೇ ಉದ್ದೇಶ” ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗುರುವಾರ ಹೇಳಿಕೆ ನೀಡಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ಮತ್ತೆ ಪಕ್ಷ ಅಧಿಕಾರಕ್ಕೆ ತರಲು ನಾವು ಪ್ರಯತ್ನ ಮಾಡುತ್ತಿದ್ದೇವೆ.ನಮ್ಮ ಸಾಧನೆಗಳನ್ನ ಜನರ ಮುಂದೆ ಇಡಲು ನಿರ್ಧಾರ ಮಾಡಿದ್ದೇವೆ. ಪ್ರತೀ ಹಳ್ಳಿಗೆ ತೆರಳಿ ನಮ್ಮ ವಿಚಾರ ಮುಟ್ಟಿಸುತ್ತೇವೆ. ಇದು ವಾಡಿಕೆಯ ಸಭೆ. ಮುಂದಿನ ಚುನಾವಣೆ ಬಗ್ಗೆ ನಮ್ಮ ತಯಾರಿ ನಡೆಯುತ್ತಿದೆ. ಪ್ರಧಾನಿ ನೇತೃತ್ವದಲ್ಲಿ 100% ಉತ್ತಮ ಸರ್ಕಾರ ನಡೆಯುತ್ತಿದೆ.ರಾಜ್ಯಗಳಲ್ಲಿ ಕೂಡ ಉತ್ತಮ ಆಡಳಿತ ನೀಡುತ್ತೇವೆ ಎಂದರು.
ಸಿಎಂ ಬದಲಾವಣೆ ವಿಚಾರದ ಕುರಿತಾದ ಪ್ರಶ್ನೆಗೆ ಗರಂ ಆದ ಸಿಂಗ್,ಈ ಪ್ರಶ್ನೆಯನ್ನು ಮಾಧ್ಯಮ ಕೇಳಬಾರದು. ಇದು ಸರಿಯಾದ ಪ್ರಶ್ನೆಯಲ್ಲ ಎಂದರು.
ಸಚಿವ ಮಾಧುಸ್ವಾಮಿ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ಕಾಂಗ್ರೆಸ್ ಸಂಚು ಮಾಡುವ ಪಕ್ಷ.ಇದು ಸತ್ಯವಾ ಇಲ್ಲವಾ ಅನ್ನೋದನ್ನ ಪರಿಶೀಲಿಸಬೇಕು.ಕಾಂಗ್ರೆಸ್ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಹೇಳುತ್ತೇನೆ, ಈ ಬಗ್ಗೆ ಚಿಂತೆ ಮಾಡಬೇಡಿ. ಕಾಂಗ್ರೆಸ್ ಪಕ್ಷದವರು ಕಾಲ್ ರೆಕಾರ್ಡ್ ಮಾಡಿ ಈ ರೀತಿ ಹರಿಬಿಡುತ್ತಾರೆ. ಮಿಸ್ ಲೀಡ್ ಮಾಡುತ್ತಿದ್ದಾರೆ ಎಂದರು.
ಸಿಎಂ ಬಸವರಾಜ್ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ.ಬಡವರಿಗೆ, ರೈತರಿಗೆ ಉತ್ತಮ ಯೋಜನೆ ನೀಡಿದ್ದಾರೆ.ಯಾವುದೋ ಒಂದು ವಿಚಾರ ಇಟ್ಟುಕೊಂಡು ದೊಡ್ಡದು ಮಾಡುತ್ತಿದ್ದಾರೆ ಎಂದರು.ಕ್ಯಾಬಿನೆಟ್ ವಿಸ್ತರಣೆ ಸಿಎಂಗೆ ಬಿಟ್ಟ ವಿಚಾರ. ಸಿಎಂ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ.ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಬಿಜೆಪಿ ಕಾರ್ಯಕರತರು ಎಸೆದ ಕುರಿತಾಗಿನ ಪ್ರಶ್ನೆಗೆ ನಾನು ಅದನ್ನ ನೋಡಿಲ್ಲ. ಆ ಬಗ್ಗೆ ನನಗೆ ಗೊತ್ತಿಲ್ಲ ಎಂದರು.