Advertisement

ಸಿದ್ದು ವರ್ಸಸ್‌ ಎಚ್‌ಡಿಕೆ: ಜಾತಿಯನ್ನು ಯಾರೂ ಗುತ್ತಿಗೆ ತೆಗೆದುಕೊಂಡಿಲ್ಲ- ಸಿದ್ದು

12:05 AM Oct 12, 2020 | sudhir |

ಬೆಂಗಳೂರು: ಉಪ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌. ಡಿ. ಕುಮಾರಸ್ವಾಮಿ ನಡುವಿನ ಮಾತಿನ ಸಮರ ತಾರಕಕ್ಕೇರಿದೆ.

Advertisement

ಯಾರೂ ಜಾತಿಯನ್ನು ಗುತ್ತಿಗೆ ತೆಗೆದು ಕೊಂಡಿಲ್ಲ ಎಂದು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರತ್ತ ಮಾತಿನ ಬಾಣ ಎಸೆದಿದ್ದಾರೆ. ಅದಕ್ಕೆ ಪ್ರತಿಯಾಗಿ ಕುಮಾರ ಸ್ವಾಮಿಯವರು, ಸಿದ್ದರಾಮಯ್ಯ ಶತಮಾ ನದ ಮಹಾನ್‌ ಸುಳ್ಳುಗಾರ ಎಂದಿದ್ದಾರೆ.

“ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿಗೆ ಚುನಾವಣೆ ಹತ್ತಿರ ಬಂದಾಗ ಜಾತಿ ನೆನಪಾಗುತ್ತದೆ. ಮತದಾರರು ಕುಮಾರಸ್ವಾಮಿ ಅಂದುಕೊಂಡಷ್ಟು ದಡ್ಡರಲ್ಲ. ಒಕ್ಕಲಿಗರು ಕುಮಾರಸ್ವಾಮಿ ಒಬ್ಬರನ್ನೇ ಹಿಂಬಾಲಿಸುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ಯಾವ ನಾಯಕರು ಯಾವುದೇ ಜಾತಿಯನ್ನು ಗುತ್ತಿಗೆ ತೆಗೆದುಕೊಂಡಿಲ್ಲ. ಮತದಾರರಿಗೆ ಅವರದ್ದೇ ಆದ ತಿಳಿವಳಿಕೆ ಇದೆ. ಕುಮಾರಸ್ವಾಮಿ ಹೇಳಿದ ತತ್‌ಕ್ಷಣ ಜಾತಿ ಪರಿಣಾಮ ಬೀರುವುದಿಲ್ಲ. ಹಾಗೆ ಆಗುವುದಿದ್ದರೆ ಮಂಡ್ಯದಲ್ಲಿ ಕುಮಾರಸ್ವಾಮಿ ಪುತ್ರ ಯಾಕೆ ಸೋತಿದ್ದರು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ :ಟ್ರಂಪ್ ಗೆ ಕೋವಿಡ್ : ದೇವರಂತೆ ಆರಾಧಿಸುತ್ತಿದ್ದ ತೆಲಂಗಾಣದ ಅಭಿಮಾನಿ ಹೃದಯಾಘಾತದಿಂದ ಸಾವು

Advertisement

ಸುಳ್ಳು ಹೇಳಿದ ಸಿದ್ದು: ಎಚ್‌ಡಿಕೆ
ಬಿಜೆಪಿ ಸರಕಾರದ ವಿರುದ್ದ ಅವಿಶ್ವಾಸ ಮಂಡನೆ ಸಂಬಂಧ ಜೆಡಿಎಸ್‌ ಜತೆ ಚರ್ಚೆ ನಡೆಸಿದ್ದೆವು. ಆದರೆ ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರಿಂದ ಬೆಂಬಲ ಸಿಗಲಿಲ್ಲ ಎಂದು ಸಿದ್ದರಾಮಯ್ಯ ಹಸಿ ಸುಳ್ಳು ಹೇಳಿದ್ದಾರೆ. ಆ ಮೂಲಕ ಶತಮಾನದ ಮಹಾ ಸುಳ್ಳುಗಾರ ಎಂದೆನಿಸಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕಳೆದ ಶತಮಾನದಲ್ಲಿ ಕಾಂಗ್ರೆಸ್‌ನ ಮಾಜಿ ಸಿಎಂ ಒಬ್ಬರಿಗೆ ಅಂಟಿದ್ದ ಮಹಾನ್‌ ಸುಳ್ಳುಗಾರ ಎಂಬ ಕಳಂಕವನ್ನು ಸಿದ್ದರಾಮಯ್ಯ ಕಸಿದು ಕೊಂಡಿದ್ದಾರೆ ಎಂದರು.

ಮಂಡ್ಯದ ಮೂಲಕ ಇಂಡಿಯಾ ಹಿಡಿ ಯುವ ಕನಸು ಕಾಣುತ್ತಿರುವ ಕಾಂಗ್ರೆಸಿಗರು ಅನ್ನದಾತನ ಅಸ್ತ್ರ ಬಳಸಿದರೆ ಮಂಡ್ಯದ ಮಣ್ಣಿನ ಮಕ್ಕಳು ತಕ್ಕ ಪಾಠ ಕಲಿಸಲಿದ್ದಾರೆ. ಅನ್ನದಾತರ ಬಗ್ಗೆ ಜೆಡಿಎಸ್‌ಗೆ ಕರುಳ ಬಳ್ಳಿಯ ಸಂಬಂಧವಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ.

ಇದನ್ನೂ ಓದಿ :ಗುಡ್ ನೈಟ್ ಲಿಕ್ವಿಡ್ ಕುಡಿದು ಅಸ್ವಸ್ಥಗೊಂಡ ಎರಡು ವರ್ಷದ ಮಗು! ಅಪಾಯದಿಂದ ಪಾರು

ಬಾಯಿ ಚಪಲಕ್ಕೆ ಸುಳ್ಳುಗಳನ್ನು ಹೇಳುವ ಚಾಳಿಯನ್ನು ಸಿದ್ದರಾಮಯ್ಯ ಇನ್ನಾದರೂ ಬಿಡಬೇಕು. ಸಂತೆ ಭಾಷಣ ಮಾಡುವ ಸಿದ್ದರಾಮಯ್ಯ ವಿದೂಷಕನಂತೆ ಜೆಡಿಎಸ್‌ ವಿರುದ್ಧ ಹರಿ ಹಾಯುತ್ತಿರುವುದು ವಿಪಕ್ಷ ನಾಯಕನಿಗೆ ಭೂಷಣವಲ್ಲ ಎಂದು ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.

“ನಾನು ಚುನಾವಣೆ ಬಂದಾಗ ಜಾತಿ ಕಾರ್ಡ್‌ ಪ್ಲೇ ಮಾಡುತ್ತೇನೆ ಎಂದು ಮೂದಲಿಸುವ ಸಿದ್ದರಾಮಯ್ಯ ಅವರು ಅಹಿಂದ ರಾಮಯ್ಯ ಆಗಿದ್ದು ಏಕೆ? ನಕಲಿ ಸಮಾಜವಾದಿಯ ಅಹಿಂದ ಮುಖಂಡ ಇಡೀ ನಾಡಿಗೆ ಗೊತ್ತಿದೆ. “ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತು. ಕೊಂದಹರೆಂಬುದನರಿಯದೆ ಬೆಂದ ಒಡಲ ಹೊರೆವುತ್ತಲ್ಲದೆ ಅದಂದೆ ಹುಟ್ಟಿತ್ತು, ಅದಂದೆ ಹೊಂದಿತ್ತು. ಕೊಂದವರುಳಿವರೆ ಕೂಡಲ ಸಂಗಮದೇವ’ ಎಂದು ಬಸವಣ್ಣನವರ ವಚನದ ಮೂಲಕ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಟ್ವೀಟ್‌ ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ದೊಡ್ಡವರು: ಡಿಕೆಶಿ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಹಿರಿಯರು ಮತ್ತು ಅನುಭವಸ್ಥರು. ಅವರ ಮಾತಿಗೆ ಪ್ರತಿಕ್ರಿಯಿಸುವುದಿಲ್ಲ. ಅವರಿಗೆ ಹೇಗೆ ಬೇಕೋ ಹಾಗೆ ಚುನಾವಣೆ ಮಾಡಲಿ. ನಾನು ಯಾರನ್ನೂ ನಿಂದಿಸಿಲ್ಲ. ನಿಂದಿಸುವುದೂ ಇಲ್ಲ. ನಾನು ಒಳ್ಳೆಯದು ಮಾಡಿದ್ದರೆ ದೇವರು ನನಗೆ ಒಳ್ಳೆಯದು ಮಾಡಲಿ. ನಾನು ತಪ್ಪು ಮಾಡಿದ್ದರೆ ಶಿಕ್ಷೆ ನೀಡಲಿ. ಅದನ್ನು ಅನುಭವಿಸಲು ಸಿದ್ಧ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next