Advertisement

ಕೃಷಿಗೆ ಮಾರಕವಾದ ಕಾಯ್ದೆ ಹಿಂಪಡೆಯದಿದ್ದರೆ ರೈತರ ದಂಗೆ ಖಚಿತ : ಸರಕಾರಕ್ಕೆ ಸಿದ್ದು ಎಚ್ಚರಿಕೆ

06:06 PM Jan 20, 2021 | Team Udayavani |

ಬೆಂಗಳೂರು : ಕೃಷಿ ಕ್ಷೇತ್ರಕ್ಕೆ ಮಾರಕವಾದ ಕಾಯಿದೆಗಳನ್ನು ವಾಪಸ್ ಪಡೆಯದಿದ್ದರೆ ರೈತರು ದಂಗೆ ಏಳುವುದು ಖಚಿತ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತ ವಿರೋಧ ಕಾಯಿದೆಗಳನ್ನು ಜಾರಿಗೆ ತಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಜನತೆ ಮುಂಬರುವ ಚುನಾವಣೆಯಲ್ಲಿ ಜನತೆ ಮನೆಗೆ ಕಳಹಿಸುವುದು ಖಚಿತ ಎಂದರು.

ದೇಶದ ಜನತೆ ಎಂದೂ ಅನುಭವಿಸದ ಕಷ್ಟಗಳನ್ನು ಇದೀಗ ಅನುಭವಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯಿದೆಗಳು ನಮಗೆ ಬೇಡ. ಅದರಿಂದ ನಮಗೆ ಅನುಕೂಲ ಇಲ್ಲ ಎಂದು ಜನತೆ ಒಕ್ಕೊರಲಿನಿಂದ ಹೇಳುತ್ತಿದ್ದಾರೆ.

ಕಳೆದ 58 ದಿನಗಳಿಂದ ರೈತರು ದೆಹಲಿಯಲ್ಲಿ ಹಗಲು, ರಾತ್ರಿ ಎನ್ನದೆ, ಚಳಿ, ಗಾಳಿ, ಮಳೆ, ಬಿಸಿಲು ಲೆಕ್ಕಿಸದೆ ಚಳವಳಿ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಮನುಷ್ಯತ್ವ ಇದ್ದಿದ್ದರೆ ಅವರ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದಿತ್ತು. ಹತ್ತು ಬಾರಿ ರೈತರ ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದೆ. ಆದರೆ, ಈ ವರೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿಲ್ಲ. ಕೇಂದ್ರದ ಹಠಮಾರಿ ಧೋರಣೆ ಇದಕ್ಕೆ ಕಾರಣ.

ಇದನ್ನೂ ಓದಿ:ನೀತಿ ಆಯೋಗ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ: ಶೆಟ್ಟರ್‌ ಹರ್ಷ

Advertisement

ರೈತರು ತಮ್ಮ ಒತ್ತಾಯಕ್ಕೆ ಬದ್ಧರಾಗಿದ್ದಾರೆ. ಅವರ ಬೇಡಿಕೆ ನ್ಯಾಯಯುತವಾಗಿದೆ. ಹೀಗಾಗಿಯೇ ಸುಪ್ರೀಂಕೋರ್ಟ್ ಮೂರು ಕಾಯಿದೆಗಳಿಗೆ ತಡೆ ಆದೇಶ ನೀಡಿದೆ. ಕಾಯಿದೆಗಳು ಸಂವಿಧಾನಬದ್ಧವಾಗಿ ಇದ್ದಿದ್ದರೆ ನ್ಯಾಯಾಲಯ ತಡೆಯಾಜ್ಞೆ ನೀಡುತ್ತಿರಲಿಲ್ಲ. ರೈತರು ದಂಗೆ ಏಳಲು ಅವಕಾಶ ಮಾಡಿಕೊಡಬೇಡಿ ಎಂದು ನಾನು ಸೂಚ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಲು ಬಯಸುತ್ತೇನೆ. ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಈ ಹಿಂದೆ ದೇಶದ ಜನತೆ ದಂಗೆ ಎದ್ದಿದ್ದರು. ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಎರಡನೇ ಸ್ವಾತಂತ್ರ್ಯ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದರು.

ನಮ್ಮ ಹೋರಾಟ ಕೇವಲ ಭಾಷಣ ಮಾಡಿ ಮುಗಿಸುವುದಲ್ಲ. ಕಾಯಿದೆಗಳನ್ನು ವಾಪಸ್ ಪಡೆಯುವ ವರೆಗೆ ನಿರಂತರವಾಗಿ ಹೋರಾಟ ನಡೆಸುವ ಅಗತ್ಯವಿದೆ. ಪೊಲೀಸರು ನಮ್ಮನ್ನು ಬಂಧಿಸಿ ಜೈಲಿಗೆ ಕಳುಹಿಸಿದರೆ ಅದಕ್ಕೂ ನಾವು ತಯಾರಾಗಿ ಇರಬೇಕು ಎಂದು ಸಿದ್ದರಾಮಯ್ಯ ಅವರು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next