ಬೆಂಗಳೂರು: ಬಹುನಿರೀಕ್ಷಿತ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಗೆ ತಡೆ ಬಿದ್ದಿದ್ದು, ಸಿದ್ದರಾಮಯ್ಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳದ ಹೊರತು ಪಟ್ಟಿಗೆ ಬಿಡುಗಡೆಯಾಗದು ಎನ್ನಲಾಗುತ್ತಿದೆ.
ವರುಣಾ, ಕೋಲಾರ, ಬಾದಾಮಿ, ಕಡೂರು ಹೀಗೆ ಸಿದ್ದರಾಮಯ್ಯ ಸ್ಪರ್ಧಿ ಸುವ ಕ್ಷೇತ್ರಗಳ ಬಗ್ಗೆ ಗೊಂದಲ ಮುಂದುವರಿದಿದ್ದು, ಯುಗಾದಿಯಂದು ಬಿಡುಗಡೆಯಾಗ ಬೇಕಾಗಿದ್ದ ಪಟ್ಟಿಗೆ “ಗ್ರಹಣ’ ಬಡಿದಂತಾಗಿದೆ.
ಕಡೂರಿನಲ್ಲಿ ಸ್ಪರ್ಧಿಸುವ ಬಗ್ಗೆಯೂ ಆಪ್ತರು ಅಲ್ಲಿನ ನಾಯಕರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಕುರುಬ ಹಾಗೂ ಉಪ್ಪಾರ ಮತದಾರರು ಹೆಚ್ಚಾಗಿರುವುದರಿಂದ ಅಲ್ಲಿ ಸ್ಪರ್ಧಿಸಬಹುದೆಂಬ ವಾದ ಇದೆ. ಆದರೆ ಮಲೆನಾಡು-ಕರಾವಳಿ ಭಾಗದಲ್ಲಿ ಬಿಜೆಪಿ ಹಿಂದುತ್ವ ಪ್ರಯೋಗ, ಜತೆಗೆ ಅಲ್ಲಿ ನಾಲ್ಕೈದು ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ. ಹೀಗಾಗಿ ಆ ಕ್ಷೇತ್ರವೂ ಸುರಕ್ಷಿತವಲ್ಲ ಎಂಬ ಇನ್ನೊಂದು ಅಭಿಪ್ರಾಯವೂ ಇದೆ.
ಈ ಬಾರಿ ಎರಡು ಕಡೆ ಸ್ಪರ್ಧಿಸಲು ಸಿದ್ದರಾಮಯ್ಯರಿಗೆ ಹೈಕಮಾಂಡ್ ಅವಕಾಶ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
Related Articles
ಈ ನಡುವೆ ಸಿದ್ದರಾಮಯ್ಯ ಶುಕ್ರವಾರ ಬಾದಾಮಿಗೆ ಪ್ರವಾಸ ಕೈಗೊಂಡಿರುವುದು ಕುತೂಹಲ ಮೂಡಿಸಿದೆ. ಅಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಯಲ್ಲಿ ಭಾಗವಹಿಸಿದ ಬಳಿಕ ರಾಮದುರ್ಗ ಕ್ರಾಸ್‌ನಿಂದ ಎಪಿಎಂಸಿ ಆವರಣದವರೆಗೆ 2 ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ. ಕ್ಷೇತ್ರ ಆಯ್ಕೆಗೆ ಮುನ್ನ ಬಾದಾಮಿ ಪ್ರವಾಸ ಕೈಗೊಂಡಿರುವುದು ವಿಶೇಷ.
ಮಾಜಿ ಮುಖ್ಯಮಂತ್ರಿ, ಶಾಸಕಾಂಗ ಪಕ್ಷದ ನಾಯಕರು ತಾವು ಸ್ಪರ್ಧಿ ಸುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ವಿಳಂಬ ಮಾಡಿದಷ್ಟೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತೂ ಕೇಳಿಬರುತ್ತಿದೆ.
ಸ್ಪರ್ಧೆ ಬೇಡ: ಲಾಡ್
ಸಿದ್ದರಾಮಯ್ಯ ಈ ಸಲ ಸ್ಪರ್ಧಿಸದೆ ರಾಜ್ಯ ಪ್ರವಾಸ ಕೈಗೊಂಡು ಪ್ರಚಾರ ನಡೆಸುವುದು ಸೂಕ್ತ. ಜತೆಗೆ ಡಿ.ಕೆ.ಶಿವಕುಮಾರ್ ಕೂಡ ಇದೇ ಹಾದಿ ತುಳಿಯಬೇಕು ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ. ಇವರಿಬ್ಬರು ಸ್ಪರ್ಧಿಸಿ ಒಂದು ಕ್ಷೇತ್ರಕ್ಕೆ ಸೀಮಿತವಾಗಬಾರದು ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಕಾಂಗ್ರೆಸ್ ಗೆಲ್ಲಿಸಿ ನನ್ನನ್ನು ಸಿಎಂ ಮಾಡ್ರಪ್ಪ: ಡಿಕೆಶಿ
ನೆಲಮಂಗಲ: ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ, ನನ್ನನ್ನು ಮುಖ್ಯಮಂತ್ರಿ ಮಾಡ್ರಪ್ಪ, ಎಲ್ಲರೂ ಒಟ್ಟಾಗಿ ನಿಂತು ಕೆಲಸ ಮಾಡಿ ಎಂದು ಹೇಳುವ ಮೂಲಕ ಪಕ್ಷದ ಪರ ಬಲವಾಗಿ ನಿಲ್ಲುವಂತೆ ಕಾರ್ಯಕರ್ತರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಮಾಜಿ ಸಚಿವ ಅಂಜನಮೂರ್ತಿ ಅವರ ಅಂತಿಮ ದರ್ಶನ ಪಡೆದು ನಿರ್ಗಮಿಸುತ್ತಿದ್ದಾಗ ರಸ್ತೆ ಮಧ್ಯದಲ್ಲಿ ಕಾರನ್ನು ಸುತ್ತುವರಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಹೆಗಲ ಮೇಲೆ ಕೈ ಹಾಕಿಕೊಂಡು ಅವರು ಮಾತನಾಡಿದರು.