ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೃದಯದ ರಕ್ತ ಪರಿಚಲನೆಯಲ್ಲಿ ವ್ಯತ್ಯಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ್ಯಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಸದ್ಯ ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರು ಸಿದ್ದರಾಮಯ್ಯ ಅವರ ಹೃದಯ ರಕ್ತನಾಳಕ್ಕೆ ಸ್ಟೆಂಟ್ ಅಳವಡಿಕೆ ಮಾಡಿದ್ದು, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಮುಂದುವರೆಸಿದ್ದಾರೆ. ಆರೋಗ್ಯ ಚೇತರಿಕೆ ಕಂಡಿದ್ದು, ಗುರುವಾರ ಸಂಜೆ ವೇಳೆಗೆ ಆಸ್ಪತ್ರೆಯಿಂದ ಡಿಸಾcರ್ಜ್ ಮಾಡಲಿದ್ದು, ಒಂದು ವಾರ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮಂಗಳವಾರ ಸಿದ್ದರಾಮಯ್ಯ ಅವರ ರಕ್ತದೊತ್ತಡದಲ್ಲಿ ತೀವ್ರ ಏರಿಳಿತ ಉಂಟಾಗಿತ್ತು. ಬುಧವಾರ ಬೆಳಗ್ಗೆ ವ್ಯಾಯಾಮ ಮಾಡುವ ಸಂದರ್ಭದಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡಿದ್ದು ಕುಟುಂಬ ವೈದ್ಯ ಡಾ. ರವಿಕುಮಾರ್ ಅವರು ಪರೀಕ್ಷೆ ನಡೆಸಿದಾಗ ರಕ್ತದೊತ್ತಡದಲ್ಲಿ ಏರಿಳಿತ ಉಂಟಾಗಿರುವುದು ಕಂಡು ಬಂದಿದೆ. ಕೂಡಲೇ ಮಲ್ಲೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸಲಾಗಿದೆ. ಬಳಿಕ ಹೃದಯತಜ್ಞ ಡಾ. ಬಿ. ರಮೇಶ್ ಅವರು ಪರೀಕ್ಷೆ ನಡೆಸಿದಾಗ ಹೃದಯ ಪರಿಚಲನೆಯಲ್ಲಿ ಸಮಸ್ಯೆ ಇರುವುದು ಕಂಡು ಬಂದಿತ್ತು. ಹೀಗಾಗಿ ಆ್ಯಂಜಿಯೋ ಗ್ರಾಂ ನಡೆಸಲಾಗಿದೆ. ಈ ವೇಳೆ ಹೃದಯದ ರಕ್ತನಾಳದಲ್ಲಿ ಬ್ಲಾಕ್ ಕಂಡು ಬಂದಿದ್ದರಿಂದ ಆ್ಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಿ ಒಂದು ಸ್ಟೆಂಟ್ ಅಳವಡಿಸಲಾಗಿದೆ.
ಈ ಹಿಂದೆಯೂ ತಂದೆಗೆ ಹೃದಯ ಸಮಸ್ಯೆ ಕಾಣಿಸಿಕೊಂಡು ಸ್ಟಂಟ್ ಅಳವಡಿಸಿದ್ದರು. ಮತ್ತೆ ಬುಧವಾರ ಬೆಳಗ್ಗೆ ಆ್ಯಂಜಿಯೋಗ್ರಾಂ ನಡೆಸಿದಾಗ ಹೃದಯ ರಕ್ತ ನಾಳದಲ್ಲಿ ಬ್ಲಾಕೇಜ್ ಇರುವುದು ಕಂಡು ಬಂದಿತ್ತು. ಹೀಗಾಗಿ, ಆ್ಯಂಜಿಯೋ ಪ್ಲಾಸ್ಟಿ ನಡೆಸಲಾಗಿದೆ. ಉತ್ತಮವಾಗಿ ಸ್ಪಂದಿಸಿ ಶೀಘ್ರ ಚೇತರಿಸಿಕೊಳ್ಳುತ್ತಿದ್ದು, ಗುರುವಾರವೇ ಆಸ್ಪತ್ರೆಯಿಂದ ಮನೆಗೆ ವಾಪಸಾಗಲಿದ್ದಾರೆ.
– ಡಾ. ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮಯ್ಯ ಪುತ್ರ ಹಾಗೂ ಶಾಸಕ