Advertisement
ಮುಂದಿನ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವಾಗ ಮೈಸೂರು ಜಿಲ್ಲೆಯಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳ ಸ್ಥಿತಿ ಇದು. ಮೈಸೂರು ಜಿಲ್ಲೆ ಸದ್ಯದ ಮಟ್ಟಿಗೆ ಒಂದು ರೀತಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಸಮಬಲದ ಹೋರಾಟದ ಕಣದಂತಿದೆ.
Related Articles
Advertisement
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ದಾಳ ಉರುಳಿಸಲು ಆರಂಭಿಸಿದೆ. ಈ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರಿಗೆ ಸಡ್ಡು ಹೊಡೆಯಲು ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರೆ. ಮೈಸೂರು ಜಿಲ್ಲೆಯ ಮಟ್ಟಿಗಂತೂ ಜೆಡಿಎಸ್‌ಗೆ ಈಗ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಅವರೇ ಹೈಕಮಾಂಡ್ ಆಗಿದ್ದಾರೆ.
ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು 203ರ ಚುನಾವಣೆಯಲ್ಲಿ ಸ್ಪರ್ಧಿಸಬಹುದಾದ ಕ್ಷೇತ್ರಗಳಲ್ಲಿ ಹುಣಸೂರಿನ ಹೆಸರೂ ಕೇಳಿ ಬಂದಿದೆ. ಸಿದ್ದರಾಮಯ್ಯ ಹುಣಸೂರಿನಿಂದ ಸ್ಪರ್ಧಿಸಬೇಕೆಂಬುದು ಈ ಕ್ಷೇತ್ರದ ಕಾಂಗ್ರೆಸ್‌ನ ಕೆಲವು ಮುಖಂಡರ ಆಗ್ರಹವಾಗಿದೆ. ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಗುದ್ದಾಟ ಈಗಲೇ ಆರಂಭವಾಗಿದೆ.
ಕಾಂಗ್ರೆಸ್‌ನಲ್ಲಿ ಚಾಮರಾಜ, ನಂಜನಗೂಡು ಕ್ಷೇತ್ರಗಳಲ್ಲಿ ಟಿಕೆಟ್‌ಗೆ ಹೆಚ್ಚಿನ ಪೈಪೋಟಿ ಇದೆ. ಸಿದ್ದರಾಮಯ್ಯ ಅವರ ಆಪ್ತ, ಮಾಜಿ ಸಚಿವ ಡಾ| ಎಚ್.ಸಿ.ಮಹದೇವಪ್ಪ ಕ್ಷೇತ್ರ ಬದಲಿಸಿ ನಂಜನಗೂಡು (ಮೀಸಲು) ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್.ಧ್ರುವ ನಾರಾಯಣ ಅವರು ರಾಜ್ಯ ರಾಜಕಾರಣಕ್ಕೆ ಮತ್ತೆ ಪ್ರವೇಶ ಪಡೆದು ನಂಜನಗೂಡಿನಿಂದ ಸ್ಪರ್ಧಿಸಲು ಆಸಕ್ತರಾಗಿದ್ದಾರೆ. ಡಾ| ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಈ ಬಾರಿ ತಿ.ನರಸೀಪುರ (ಮೀಸಲು)ದಿಂದ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ವಿಚಾರದಲ್ಲಿ ಈ ಬಾರಿ ನಂಜನಗೂಡು ಕ್ಷೇತ್ರ ಹೆಚ್ಚು ಕುತೂಹಲ ಕೆರಳಿಸಿದೆ.
ಬಿಜೆಪಿಯಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ
ಬಿಜೆಪಿಯಲ್ಲಿ 3-4 ಅಸೆಂಬ್ಲಿ ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಇದೆ. ಗ್ರಾಮೀಣ ಭಾಗದಲ್ಲಿ ಆ ಪಕ್ಷಕ್ಕೆ ನೆಲೆ ಇಲ್ಲ. ಹುಣಸೂರು, ಪಿರಿಯಾಪಟ್ಟಣ, ತಿ.ನರಸೀಪುರ, ನರಸಿಂಹ ರಾಜ ಕ್ಷೇತ್ರಗಳು ಒಂದು ಕಾಲದಲ್ಲಿ ಬಿಜೆಪಿ ಗೆದ್ದಿದ್ದ ಕ್ಷೇತ್ರಗಳು. ಆದರೆ ಈ ಕ್ಷೇತ್ರಗಳಲ್ಲಿ ಈಗ ಬಿಜೆಪಿಗೆ ಸಮರ್ಥ ಅಭ್ಯರ್ಥಿಗಳೇ ಇಲ್ಲ. ಗ್ರಾಮೀಣ ಭಾಗದಲ್ಲಿ ಪಕ್ಷವು ದುರ್ಬಲ ಸ್ಥಿತಿಯಲ್ಲಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಗೆ ಈಗ ಒತ್ತು ನೀಡಿರುವ ಬಿಜೆಪಿಯು ಟಾರ್ಗೆಟ್-150 ಗುರಿ ಸಾಧಿಸಲು ಮೈಸೂರು ಪ್ರಾಂತ್ಯದಲ್ಲಿ ಪಕ್ಷದ ನೆಲೆ ವಿಸ್ತರಿಸಲು ಕಾರ್ಯತಂತ್ರ ರೂಪಿಸಿದೆ.
– ಕೂಡ್ಲಿ ಗುರುರಾಜ