Advertisement

ಸಿದ್ದರಾಮಯ್ಯಗೆ ಹಿರಿಯ ನಾಯಕರಿಂದ ತಿರುಗುಬಾಣ

10:24 AM Jan 22, 2020 | Team Udayavani |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಅಧಿಕಾರಕ್ಕೆ ಕತ್ತರಿ ಹಾಕಲು ಕಾರ್ಯಾಧ್ಯಕ್ಷರ ಹುದ್ದೆಗೆ ಪಟ್ಟು ಹಿಡಿದಿರುವ ಸಿದ್ದರಾಮಯ್ಯ ಹುದ್ದೆಗೆ ಕಂಟಕ ಎದುರಾಗಿದ್ದು, ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕನ ಹುದ್ದೆ ಇಬ್ಟಾಗವಾಗಲೇಬೇಕೆಂದು ಹಿರಿಯ ನಾಯಕರು “ಮಹಾರಾಷ್ಟ್ರ ಮಾದರಿ’ಗೆ ಪಟ್ಟು ಹಿಡಿದಿರುವುದು ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

Advertisement

ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕ ಎರಡೂ ಹುದ್ದೆಗಳನ್ನು ಹೊಂದಿದ್ದ ಸಿದ್ದರಾಮಯ್ಯ ಉಪ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿರುವ ಸಿದ್ದರಾಮಯ್ಯ ಈಗ ಎರಡೂ ಹುದ್ದೆ ತಮಗೇ ನೀಡಬೇಕೆಂದು ಪಟ್ಟು ಹಿಡಿದಿದ್ದು, ಅಗತ್ಯವಿಲ್ಲದಿರುವ ಕಾರ್ಯಾಧ್ಯಕ್ಷರ ಹುದ್ದೆ ಸೃಷ್ಠಿಸಲು ಪಟ್ಟು ಹಿಡಿದಿರುವ ಸಿದ್ದರಾಮಯ್ಯ ತಮ್ಮ ಬಳಿ ಎರಡು ಹುದ್ದೆ ಇದ್ದರೂ ಒಂದು ಹುದ್ದೆ ಬಿಟ್ಟು ಕೊಡಬಾರದೇಕೆ ಎಂದು ಹಿರಿಯ ನಾಯಕರು ಪ್ರಶ್ನಿಸುತ್ತಿದ್ದಾರೆ.

ಕಾರ್ಯಾಧ್ಯಕ್ಷರ ನೇಮಕ ತಿರುಗುಬಾಣ:
ಕೆಪಿಸಿಸಿಗೆ ವಿಭಾಗವಾರು ಅಧ್ಯಕ್ಷರ ನೇಮಕ ಮಾಡಿಸುವ ಮೂಲಕ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ಮುಂಚೂಣಿಯಲ್ಲಿರುವ ಡಿ.ಕೆ.ಶಿವಕುಮಾರ್‌ ಅವರ ಅಧಿಕಾರಕ್ಕೆ ಕತ್ತರಿ ಹಾಕುವ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ, ಹೈಕಮಾಂಡ್‌ ಮಟ್ಟದಲ್ಲಿ ಲಾಬಿ ಮಾಡಿ, ಡಿ.ಕೆ.ಶಿವಕುಮಾರ್‌ ಅಧ್ಯಕ್ಷರಾದರೂ ಪಕ್ಷ ತಮ್ಮ ಹಿಡಿತದಲ್ಲಿರಬೇಕು ಎನ್ನುವ ಕಾರಣಕ್ಕೆ ಕಾರ್ಯಾಧ್ಯಕ್ಷರ ಹುದ್ದೆಯ ಪ್ರಸ್ತಾಪ ಮಾಡಿದ್ದರು.

ಸಿದ್ದರಾಮಯ್ಯ ಅವರ ಕಾರ್ಯತಂತ್ರಕ್ಕೆ ಹಿರಿಯ ನಾಯಕರು ತೆರೆ ಮರೆಯಲ್ಲಿ ವಿರೋಧ ಮಾಡಿ, ಕಾರ್ಯಾಧ್ಯಕ್ಷರ ಹುದ್ದೆ ನೇಮಕ ಬೇಡ ಎಂದು ಹೈಕಮಾಂಡ್‌ ಮೇಲೆ ಒತ್ತಡ ಹೇರುವ ಕಸರತ್ತು ನಡೆಸಿದ್ದರು. ಆದರೆ, ಸಿದ್ದರಾಮಯ್ಯ ಬಹಿರಂಗವಾಗಿಯೇ ಕಾರ್ಯಾಧ್ಯಕ್ಷರ ನೇಮಕ ಅಗತ್ಯವಿದೆ ಎಂದು ಬಹಿರಂಗವಾಗಿಯೇ ಹೇಳಿದ್ದರಿಂದ ಹಿರಿಯ ನಾಯಕರೂ ಅವರ ವಿರುದ್ಧ ಬಹಿರಂಗವಾಗಿಯೇ ತಿರುಗಿ ಬೀಳುತ್ತಿದ್ದು, ಕಾರ್ಯಾಧ್ಯಕ್ಷರ ಹುದ್ದೆ ನೇಮಕಕ್ಕೆ ವಿರೋಧಿಸುವುದರ ಜೊತೆಗೆ ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕನ ಹುದ್ದೆ ವಿಭಜನೆ ಮಾಡಲೇಬೇಕು ಎಂದು ಹೇಳುತ್ತಿರುವುದು ಸಿದ್ದರಾಮಯ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಹೇಳಲಾಗುತ್ತಿದೆ.

ಮಹಾರಾಷ್ಟ್ರ ಮಾದರಿ:
ಮಹಾರಾಷ್ಟ್ರದಲ್ಲಿ ಹಿಂದೆ 2004 ರಲ್ಲಿ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಮೈತ್ರಿ ಸರ್ಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿಯೂ ಅದೇ ಮಾದರಿಯಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಸರ್ಕಾರ ರಚನೆ ಮಾಡಲಾಗಿತ್ತು. ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದ ಮೈತ್ರಿ ಸರ್ಕಾರದಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ನೀಡಲಾಗಿದ್ದ ಸಚಿವ ಸ್ಥಾನಗಳನ್ನೇ ರಾಜ್ಯದಲ್ಲಿಯೂ ಕಾಂಗ್ರೆಸ್‌ ಪಡೆದಿತ್ತು. ಅಲ್ಲಿ ಎನ್‌ಸಿಪಿಗೆ ನೀಡಿದ್ದ ಸ್ಥಾನಗಳನ್ನೇ ರಾಜ್ಯದಲ್ಲಿ ಜೆಡಿಎಸ್‌ಗೆ ಬಿಟ್ಟು ಕೊಡಲಾಗಿತ್ತು. ಅಲ್ಲದೇ ಮಹಾರಾಷ್ಟ್ರದಂತೆಯೇ ವಿಧಾನ ಪರಿಷತ್ತಿನ ಸದಸ್ಯರನ್ನು ಸಚಿವರನ್ನಾಗಿ ಮಾಡದೇ ಕೆಳಮನೆಯ ಸದಸ್ಯರೇ ಆಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಧಾನ ಸಭೆಯ ಸಭಾ ನಾಯಕರನ್ನಾಗಿ ಮಾಡಲಾಗಿತ್ತು.

Advertisement

ಅದೇ ರೀತಿ 2019 ರ ವರೆಗೂ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರತಿಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನ ಹುದ್ದೆಗಳನ್ನು ವಿಭಜಿಸಿ ಇಬ್ಬರು ನಾಯಕರಿಗೆ ಹಂಚಿಕೆ ಮಾಡಲಾಗಿತ್ತು. ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಯಾವುದೇ ರಾಜ್ಯದ ವಿಷಯದಲ್ಲಿ ಒಂದು ತೀರ್ಮಾನ ತೆಗೆದುಕೊಂಡರೆ ಅದು ದೇಶದ ಇತರ ರಾಜ್ಯಗಳಿಗೂ ಅನ್ವಯ ಆಗುತ್ತದೆ ಎನ್ನುವುದು ಮೂಲ ಕಾಂಗ್ರೆಸ್‌ ನಾಯಕರ ವಾದ.

ಹೀಗಾಗಿ ಹುದ್ದೆ ವಿಭಜನೆ ವಿಚಾರದಲ್ಲಿ ಹಿರಿಯ ನಾಯಕರು ಎಲ್ಲರೂ ಒಟ್ಟಾಗಿ ಮಹಾರಾಷ್ಟ್ರ ಮಾದರಿಯನ್ನು ಮುಂದಿಟ್ಟು ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿರುವುದು ಅವರ ಎರಡು ಹುದ್ದೆಗಳಲ್ಲಿ ಒಂದು ಹುದ್ದೆಗೆ ಕತ್ತರಿ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next