Advertisement

ಕಲ್ಯಾಣ ರಾಷ್ಟ್ರ ನಿರ್ಮಾಣಕ್ಕೆ ಸಿದ್ಧರಾಮೇಶ್ವರ ಕೊಡುಗೆ ಅನನ್ಯ

08:15 AM Jan 16, 2019 | |

ಕಲಬುರಗಿ: ಹನ್ನೆರಡನೆ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ ನಡೆದ ಸಾಮಾಜಿಕ ಸುಧಾರಣೆ ವಿಶ್ವದ ಇತಿಹಾಸದಲ್ಲಿಯೇ ಪ್ರಮುಖವಾಗಿದೆ. ಸೊಲ್ಲಾಪುರ ಮತ್ತು ಅನುಭವ ಮಂಟಪದ ಮೂಲಕ ಅನೇಕ ಜನಪರ ಕಾರ್ಯಗಳನ್ನು ಮಾಡಿರುವ ಶರಣ ಸಿದ್ಧರಾಮೇಶ್ವರರ ಸಾಮಾಜಿಕ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ. ಪಾಟೀಲ ಹೇಳಿದರು.

Advertisement

ನಗರದ ಆಳಂದ ಚೆಕ್‌ಪೋಸ್ಟ್‌ ಸಮೀಪದ ಸಿದ್ಧರಾಮೇಶ್ವರ ನಗರದಲ್ಲಿರುವ ಎಕ್ಸಲೆಂಟ್ ಗುರು ನವೋದಯ ಪರೀಕ್ಷಾ ತರಬೇತಿ ಕೇಂದ್ರದಲ್ಲಿ, ಜಗಜ್ಯೋತಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಏರ್ಪಡಿಸಿದ್ದ ಶರಣ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರಂಭದಲ್ಲಿ ಸೊಲ್ಲಾಪುರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿ ಅಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದರು. ಅನೇಕ ರಸ್ತೆ, ಕೆರೆ-ಕಟ್ಟೆಯನ್ನು ನಿರ್ಮಿಸಿ, ಜನ, ಪಶುಪಕ್ಷಿಗಳಿಗೆ ಅನುಕೂಲ ಮಾಡಿಕೊಟ್ಟರು. ನಿರಂತರ ದಾಸೋಹ ಕೈಗೊಂಡು ಬಡವರು, ನಿರ್ಗತಿಕರಿಗೆ ಸಹಾಯ ಮಾಡಿದರು. ಇದಲ್ಲದೇ ಸಾಮೂಹಿಕ ವಿವಾಹ, ಆರ್ಥಿಕ ದುರ್ಬಲರಿಗೆ ನೆರವು ಹೀಗೆ ಅನೇಕ ಸಮಾಜಮುಖೀ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ಕಾಯಕಯೋಗಿ, ಶಿವಯೋಗಿಯಾಗಿ ಅಪರೂಪದ ವ್ಯಕ್ತಿತ್ವ ಹೊಂದಿದ್ದರು. ಕಪಿಲಸಿದ್ಧ ಮಲ್ಲಿಕಾರ್ಜುನ ಎನ್ನುವ ಅಂಕಿತನಾಮದೊಂದಿಗೆ ಅನೇಕ ವಚನಗಳನ್ನು ರಚಿಸಿ, ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರಲ್ಲಿ ದಯಾಪರತೆ, ಕರುಣೆ, ಬಡವರ ಬಗ್ಗೆ ಅಪಾರವಾದ ಕಾಳಜಿಯಿತ್ತು. ಸಾಧನೆ ಹಾದಿಯಲ್ಲಿ ಬಹು ಎತ್ತರಕ್ಕೆ ಏರಿದ ಅವರು, ತಮ್ಮ ಸುತ್ತಮುತ್ತಲಿನ ಸಮಾಜದ ಸಮಷ್ಠಿಚೇತನವನ್ನು ತಮ್ಮ ಎತ್ತರಕ್ಕೆ ಏರಿಸಬೇಕೆಂಬ ಸಂಕಲ್ಪದಿಂದ ಕೆಳಗಿಳಿದು ಬಂದು ಜನಸಾಮಾನ್ಯರೊಡನೆ ಬೆರೆತು, ಅವರಿಗೆ ತಿಳಿಹೇಳಿ, ಕೈಹಿಡಿದು ನಡೆಸಿದರು. ಅನುಭವ ಮಂಟಪದ ಅಧ್ಯಕ್ಷರಾಗಿ ಅನೇಕ ಸಮಾಜಮುಖೀ ಕಾರ್ಯಗಳನ್ನು ಮಾಡಿದರು ಎಂದರು.

ಕೇಂದ್ರದ ಸಹ ನಿರ್ದೇಶಕ ವೀರೇಶ ನಾವದಗಿ ಮಾತನಾಡಿ, ಸಿದ್ಧರಾಮೇಶ್ವರರ ಜೀವನ, ಸಂದೇಶ ಮಾನವನ ವಿಕಾಸಕ್ಕೆ, ಕಲ್ಯಾಣ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.

Advertisement

ಕೇಂದ್ರದ ನಿರ್ದೇಶಕ ಪ್ರಕಾಶ ನಾಗರಾಳ, ಬಳಗದ ಸದಸ್ಯರಾದ ಸೋಮಶೇಖರ ಮೂಲಗೆ, ಬಸವರಾಜ ಪುರಾಣಿಕ, ಲಕ್ಷ್ಮೀಕಾಂತ ಶಹಾಪುರೆ, ಶ್ರೀಕಾಂತ ಹಂಗರಗಿ, ಶ್ರೀಕಾಂತ ಡೊಳ್ಳಿ, ಶಿವಕುಮಾರ ತಿಮಾಜಿ, ಪ್ರಭಾಖರ ವಾಕಡೆ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next